ಶುಕ್ರವಾರ, ಫೆಬ್ರವರಿ 28, 2020
19 °C
10 ವರ್ಷ ಹೆಚ್ಚಿಸಲು ಕರ್ನಾಟಕ ರಾಜ್ಯ ದಲಿತ ಪದವೀಧರರ ಸಂಘದ ಆಗ್ರಹ

ಉದ್ಯೋಗ ವಯೋಮಿತಿ ಹೆಚ್ಚಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು 10 ವರ್ಷ ಹೆಚ್ಚಳ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ದಲಿತ ಪದವೀಧರರ ಸಂಘ ಆಗ್ರಹಿಸಿದೆ.‌

‘ಸದ್ಯ ಸಾಮಾನ್ಯ ವರ್ಗದವರಿಗೆ ಗರಿಷ್ಠ ವಯೋಮಿತಿ 35, ಹಿಂದುಳಿದ ವರ್ಗದವರಿಗೆ(ಒಬಿಸಿ) 38, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 40 ವರ್ಷದ ವಯೋಮಿತಿ ಇದೆ. ಇದನ್ನು ಕ್ರಮವಾಗಿ 45, 48 ಮತ್ತು 50ಕ್ಕೆ ಹೆಚ್ಚಿಸಬೇಕು’ ಎಂದು ಸಂಘದ ಅಧ್ಯಕ್ಷ ವಿ. ಲೋಕೇಶ್ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಒತ್ತಾಯಿಸಿದರು.

ಹಿಮಾಚಲ ಪ್ರದೇಶದಲ್ಲಿ ಇದೇ ಮಾದರಿ ಅನುಸರಿಸಲಾಗಿದೆ. ತಮಿಳುನಾಡಿನಲ್ಲಿ ಸಾಮಾನ್ಯ ವರ್ಗದವರಿಗೆ 40 ವರ್ಷ ಇದ್ದು, ಉಳಿದವರಿಗೆ ಗರಿಷ್ಠ ವಯೋಮಿತಿಯನ್ನೇ ನಿಗದಿ ಮಾಡಿಲ್ಲ. ಉತ್ತರ ಪ್ರದೇಶ, ಹರಿಯಾಣ, ಆಂಧ್ರಪ್ರದೇಶ, ತೆಲಂಗಾಣ, ತ್ರಿಪುರ, ಜಮ್ಮು ಕಾಶ್ಮೀರ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಕರ್ನಾಟಕಕ್ಕಿಂತ ವಯೋಮಿತಿ ಹೆಚ್ಚಿಗೆ ಇದೆ ಎಂದು ಹೇಳಿದರು.

‘ರಾಜ್ಯದಲ್ಲಿ 2.60 ಲಕ್ಷ ಹುದ್ದೆಗಳು ಖಾಲಿ ಇವೆ. ಸರ್ಕಾರ ಕಾಲಕಾಲಕ್ಕೆ ಹುದ್ದೆಗಳನ್ನು ಭರ್ತಿ ಮಾಡಿಲ್ಲದ ಕಾರಣ ಖಾಲಿ ಉಳಿದುಕೊಂಡಿವೆ. ಇದರಿಂದಾಗ ಸರ್ಕಾರಿ ನೌಕರರಿಗೆ ಕಾರ್ಯ ಒತ್ತಡ ಹೆಚ್ಚಾಗಿ ಜನರ ಕೆಲಸ ಕಾರ್ಯಗಳು ವಿಳಂಬವಾಗುತ್ತಿವೆ’ ಎಂದರು.

‘ಖಾಲಿಯಾದ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸುವ ಬದಲು ಹೊರ ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಿಕೊಂಡು ಆಡಳಿತ ನಡೆಸಲಾಗುತ್ತಿದೆ. ಇದರಿಂದಾಗಿ ಪ್ರತಿಭಾವಂತ ನಿರುದ್ಯೋಗಿ ಪದವೀಧರರ ಕನಸು ನುಚ್ಚುನೂರಾಗಿದೆ. ಅರ್ಹರು ವಯೋಮಿತಿ ಮೀರಿ ಮನೆಯಲ್ಲೇ ಉಳಿಯುವಂತಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು