ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಸಂಪರ್ಕ: ದಕ್ಷಿಣದಲ್ಲೇ ಹೆಚ್ಚು

ನೀರು, ಒಳಚರಂಡಿ ಸಂಪರ್ಕಕ್ಕೆ ಅನುಮತಿ ಪಡೆಯದವರಿಗೆ ಆರು ತಿಂಗಳು ಜೈಲು!
ಆರ್. ಮಂಜುನಾಥ್‌
Published 2 ಮೇ 2024, 0:53 IST
Last Updated 2 ಮೇ 2024, 0:53 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ಒಳಚರಂಡಿ ಹಾಗೂ ಕುಡಿಯುವ ನೀರಿನ ಸಂಪರ್ಕ ಪಡೆದುಕೊಂಡಿರುವವರಿಗೆ ದಂಡದ ಸಹಿತ ಆರು ತಿಂಗಳ ಜೈಲು ಶಿಕ್ಷೆ ವಿಧಿಸುವ ನೋಟಿಸ್‌ ಜಾರಿ ಮಾಡಲಾಗುತ್ತಿದೆ. ದಕ್ಷಿಣ ಭಾಗದಲ್ಲಿ ಅತಿ ಹೆಚ್ಚು ನೋಟಿಸ್‌ಗಳನ್ನು ಜಲಮಂಡಳಿ ನೀಡಿದೆ.‌

ಬಿಬಿಎಂಪಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ನೀರಿನ ಸಂಪರ್ಕವನ್ನು ಅಕ್ರಮವಾಗಿ ಹೊಂದಿದವರು ಅದನ್ನು ಸಕ್ರಮಗೊಳಿಸಿಕೊಳ್ಳಲು ಮೇ 7ರವರೆಗೆ ಅವಕಾಶ ನೀಡಲಾಗಿದೆ. ಜಲಮಂಡಳಿ ನಿಗದಿಪಡಿಸಿರುವ ಶುಲ್ಕ ಪಾವತಿ ಸಕ್ರಮಗೊಳಿಸಿಕೊಳ್ಳಬೇಕು. ಇಲ್ಲದಿದ್ದರೆ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ–1964 ಕಲಂ 65 ಮತ್ತು 72 ಅನ್ವಯ ನೀರು ಹಾಗೂ ಒಳಚರಂಡಿ ಸಂಪರ್ಕಕ್ಕೆ ಜಲಮಂಡಳಿಯಿಂದ ಅನುಮತಿ ಪಡೆದುಕೊಂಡಿರಬೇಕು. ಈ ಕಾಯ್ದೆ ಉಲ್ಲಂಘನೆ ಮಾಡಿದ್ದರೆ ಕನಿಷ್ಠ ₹5 ಸಾವಿರ ದಂಡ ವಿಧಿಸಬಹುದು. ಅಲ್ಲದೆ, ಸಂಪರ್ಕ ಕಡಿತಗೊಳಿಸುವ, ಮರು ಸಂಪರ್ಕ ನೀಡುವ ವೆಚ್ಚವನ್ನೂ ಜಲಮಂಡಳಿಗೆ ಪಾವತಿಸಬೇಕು. ಇದಲ್ಲದೆ, ಕಾನೂನು ಕ್ರಮವಾಗಿ ಮೊಕದ್ದಮೆ ದಾಖಲಾದರೆ, ಕಾಯ್ದೆಯಂತೆ ಆರು ತಿಂಗಳು ಶಿಕ್ಷೆಯಾಗಲಿದೆ.

ಜಲಮಂಡಳಿ ಸಿಬ್ಬಂದಿ ನೋಟಿಸ್‌ ನೀಡಿದ ನಂತರ ಹಲವು ವಿಭಾಗಗಳಲ್ಲಿ ನಾಗರಿಕರು ಸಂಪರ್ಕವನ್ನು ಸಕ್ರಮಗೊಳಿಸಿಕೊಂಡಿದ್ದಾರೆ. ನೈರುತ್ಯ–2 ವಿಭಾಗ ಹಾಗೂ ದಕ್ಷಿಣ–1 ವಿಭಾಗದಲ್ಲಿ ತಲಾ 22, ಈಶಾನ್ಯದಲ್ಲಿ 11 ಹಾಗೂ ಪೂರ್ವ ವಿಭಾಗದಲ್ಲಿ 10 ಸಂಪರ್ಕಗಳು ಸಕ್ರಮಗೊಂಡಿವೆ. ಒಟ್ಟು 221 ಸಂಪರ್ಕಗಳನ್ನು ಸಕ್ರಮಗೊಳಿಸಲಾಗಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ 1 ಮತ್ತು 2 ವಿಭಾಗದಲ್ಲಿ ಕ್ರಮವಾಗಿ 46 ಹಾಗೂ 28 ಜನರಿಗೆ ನೋಟಿಸ್‌ ನೀಡಲಾಗಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ. ಕೇಂದ್ರ ವಿಭಾಗದಲ್ಲೂ 14 ನೋಟಿಸ್‌ ಮಾತ್ರ ನೀಡಲಾಗಿದೆ. ಉತ್ತರದಲ್ಲಿ 40, ದಕ್ಷಿಣದಲ್ಲಿ 39, ನೈರುತ್ಯ–1ರಲ್ಲಿ 39, ನೈರುತ್ಯ–2ರಲ್ಲಿ 36 ನೋಟಿಸ್‌ ಜಾರಿ ಮಾಡಲಾಗಿದೆ. ಒಟ್ಟಾರೆ 390 ನೋಟಿಸ್‌ ಜಾರಿ ಮಾಡಿದ್ದು, ಇವುಗಳಲ್ಲಿ ಈವರೆಗೆ ಯಾವುದೇ ರೀತಿಯ ಕ್ರಮ ಇನ್ನೂ ಕೈಗೊಂಡಿಲ್ಲ.

ಜಲಮಂಡಳಿ ಅಧಿಕಾರಿಗಳು ಏಪ್ರಿಲ್‌ನಲ್ಲಿ ಎರಡು ವಾರ ನಗರದ ವಿವಿಧ ಭಾಗಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ಅದರಂತೆ ಅಕ್ರಮ ಸಂಪರ್ಕಗಳನ್ನು ಗುರುತಿಸಲಾಗಿದೆ. ಆದರೆ ಎಲ್ಲೆಡೆಯೂ ಸಮೀಕ್ಷೆ ನಡೆದಿಲ್ಲ. ಮುಂದಿನ ದಿನಗಳಲ್ಲಿ ಕಾರ್ಯಪಾಲಕ ಎಂಜಿನಿಯರ್‌ ಮಟ್ಟದಲ್ಲಿ ಎಲ್ಲ ರಸ್ತೆಗಳಲ್ಲೂ ಸಂಪರ್ಕ ಪಡೆದುಕೊಂಡಿರುವ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸಲು ಜಲಮಂಡಳಿ ಅಧ್ಯಕ್ಷರು ಸೂಚಿಸಿದ್ದಾರೆ.

1916 ಕರೆ: ನಗರದಲ್ಲಿ ಒಳಚರಂಡಿ ಹಾಗೂ ನೀರಿನ ಸಂಪರ್ಕವನ್ನು ಅಕ್ರಮವಾಗಿ ಪಡೆದುಕೊಂಡಿರುವವರ ಮಾಹಿತಿ ಇದ್ದರೆ, ನಾಗರಿಕರು 1916ಗೆ ಕರೆ ಮಾಡಿ ದೂರು ನೀಡಬಹುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.

ಏರಿಯೇಟರ್‌: ಮೇ 8ರಿಂದ ದಂಡ

ನಲ್ಲಿಗಳಿಗೆ ಏರಿಯೇಟರ್‌ ಅಳವಡಿಸಿಕೊಳ್ಳುವ ಗಡುವನ್ನು ಜಲಮಂಡಳಿ ಮತ್ತೊಮ್ಮೆ ವಿಸ್ತರಿಸಿದೆ. ಮೇ 7ರವರೆಗೆ ಅವಕಾಶ ನೀಡಲಾಗಿದ್ದು ಮೇ 8ರಿಂದ ದಂಡ ವಿಧಿಸಲು ನಿರ್ಧರಿಸಲಾಗಿದೆ. ನೀರು ಉಳಿತಾಯ ಹಾಗೂ ನೀರಿನ ಸದ್ಬಳಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಾಲ್‌ಗಳಲ್ಲಿ ವಾಣಿಜ್ಯ ಸಂಕೀರ್ಣ ಅಪಾರ್ಟ್‌ಮೆಂಟ್‌ ಸರ್ಕಾರಿ ಕಟ್ಟಡ ಐಷಾರಾಮಿ ಹೋಟೆಲ್‌ ರೆಸ್ಟೋರೆಂಟ್‌ ಹಾಗೂ ಧಾರ್ಮಿಕ ಸ್ಥಳಗಳನ್ನೊಳಗೊಂಡ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆಗಾಗಿ ಬಳಸುವ ನಲ್ಲಿಗಳಲ್ಲಿ ಕಡ್ಡಾಯವಾಗಿ ಏರಿಯೇಟರ್‌/ ಫ್ಲೋ ರಿಸ್ಟ್ರಿಕ್ಟರ್‌ ಅಳವಡಿಸಿಕೊಳ್ಳಲು ಏಪ್ರಿಲ್‌ 30ರ ಅವಕಾಶ ನೀಡಲಾಗಿತ್ತು. ನಗರದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ಏರಿಯೇಟರ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ. ಮೇ 8ರ ನಂತರ ಜಲಮಂಡಳಿ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಏರಿಯೇಟರ್‌ ಅಳವಡಿಸಿಕೊಳ್ಳದವರಿಗೆ ಮೇಲೆ ದಂಡ ವಿಧಿಸಲು ಸೂಚನೆ ನೀಡಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT