ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಹಸಿವು ನೀಗಿಸುವ ‘ರೋಟಿ ಟ್ರಸ್ಟ್‌‘

ಉಚಿತ ಆಹಾರ ವಿತರಣೆ ಮಾಡುವ ಸೈಯ್ಯದ್‌ ಗುಲಾಬ್‌
Published 11 ಮಾರ್ಚ್ 2024, 0:11 IST
Last Updated 11 ಮಾರ್ಚ್ 2024, 0:11 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಮತ್ತು ಅವರ ಸಂಬಂಧಿಕರ ಹಸಿವು ನೀಗಿಸುವ ಕೆಲಸವನ್ನು ರೋಟಿ ಚಾರಿಟಿ ಟ್ರಸ್ಟ್‌ ಮಾಡುತ್ತಿದೆ.

ಟ್ರಸ್ಟ್‌ನ ಸಂಸ್ಥಾಪಕ ಸೈಯ್ಯದ ಗುಲಾಬ್‌ ಎಲೆಮರೆ ಕಾಯಿಯಂತೆ ಈ ಕೆಲಸ ಮಾಡುತ್ತಿದ್ದು, ಇಂದಿರಾ ಗಾಂಧಿ ಆಸ್ಪತ್ರೆ, ರಾಜೀವ್ ಗಾಂಧಿ ಆಸ್ಪತ್ರೆ, ಸಂಜಯ್‌ ಗಾಂಧಿ ಆಸ್ಪತ್ರೆ ಮತ್ತು ನಿಮ್ಹಾನ್ಸ್‌ ಆಸ್ಪತ್ರೆಗೆ ಬರುವ ಬಡವರ ಹಸಿವು ತಣಿಸುತ್ತಿದ್ದಾರೆ.

ಪ್ರತಿದಿನ ಮಧ್ಯಾಹ್ನ 12 ಗಂಟೆಗೆ ಸಿದ್ಧಾಪುರ ಪೊಲೀಸ್‌ ಠಾಣೆಯ ಮುಂಭಾಗದಲ್ಲಿ ಹಸಿದ ನೂರಾರು ಜನ ಗುಲಾಬ್‌ ಅವರ ವಾಹನ ಬರುವ ದಾರಿ ನೋಡಿಕೊಂಡು ಕಾಯುತ್ತಾ ಕುಳಿತುಕೊಂಡಿರುತ್ತಾರೆ. ಅವರ ವಾಹನ ಬಂದು ರಾಜೀವ್‌ ಗಾಂಧಿ ಆಸ್ಪತ್ರೆಯ ಗೇಟ್‌ ಮುಂಭಾಗದಲ್ಲಿ ನಿಲ್ಲಿಸಿದ ಕೂಡಲೇ ಎಲ್ಲರೂ ಸರದಿ ಸಾಲಿನಲ್ಲಿ ನಿಂತು ಬಿಡುತ್ತಾರೆ. ಗುಲಾಬ್‌ ಅವರು ಆಹಾರದ ಪೊಟ್ಟಣಗಳನ್ನು ಅವರ ಕೈಗೆ ಇಟ್ಟು ಧನ್ಯತಾ ಭಾವ ಅನುಭವಿಸುತ್ತಾರೆ.

ಜಯನಗರದ ತಿಲಕ್‌ನಗರದ ನಿವಾಸಿ ಸೈಯ್ಯದ್‌ ಗುಲಾಬ್‌ ಅವರು ವೃತ್ತಿಯಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿ. 2016ರ ಮಾರ್ಚ್‌ನಿಂದ ಇಲ್ಲಿಯವರೆಗೂ ಮಳೆ, ಚಳಿ, ಬಿಸಿಲು ಎನ್ನದೇ ಹಬ್ಬ–ಹರಿದಿನಗಳನ್ನು ಲೆಕ್ಕಿಸದೇ ಒಂದು ದಿನವೂ ತಪ್ಪದೇ ಉಚಿತ ಆಹಾರ ವಿತರಿಸುವ ಕಾರ್ಯ ಮುಂದುವರೆಸಿದ್ದಾರೆ.

ತಮ್ಮ ಸ್ನೇಹಿತನೊಬ್ಬನ ಮಗಳು ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾಗ ಆಕೆಯನ್ನು ನೋಡಲು ಹೋಗಿದ್ದ ಸೈಯ್ಯದ್ ಗುಲಾಬ್, ರಾಜ್ಯದ ವಿವಿಧ ಭಾಗಗಳಿಂದ ಬರುವ ರೋಗಿಗಳ ಸಂಬಂಧಿಕರು ಊಟಕ್ಕಾಗಿ ಪರದಾಡುವ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದರು. ಭಾನುವಾರವಂತೂ ಆಸ್ಪತ್ರೆಯ ಕ್ಯಾಂಟೀನ್ ಕೂಡ ಮುಚ್ಚಿರುತ್ತದೆ. ಇದರಿಂದ, ಅವರೆಲ್ಲ ಹೋಟೆಲ್‍ಗಳನ್ನು ಹುಡುಕಿಕೊಂಡು ಬಹುದೂರ ನಡೆದುಕೊಂಡು ಹೋಗಬೇಕಾಗಿತ್ತು. ಇದಕ್ಕೆ ಪರಿಹಾರ ನೀಡುವ ಉದ್ದೇಶದಿಂದಲೇ ಪ್ರತಿನಿತ್ಯ ಉಚಿತ ಆಹಾರ ವಿತರಿಸುವ ಕಾಯಕಕ್ಕೆ ಗುಲಾಬ್‌ ಮುಂದಾದರು.

‘ಆರಂಭದಲ್ಲಿ ಪ್ರತಿ ಭಾನುವಾರ ಮಾತ್ರ 250ಕ್ಕೂ ಹೆಚ್ಚು ಜನರಿಗೆ ಉಚಿತ ಆಹಾರ ನೀಡಲು ಪ್ರಾರಂಭಿಸಿದೆ. ಇದನ್ನು ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದೆ. ಇದರಿಂದ, ಹಲವರು ತಮ್ಮ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ಶುಭ ಸಮಾರಂಭಗಳಲ್ಲಿ ರೋಟಿ ಟ್ರಸ್ಟ್‌ಗೆ ಸಹಾಯಹಸ್ತ ನೀಡಲು ಪ್ರಾರಂಭಿಸಿದರು. ಹೈದರಾಬಾದ್‌ನಲ್ಲಿ ಬಡವರಿಗೆ ಉಚಿತ ಆಹಾರ ವಿತರಿಸುವ ಅಜರ್‌ ಮಕ್ಕೂಸಿ ಅವರು ನನ್ನನ್ನು ಸಂಪರ್ಕಿಸಿ ವಾರಕ್ಕೊಮ್ಮೆ ಊಟ ನೀಡುವ ಬದಲು ಪ್ರತಿನಿತ್ಯ ಊಟ ನೀಡಬೇಕು. ನಿಮಗೆ ಎಲ್ಲ ರೀತಿಯ ಸಹಾಯ ಮಾಡುತ್ತೇನೆ ಎಂಬ ಭರವಸೆ ನೀಡಿ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಅಂದಿನಿಂದ ಇದುವರೆಗೂ ಈ ಕೆಲಸ ನಡೆಯುತ್ತಿದೆ’ ಎಂದು ಸೈಯ್ಯದ್ ಗುಲಾಬ್‌ ತಿಳಿಸಿದರು.

ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಆಹಾರದ ಪೊಟ್ಟಣ್ಣಗಳನ್ನು ವಿತರಿಸುತ್ತಿರುವ ರೋಟಿ ಚಾರಿಟಿ ಟ್ರಸ್ಟ್‌ನ ಸೈಯ್ಯದ್ ಗುಲಾಬ್ –ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್.ಜಿ.
ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಆಹಾರದ ಪೊಟ್ಟಣ್ಣಗಳನ್ನು ವಿತರಿಸುತ್ತಿರುವ ರೋಟಿ ಚಾರಿಟಿ ಟ್ರಸ್ಟ್‌ನ ಸೈಯ್ಯದ್ ಗುಲಾಬ್ –ಪ್ರಜಾವಾಣಿ ಚಿತ್ರ/ಪ್ರಶಾಂತ್‌ ಎಚ್.ಜಿ.
ಪ್ರತಿನಿತ್ಯ ಬಿಸಿ–ಬಿಸಿ ಊಟ ವಿತರಿಸುವ ಗುಲಾಬ್‌ ಅವರು ಕೆಲಸ ಶ್ಲಾಘನೀಯ.ನಮ್ಮಂತಹ ನೂರಾರು ಬಡವರಿಗೆ ನಿರ್ಗತಿಕರಿಗೆ ಒಂದು ಹೊತ್ತಿನ ಊಟ ಸಿಗುತ್ತಿದೆ.
ಶಾರದಮ್ಮ ರೋಗಿಯ ಸಂಬಂಧಿ
‘ಹಸಿವಿಗೆ ಜಾತಿ–ಧರ್ಮವಿಲ್ಲ’
‘ಹಸಿವಿಗೆ ಯಾವುದೇ ರೀತಿಯ ಜಾತಿ–ಧರ್ಮ ಇಲ್ಲ. ಹೊಟ್ಟೆ ಹಸಿದು ಬಂದವರಿಗೆ ಯಾವುದೇ ರೀತಿಯ ತಾರತಮ್ಯ ಮಾಡದೇ ಆಹಾರ ವಿತರಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ನಗರದ ಎಲ್ಲ ಆಸ್ಪತ್ರೆಗಳ ಮುಂಭಾಗದಲ್ಲಿ ಉಚಿತ ಆಹಾರ ವಿತರಿಸುವ ಯೋಚನೆ ಇದೆ’ ಎಂದು ಸೈಯ್ಯದ್‌ ಗುಲಾಬ್‌ ತಿಳಿಸಿದರು. ‘ವೈದ್ಯರ ಸಲಹೆಯಂತೆ ರೋಗಿಗಳಿಗೆ ಬೇಕಾದ ಗೀ ರೈಸ್‌ ಪುಲಾವ್ ಅನ್ನ ಸಾಂಬರ್‌ ಸೇರಿದಂತೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ತಯಾರಿಸಿ ವಿತರಿಸುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT