ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಆದಾಯ ತೆರಿಗೆ ದಾಳಿ: ₹ 28 ಕೋಟಿ ಮೌಲ್ಯದ ನಗದು, ಚಿನ್ನಾಭರಣ ವಶ

ಬೆಂಗಳೂರು ನಗರದ ವಿವಿಧೆಡೆ ಮುಂದುವರಿದ ಆದಾಯ ತೆರಿಗೆ ದಾಳಿ
Published 24 ಏಪ್ರಿಲ್ 2024, 16:10 IST
Last Updated 24 ಏಪ್ರಿಲ್ 2024, 16:10 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ಅಕ್ರಮ ತಡೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ, ಬೆಂಗಳೂರು ದಕ್ಷಿಣ ಮತ್ತು ಉತ್ತರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ₹ 28.07 ಕೋಟಿ ಮೌಲ್ಯದ ನಗದು, ಚಿನ್ನ ಹಾಗೂ ವಜ್ರವನ್ನು ವಶಪಡಿಸಿಕೊಂಡಿದೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಲ್ಕು ದಿನಗಳಿಂದ ನಿರಂತರ ಶೋಧ ನಡೆಸಲಾಗಿದೆ. ಕೆಲವು ಬ್ಯಾಂಕ್‌ಗಳು, ಲೇವಾದೇವಿದಾರರ ಮನೆಗಳು, ಹಣಕಾಸು ಸಂಸ್ಥೆಗಳಲ್ಲಿ ಶೋಧ ನಡೆಸಲಾಗಿದೆ. ಒಟ್ಟು ₹ 4.69 ಕೋಟಿ ನಗದು, ₹16.92 ಕೋಟಿ ಮೌಲ್ಯದ ಚಿನ್ನಾಭರಣ, ಚಿನ್ನದ ಗಟ್ಟಿಗಳು ಹಾಗೂ ₹ 6.46 ಕೋಟಿ ಮೌಲ್ಯದ ವಜ್ರ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಸವನಗುಡಿ, ಜಯನಗರ, ಶಂಕರಪುರ, ಚಿಕ್ಕಪೇಟೆ, ಚಾಮರಾಜಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ಶೋಧ ನಡೆಸಲಾಗಿದೆ. ಬೃಹತ್‌ ಪ್ರಮಾಣದ ಹಣಕಾಸು ಲೇವಾದೇವಿ ನಡೆಸುತ್ತಿರುವ ಉತ್ತರ ಭಾರತದ ಮೂಲದ ವರ್ತಕರ ಮನೆಗಳ ಮೇಲೆ ದಾಳಿ ಮಾಡಿದ್ದು, ಅವರ ಬಳಿ ಇದ್ದ ಚಿನ್ನಾಭರಣ ಮತ್ತು ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ. ಪುಲಕೇಶಿನಗರ ಮತ್ತು ಮಹಾಲಕ್ಷ್ಮಿಪುರದಲ್ಲೂ ಶೋಧ ನಡೆಸಿದ್ದು, ನಗದು ಹಾಗೂ ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಬಿಲ್ಡರ್‌ಗಳ ಮೇಲೂ ದಾಳಿ: ನಗರದ ವಿವಿಧೆಡೆ ದೊಡ್ಡ ಪ್ರಮಾಣದ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿರುವ ಬಿಲ್ಡರ್‌ಗಳ ಮೇಲೂ ದಾಳಿ ನಡೆಸಲಾಗಿದೆ. ಕೆಲವೆಡೆ ನಗದು ಪತ್ತೆಯಾಗಿದ್ದರೆ, ಇನ್ನು ಕೆಲವೆಡೆ ಇತ್ತೀಚಿನ ತಿಂಗಳುಗಳಲ್ಲಿ ಭಾರಿ ಪ್ರಮಾಣದ ವಹಿವಾಟು ನಡೆಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ರಾಜ್ಯದಲ್ಲಿ ಮೊದಲ ಹಂತದ ಮತದಾನ ಶುಕ್ರವಾರ ಮತ್ತು ಎರಡನೇ ಹಂತದ ಮತದಾನ ಮೇ 7ಕ್ಕೆ ನಡೆಯಲಿದೆ. ತಮಿಳುನಾಡು ಸೇರಿದಂತೆ ಈಗಾಗಲೇ ಮತದಾನ ಪೂರ್ಣಗೊಂಡಿರುವ ರಾಜ್ಯಗಳಿಂದ ಆದಾಯ ತೆರಿಗೆ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಸಿಕೊಳ್ಳಲಾಗಿದೆ. ಇನ್ನೂ ಕೆಲವು ದಿನಗಳ ಕಾಲ ಬಿರುಸಿನ ಕಾರ್ಯಾಚರಣೆಗೆ ಸಿದ್ಧತೆ ನಡೆದಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT