ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಕಿಯೋನಿಕ್ಸ್‌ ಅಕ್ರಮ: ತನಿಖಾ ಸಮಿತಿ ನೇಮಕ

Published 3 ಫೆಬ್ರುವರಿ 2024, 16:33 IST
Last Updated 3 ಫೆಬ್ರುವರಿ 2024, 16:33 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದಲ್ಲಿ (ಕಿಯೋನಿಕ್ಸ್‌) 2018–19ರಿಂದ 2022–223ನೇ ಆರ್ಥಿಕ ವರ್ಷಗಳ ಅವಧಿಯಲ್ಲಿ ನಡೆದಿವೆ ಎನ್ನಲಾಗಿರುವ ಅಕ್ರಮಗಳ ಕುರಿತು ತನಿಖೆ ನಡೆಸಲು ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಡಿ. ಮೀನಾ ಅಧ್ಯಕ್ಷತೆಯಲ್ಲಿ ಸಮಿತಿ ನೇಮಿಸಿ ಶನಿವಾರ ಆದೇಶ ಹೊರಡಿಸಲಾಗಿದೆ.

ಸಮಿತಿಯ ಅಧ್ಯಕ್ಷರು ತನಿಖೆ ನಡೆಸಲು ತಲಾ ಒಬ್ಬ ಹಣಕಾಸು ತಜ್ಞರು ಮತ್ತು ತಾಂತ್ರಿಕ ತಜ್ಞರನ್ನು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವರ ಅನುಮೋದನೆಯೊಂದಿಗೆ ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

2018–19ರಿಂದ 2022–23ರ ಅವಧಿಯಲ್ಲಿ ಕಿಯೋನಿಕ್ಸ್‌ನಲ್ಲಿ ನಡೆದಿರುವ ಖರೀದಿಯಲ್ಲಿ ನಿಯಮಗಳ ಪಾಲನೆ, ಭೌತಿಕವಾಗಿ ಸರಕುಗಳ ಪೂರೈಕೆಯನ್ನು ಖಾತರಿಪಡಿಸಿಕೊಂಡಿರುವುದು, ನಿಗದಿತ ಮಾನದಂಡಗಳಿಗೆ ಅನುಗುಣವಾಗಿಯೇ ಖರೀದಿ ಪ್ರಕ್ರಿಯೆ ನಡೆಸಿರುವುದು, ಹಣ ಪಾವತಿ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವಿಚಾರಣಾ ಸಮಿತಿಗೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಆದೇಶಿಸಿದೆ.

‘ತನಿಖೆಗೆ ಸೂಚಿಸಿರುವ ಅವಧಿಯಲ್ಲಿ ಸರಕುಗಳ ಖರೀದಿಯಲ್ಲಿ ಭಾರಿ ಪ್ರಮಾಣದ ಅವ್ಯವಹಾರಗಳು ನಡೆದಿವೆ ಎಂದು ಅಕೌಂಟೆಂಟ್‌ ಜನರಲ್‌ ವರದಿ ನೀಡಿದ್ದರು. ವರದಿಯನ್ನು ಪರಿಶೀಲಿಸಿದ್ದ ಕಿಯೋನಿಕ್ಸ್‌ ವ್ಯವಸ್ಥಾಪಕ ನಿರ್ದೇಶಕರು, ಖರೀದಿ ‍ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆ, ಕಳಪೆ ಗುಣಮಟ್ಟದ ಸರಕುಗಳ ಪೂರೈಕೆ, ದಾಖಲೆಗಳನ್ನು ಪರಿಶೀಲಿಸದೇ ಬಿಲ್‌ ಪಾವತಿಸಿರುವುದು ಕಂಡುಬಂದಿದೆ. ಈ ಕುರಿತು ಉನ್ನತಮಟ್ಟದ ತನಿಖೆ ನಡೆಸುವುದು ಅಗತ್ಯವಿದೆ ಎಂಬ ಶಿಫಾರಸು ಮಾಡಿದ್ದರು. ಅದರ ಅನುಸಾರ ತನಿಖೆಗೆ ಆದೇಶಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಕ್ರಮದಲ್ಲಿ ಭಾಗಿಯಾಗಿರುವ ಕಿಯೋನಿಕ್ಸ್‌ ಅಧಿಕಾರಿಗಳು, ಸಿಬ್ಬಂದಿ ಹಾಗೂ ವೆಂಡರ್‌ದಾರರನ್ನು ಪತ್ತೆಹಚ್ಚಿ ವರದಿ ಸಲ್ಲಿಸಬೇಕು.  ನಿಗಮದ ಆಡಳಿತ ಹಾಗೂ ಹಣಕಾಸು ನಿರ್ವಹಣೆಯಲ್ಲಿ ಸುಧಾರಣೆ ತರುವುದಕ್ಕೆ ಪೂರಕವಾದ ಶಿಫಾರಸುಗಳನ್ನೂ ನೀಡಬೇಕು ಎಂದು ತನಿಖಾ ಸಮಿತಿಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT