ಶುಕ್ರವಾರ, ಆಗಸ್ಟ್ 12, 2022
27 °C

ಕೊರೊನಾ ಜೊತೆ ಬದುಕೋಣ: ‘ಕೊರೊನಾ ಅಸುರ–ಆತ್ಮವಿಶ್ವಾಸವೇ ಸುರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸಮುದ್ರ ಮಂಥನ ವೇಳೆ ಅಸುರರು ಮತ್ತು ದೇವತೆಗಳ ನಡುವೆ ಹೋರಾಟ ನಡೆದಿತ್ತು. ಇಂತಹ ಹೋರಾಟದಲ್ಲಿ ಯಾರ ಶಕ್ತಿ ಹೆಚ್ಚಾಗುತ್ತದೋ ಅವರು ಗೆಲ್ಲುತ್ತಾರೆ. ಕೊರೊನಾ ಎಂಬ ಅಸುರಶಕ್ತಿಯ ವಿರುದ್ಧ ನಾವು ನಿರಂತರವಾಗಿ ಹೋರಾಡಲೇಬೇಕಾಗಿದೆ. ವೈರಾಣುಗಳ ಸಂಖ್ಯೆ ಹೆಚ್ಚಾದರೆ ಕೊರೊನಾದ ಶಕ್ತಿ ಹೆಚ್ಚಾಗುತ್ತದೆ. ದೈಹಿಕ–ಮಾನಸಿಕವಾಗಿ ನಾವು ಸದೃಢವಾಗಿದ್ದರೆ ನಮ್ಮ ಶಕ್ತಿ ಹೆಚ್ಚಾಗುತ್ತದೆ’ ಎನ್ನುತ್ತಾರೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಮಹಮ್ಮದ್‌ ರಫಿ ಎಸ್. ಹಕೀಂ. 

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೇ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಯಾವುದೇ ಆಸ್ಪತ್ರೆಗೆ ದಾಖಲಾಗದೆ ಮನೆಯಲ್ಲಿಯೇ ಆರೈಕೆ ಪಡೆದು ಗುಣಮುಖರಾಗಿದ್ದಾರೆ. 

‘ಕೊರೊನಾಗೆ ಔಷಧಿ ಇಲ್ಲ, ಲಸಿಕೆ ಇಲ್ಲ, ಚಿಕಿತ್ಸೆಯೂ ಇಲ್ಲ. ಆದಾಗಿಯೂ ಶೇ 95ರಷ್ಟು ಜನ ಗುಣಮುಖರಾಗಿ ಹೊರಗೆ ಬರುತ್ತಿದ್ದಾರೆ. ಇದಕ್ಕೆ ಕಾರಣ ಅವರಲ್ಲಿರುವ ರೋಗನಿರೋಧಕ ಶಕ್ತಿ. ರೋಗನಿರೋಧಕ ಶಕ್ತಿ ಎಂದರೆ ದೈಹಿಕವಾಗಿ ಸಬಲರಾಗಿರುವುದು ಮಾತ್ರವಲ್ಲ, ಮಾನಸಿಕ ಸದೃಢತೆಯೂ ಇದರಲ್ಲಿ ಸೇರಿದೆ’ ಎಂದು ಅವರು ಹೇಳುತ್ತಾರೆ. 

‘ಯಾರಿಗಾದರೂ ಕೊರೊನಾ ಸೋಂಕು ತಗುಲಿದರೆ ಸತ್ತೇ ಬಿಡುತ್ತಾರೆ ಎಂಬ ಕಲ್ಪನೆ ಮಾರ್ಚ್‌ನಲ್ಲಿ ಇತ್ತು. ಆದರೆ, ಈಗ ಕೋವಿಡ್‌ ಬಂದರೂ ನಾವು ಬದುಕಬಹುದು, ಗೆಲ್ಲಬಹುದು ಎಂಬ ವಿಶ್ವಾಸ ಬಂದಿದೆ. ಕೊರೊನಾ ಜೊತೆ ಬದುಕಲು ಇಂತಹ ಆತ್ಮವಿಶ್ವಾಸವೇ ಎಲ್ಲರಿಗೂ ಪ್ರೇರಣೆಯಾಗಬೇಕು’ ಎಂದರು. 

 ‘ವೈದ್ಯಕೀಯ ಸಿಬ್ಬಂದಿ ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಬಹುದು ಎಂದು ಸರ್ಕಾರವೇ ಹೇಳಿತ್ತು. ಕೊರೊನಾ ಪಾಸಿಟಿವ್ ಆದಾಗ ಧೈರ್ಯ ತೆಗೆದುಕೊಂಡೆ. ಜ್ವರ, ಶೀತದ ಸಮಸ್ಯೆ ಇತ್ತು. ಮೈ–ಕೈ ನೋವು ಬಂತು. ವಾಸನೆ, ರುಚಿಯ ಶಕ್ತಿ ಕಳೆದುಕೊಂಡಿದ್ದೆ. ಆದರೆ, ಈ ಲಕ್ಷಣಗಳು ಉಲ್ಬಣಗೊಳ್ಳದಂತೆ ಎಚ್ಚರ ವಹಿಸಿದೆ. ಅಲ್ಲಲ್ಲಿಯೇ ಅವುಗಳನ್ನು ಶಮನಗೊಳಿಸಿಕೊಂಡೆ. ಸಕಾರಾತ್ಮಕವಾಗಿ ಯೋಚಿಸುತ್ತಿದ್ದೆ’ ಎಂದು ಅವರು ಹೇಳುತ್ತಾರೆ. 

‘ಸೋಂಕಿನ ಬಗ್ಗೆ ಯಾರೂ ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಆದರೆ, ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು, ಮುಖ್ಯವಾಗಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಎಚ್ಚರಿಕೆ ತೆಗೆದುಕೊಳ್ಳಲೇಬೇಕು. ಮೂಗು–ಗಂಟಲು ಕಟ್ಟಿಕೊಳ್ಳಲು ಬಿಡಬಾರದು’ ಎಂದು ಅವರು ಸಲಹೆ ನೀಡುತ್ತಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು