ಬೆಂಗಳೂರು: ಶಕ್ತಿ ಯೋಜನೆ ಜಾರಿಯಾದ ಮೇಲೆ ಸಾರಿಗೆ ಇಲಾಖೆಯ ಅಧೀನದ ನಾಲ್ಕು ನಿಗಮಗಳ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಭಾರಿ ಏರಿಕೆ ಕಂಡಿದೆ. ನಿತ್ಯ ಪ್ರಯಾಣಿಸುವವರ ಸಂಖ್ಯೆ ಸುಮಾರು 30 ಲಕ್ಷದಷ್ಟು ಹೆಚ್ಚಳವಾಗಿದೆ.
ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಕಲ್ಪಿಸಿದ ಈ ಯೋಜನೆ ಜಾರಿಯಾಗುವ ಮೊದಲು ನಿತ್ಯ ಸರಾಸರಿ 84.14 ಲಕ್ಷ ಜನರು ಬಸ್‌ನಲ್ಲಿ ಸಂಚರಿಸುತ್ತಿದ್ದರು. ಶಕ್ತಿ ಯೋಜನೆ ಜಾರಿಯಾದ ನಂತರದ ಐದು ದಿನಗಳಲ್ಲಿ ಸರಾಸರಿ 1.12 ಕೋಟಿ ಪ್ರಯಾಣಿಕರು ನಿತ್ಯವೂ ಸಂಚರಿಸಿದ್ದಾರೆ. ಅದರಲ್ಲಿ ಸರಾಸರಿ 50 ಲಕ್ಷ ಮಹಿಳಾ ಪ್ರಯಾಣಿಕರು.
ಜತೆಗೆ ಪುರುಷ ಪ್ರಯಾಣಿಕರ ಸಂಖ್ಯೆಯೂ ಸ್ವಲ್ಪ ಜಾಸ್ತಿಯಾಗಿದೆ. ಮನೆಯ ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣ ಇರುವುದರಿಂದ ಅವರ ಜತೆ ಹೋಗುವ ಪುರುಷರು ಸಹ ಅನಿವಾರ್ಯವಾಗಿ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ್ದರಿಂದ ಈ ಹೆಚ್ಚಳ ಕಂಡು ಬಂದಿದೆ.
ಜೂನ್ 11ರಂದು ಮಧ್ಯಾಹ್ನ 1ರ ಬಳಿಕ ಶಕ್ತಿ ಯೋಜನೆ ಜಾರಿಯಾಗಿತ್ತು. ಮೊದಲ ದಿನ ಭಾನುವಾರ ಆಗಿದ್ದರಿಂದ ಅಂದು ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿರಲಿಲ್ಲ.