ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಎಸ್‌ಸಿ: ಮುಂದಿನ ವರ್ಷದಿಂದ ವೈದ್ಯಕೀಯ ಶಿಕ್ಷಣ

Last Updated 7 ಅಕ್ಟೋಬರ್ 2021, 20:53 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಮುಂದಿನ ವರ್ಷದಿಂದ ವೈದ್ಯಕೀಯ ಕೋರ್ಸ್‌ಗಳನ್ನು ಆರಂಭಿಸಲಿದೆ.

ಐಐಎಸ್‌ಸಿ ನಿರ್ದೇಶಕ ಪ್ರೊ.ಗೋವಿಂದನ್‌ ರಂಗರಾಜನ್‌ ಅವರು ಬುಧವಾರ ನಡೆದ ಸಂಸ್ಥೆಯ ಘಟಿಕೋತ್ಸವದಲ್ಲಿ ಈ ವಿಷಯವನ್ನು ಪ್ರಕಟಿಸಿದರು.

‘ಭಾರತೀಯ ವಿಜ್ಞಾನ ಸಂಸ್ಥೆ ಆರಂಭದಿಂದಲೂ ವಿಜ್ಞಾನ, ಎಂಜಿನಿಯರಿಂಗ್‌ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. 12 ವರ್ಷಗಳ ಹಿಂದೆ ಸಾಕಷ್ಟು ಅಂತರ್‌ಶಿಸ್ತೀಯ ವಿಭಾಗಗಳನ್ನು ಆರಂಭಿಸಲಾಯಿತು. ಮುಂದಿನ ವರ್ಷ ಮತ್ತೊಂದು ಬದಲಾವಣೆಯನ್ನು ಮಾಡಲಿದ್ದೇವೆ. ಕಳೆದ 100 ವರ್ಷಗಳಲ್ಲಿ ಸಂಸ್ಥೆಯಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂಗ್‌ನಲ್ಲಿ ಶ್ರೇಷ್ಠತೆ ಸಾಧಿಸಲಾಗಿದೆ. ಇದೇ ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಾಲೆಯನ್ನು ಆರಂಭಿಸುವ ಯೋಜನೆ ಹಮ್ಮಿಕೊಂಡಿದ್ದೇವೆ’ ಎಂದು ಅವರು ಹೇಳಿದರು.

ಕೇಂದ್ರದ ಮಾಜಿ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್ ಅವರು ಮೇ ತಿಂಗಳಿನಲ್ಲಿ ಐಐಎಸ್‌ಸಿ, ಐಐಟಿಗಳು, ಐಸೆರ್‌ಗಳು ಮತ್ತು ಎನ್‌ಐಟಿಗಳ ನಿರ್ದೇಶಕರ ಸಭೆಯನ್ನು ನಡೆಸಿದಾಗ, ರಾಷ್ಟ್ರೀಯ ಶಿಕ್ಷಣ ನೀತಿ–2020 ಅಂಗವಾಗಿ ಐಐಎಸ್‌ಸಿ ಮತ್ತು ಐಐಟಿ ಕಾನ್ಪುರದಲ್ಲಿ ವೈದ್ಯಕೀಯ ಕೋರ್ಸ್‌ಗಳನ್ನು ಆರಂಭಿಸುವುದಾಗಿ ಪ್ರಕಟಿಸಿದ್ದರು.

ಕ್ಯಾಂಪಸ್‌ನಲ್ಲಿ ಬ್ರೈನ್‌ ಕಂಪ್ಯುಟೇಷನ್‌, ಡೆಟಾ ವಿಜ್ಞಾನ, ಬಯೋಮೆಡಿಕಲ್‌ ಸಿಸ್ಟಮ್‌ ಮತ್ತು ಸಾಧನಗಳು, ಸೈಬರ್‌ ಸೆಕ್ಯುರಿಟಿ ಅಲ್ಲದೆ, ಭವಿಷ್ಯದ ತಂತ್ರಜ್ಞಾನದ ಪ್ರಗತಿಗಾಗಿ ಅತ್ಯಂತ ಮಹತ್ವದ್ದೆನಿಸಿರುವ ಕ್ವಾಂಟಮ್‌
ಕಂಪ್ಯೂಟಿಂಗ್‌ ವಿಷಯದ ಕೋರ್ಸ್‌ ಮತ್ತು ಸಂಶೋಧನೆ ಕೂಡ ಆರಂಭಿಸಲಾಗುತ್ತದೆ ಎಂದು ರಂಗರಾಜನ್‌
ತಿಳಿಸಿದರು.

ಅಲ್ಲದೆ, ಕೋಟಕ್‌ ಎಐ–ಎಂಎಲ್‌ ಕೇಂದ್ರವನ್ನು ಹೊಸ ಕಟ್ಟಡ ಸಂಕೀರ್ಣದಲ್ಲಿ ಆರಂಭಿಸಲಾಗುತ್ತದೆ. ಇದಕ್ಕೆ ಕೋಟಕ್ ಮಹೀಂದ್ರ ಬ್ಯಾಂಕ್‌ ನೆರವು ನೀಡಲಿದೆ. ಈ ಕೇಂದ್ರದಲ್ಲಿ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌, ಮೆಷಿನ್‌ ಲರ್ನಿಂಗ್‌ ಮತ್ತು ವಿತ್ತೀಯ ತಂತ್ರಜ್ಞಾನ ಪರಿಹಾರಗಳ ಕುರಿತು ಸೃಜನಾತ್ಮಕ ಶಿಕ್ಷಣ ಮತ್ತು ಸಂಶೋಧನೆಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT