ಭಾನುವಾರ, ಮೇ 29, 2022
30 °C
ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿಗೆ ಅಭಿನಂದನೆ l ಬಿಬಿಎಂಪಿ ಚುನಾವಣೆಯಲ್ಲಿ ಗೆಲ್ಲುವ ಭರವಸೆ

ಅಂತರರಾಷ್ಟ್ರೀಯ ನಗರವಾಗಿ ಬೆಂಗಳೂರು- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬೆಂಗಳೂರನ್ನು ಅಂತರರಾಷ್ಟ್ರೀಯ ನಗರವಾಗಿಸುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನೀಡಿ ಅಂತರರಾಷ್ಟ್ರೀಯ ನಗರವನ್ನಾಗಿ ಮಾಡಿಯೇ ತೀರುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೊಮ್ಮಾಯಿ ನೇತೃತ್ವದ ಸರ್ಕಾರ ಆರು ತಿಂಗಳು ಪೂರ್ಣಗೊಳಿಸಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ನಿಶ್ಚಿತವೋ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದು ಅಧಿಕಾರ ಹಿಡಿಯುವುದು ನಿಶ್ಚಿತ. ನಮ್ಮ ಸರ್ಕಾರ ಮಾಡಿದ ಕೆಲಸಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಆಗಬೇಕಿದೆ. ಬೆಂಗಳೂರಿನ ಜನ ಖಂಡಿತಾ ನಮ್ಮನ್ನು ಬೆಂಬಲಿಸುತ್ತಾರೆ. ಎಲ್ಲರೂ ಆತ್ಮಸ್ಥೈರ್ಯದಿಂದ ಮುನ್ನಡೆಯಬೇಕು’ ಎಂದು ಬೊಮ್ಮಾಯಿ ತಿಳಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಮಾತನಾಡಿ, ಮುಖ್ಯಮಂತ್ರಿ ಬೊಮ್ಮಾಯಿ ಅವರ ಉತ್ತಮ ಯೋಜನೆಗಳ ಮೂಲಕ ಪಕ್ಷವು ರಾಜ್ಯದಲ್ಲಿ 150 ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸದರಾದ ಡಿ.ವಿ.ಸದಾನಂದ ಗೌಡ, ಪಿ.ಸಿ.ಮೋಹನ್ ಮಾತನಾಡಿದರು. ಸಚಿವರಾದ ಎಸ್.ಟಿ.ಸೋಮಶೇಖರ್‌, ಆನಂದಸಿಂಗ್‌, ಮುನಿರತ್ನ ಮುಂತಾದವರು ಭಾಗವಹಿಸಿದ್ದರು.

ಕಾರ್ಯಕ್ರಮದ ವೇಳೆ ಪದೇ ಪದೇ ವಿದ್ಯುತ್‌ ಕೈಕೊಟ್ಟಿದ್ದರಿಂದ ಮುಖ್ಯಮಂತ್ರಿಯವರು ಮುಜುಗರಕ್ಕೆ ಒಳಗಾದರು. ಬೇರೆ ದಾರಿ ಇಲ್ಲದೆ ಕತ್ತಲಲ್ಲೇ ಭಾಷಣ ಮುಗಿಸಬೇಕಾಗಿ ಬಂತು.

ಗೋವುಗಳನ್ನು ದತ್ತು ಪಡೆದ ಸಿಎಂ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ತಮ್ಮ 62ನೇ ಹುಟ್ಟುಹಬ್ಬದ ಅಂಗವಾಗಿ 11 ಹಸುಗಳನ್ನು ಆಜೀವ ದತ್ತುಪಡೆದರು.

ರಾಷ್ಟ್ರೋತ್ಥಾನ ಗೋಶಾಲೆಯ ಹಸುಗಳನ್ನು ಅವರು ದತ್ತು ಪಡೆದರು. ಬೆಳಿಗ್ಗೆ ಬೊಮ್ಮಾಯಿ ಮತ್ತು ಅವರ ಪತ್ನಿ ಚನ್ನಮ್ಮ ಹಸು, ಕರುವಿಗೆ ಪೂಜೆ ಮಾಡಿದರು. ಬಳಿಕ ಹಸುವನ್ನು ಮನೆಯಲ್ಲಿ ಕರೆದುಕೊಂಡು ಗೋಗ್ರಾಸ ನೀಡಿದರು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಇದ್ದರು. ಬಳಿಕ ಮಾತನಾಡಿದ ಅವರು, ಗೋವುಗಳನ್ನು ದತ್ತು ಪಡೆಯುವ ಯೋಜನೆಯನ್ನು ಇಡೀ ರಾಜ್ಯದಲ್ಲಿ ಜಾರಿ ಮಾಡಲಾಗುವುದು ಎಂದರು.ಬೊಮ್ಮಾಯಿ ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಂಡರು. ಬಾಲಬ್ರೂಯಿ ಅತಿಥಿಗೃಹದ ಪಕ್ಕದಲ್ಲಿರುವ ಮಾರುತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು