ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮನ್ವಯದ ಕೊರತೆಯಿಂದ ಹೆಚ್ಚಿದ ದಟ್ಟಣೆ

Last Updated 29 ನವೆಂಬರ್ 2018, 20:41 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಸಂಚಾರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾರಿಗೆ ಸಂಸ್ಥೆಗಳ ನಡುವಿನ ಸಮನ್ವಯದ ಕೊರತೆ ಅಡ್ಡಿಯಾಗುತ್ತಿದೆ ಎನ್ನುವುದು ನಗರಸಾರಿಗೆ ತಜ್ಞರ ವಿಶ್ಲೇಷಣೆ.

ಹತ್ತು ವರ್ಷಗಳಿಂದ ಇಲ್ಲಿಯವರೆಗೂ ನಗರ ಸಾರಿಗೆಯ ಪರಿಣಾಮಕಾರಿ ಸೇವೆಗಳಿಗಾಗಿ ಮಹಾನಗರ ಏಕೀಕೃತ ಸಾರಿಗೆ ಪ್ರಾಧಿಕಾರ (ಉಮ್ಟಾ) ರಚಿಸುವಂತೆ ಕೇಂದ್ರ ಸರ್ಕಾರಸಲಹೆ ನೀಡುತ್ತಲೇ ಬಂದಿದೆ. ಇಂತಹ ಪ್ರಾಧಿಕಾರವನ್ನು ಸ್ಥಾಪಿಸುವುದಾಗಿಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿ ಆರು ತಿಂಗಳ ಕಳೆದಿದೆ. ಆದರೆ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ಆಗಿಲ್ಲ.

ನಗರದಲ್ಲಿನ ಸಾರಿಗೆ ಸೇವೆಗಳು ಬಿಡಿಯಾಗಿಯೇ ಉಳಿದಿದ್ದು, ಪ್ರತಿ ನಿಗಮಗಳು ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾರ್ಯನಿರ್ವಹಿಸುತ್ತಿವೆ. ಇಲಾಖೆಗಳ ಮೇಲ್ವಿಚಾರಣೆಯನ್ನು ಬೇರೆ ಬೇರೆ ಮಂತ್ರಿಗಳೇ ಮಾಡುತ್ತಿದ್ದಾರೆ. ಇದು ನಿಗಮಗಳ ಕಾರ್ಯಾಚರಣೆಗಳನ್ನು ಮತ್ತಷ್ಟು ಜಟಿಲಗೊಳಿಸುತ್ತಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮದಲ್ಲಿ (ಬಿಎಂಆರ್‌ಸಿಎಲ್‌) ಬಿಎಂಟಿಸಿ ಮುಖ್ಯಸ್ಥರೂ ಸದಸ್ಯರಾಗಿರಬೇಕಿತ್ತು. ಆದರೆ, ಹಿಂದಿದ್ದ ಬಿಜೆಪಿ ಸರ್ಕಾರಕ್ಕೆ ಬಿಎಂಟಿಸಿ ಮುಖ್ಯಸ್ಥರು ಮೆಟ್ರೊ ನಿಗಮದ ಸದಸ್ಯರಾಗಿರುವ ಅಗತ್ಯ ಕಾಣಲಿಲ್ಲ. ಅವರನ್ನು ಬಿಎಂಆರ್‌ಸಿಎಲ್‌ ಸದಸ್ಯತ್ವದಿಂದ ಕೈಬಿಟ್ಟಿತು.

ಇದರ ಮಧ್ಯೆಯೂ ಬಿಎಂಟಿಸಿ ನಿತ್ಯ 42 ಲಕ್ಷ ಪ್ರಯಾಣಿಕರ ಪ್ರಯಾಣಕ್ಕೆ ಸಹಕಾರಿಯಾಗಿದೆ. ಆದಾಗ್ಯೂ ಬಿಎಂಟಿಸಿ ಬಸ್‌ ತಂಗುದಾಣಗಳ ಕುರಿತು ಯಾರೂ ಮಾತನಾಡುವುದಿಲ್ಲ. ಬಿಬಿಎಂಪಿ ತಾನು ನಿರ್ಮಿಸಿದ ನಿಲ್ದಾಣಗಳಿಂದ ಪ್ರಯಾಣಿಕರಿಗೆ ಆಗುವ ಅನುಕೂಲಕ್ಕಿಂತ ಜಾಹೀರಾತಿನಿಂದ ಬರುವ ಆದಾಯದ ಕುರಿತು ಗಮನಹರಿಸುತ್ತಿದೆ.

ಮೊದಲ ಹಂತದ ನಮ್ಮ ಮೆಟ್ರೊ ಯೋಜನೆಗೆ ಸರ್ಕಾರ ₹13,845 ಕೋಟಿ ಖರ್ಚು ಮಾಡಿದೆ. ಆದರೆ ಇದರ ಬಹುತೇಕ ನಿಲ್ದಾಣಗಳು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್‌ಗಳನ್ನು ಸಂಪರ್ಕಿಸುವ ಬಸ್‌ ಬೇಗಳನ್ನು ಹೊಂದಿಲ್ಲ.

ಎರಡನೇ ಹಂತದ ಮೆಟ್ರೊ ಯೋಜನೆಯ ಪರಿಷ್ಕೃತ ವೆಚ್ಚ ₹32,000 ಕೋಟಿ ಎಂದು ಅಂದಾಜಿಸಲಾಗಿದೆ. ಎಲ್ಲಾ ಸೇರಿ ₹50,000 ಕೋಟಿ ಹೂಡಿಕೆ ಆಗಲಿದೆ. ಆದಾಗ್ಯೂ, ಈ ಸಂಸ್ಥೆಗೆ ವಿವಿಧ ಸೇವೆಗಳನ್ನು ಸಂಯೋಜಿಸುವ ಅಧಿಕಾರವಿಲ್ಲ. ಹಾಗಾಗಿ ಗಮ್ಯಸ್ಥಾನದ ಸಂಪರ್ಕ ಸಾಧ್ಯವಾಗದೇ ಉಳಿದಿದೆ. ಇದು ಜನ ಖಾಸಗಿ ವಾಹನಗಳನ್ನು ಅವಲಂಬಿಸಲು ಕಾರಣವಾಗಿದೆ.

ಮಹಾನಗರ ಏಕೀಕೃತ ಸಾರಿಗೆ ಪ್ರಾಧಿಕಾರ ಸ್ಥಾಪನೆ ವಿಳಂಬವಾಗಿರುವ ಹಿನ್ನೆಲೆಯನ್ನು ಕೆದಕಿದಾಗಇದನ್ನು ಯಾರು ಸ್ಥಾಪಿಸಬೇಕು ಎನ್ನುವ ಗೊಂದಲ ಇರುವುದೇ ಕಾರಣ ಎಂದು ಗೊತ್ತಾಗಿದೆ. ನಗರಾಭಿವೃದ್ಧಿ ಇಲಾಖೆಯು ಇತ್ತೀಚೆಗೆ ಸಾರಿಗೆ ಇಲಾಖೆಗೆ ಪತ್ರಬರೆದು ಮುಖ್ಯಮಂತ್ರಿಯವರನ್ನು ಅಧ್ಯಕ್ಷರನ್ನಾಗಿ ಮಾಡಿ ಪ್ರಾಧಿಕಾರ ಸ್ಥಾಪಿಸಿ ಎಂದು ಮನವಿ ಮಾಡಿಕೊಂಡಿದೆ.

ಆದರೆ, ಕೆಲವರು ಮುಖ್ಯಮಂತ್ರಿಯವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಅದರ ಕಾರ್ಯಚಟುವಟಿಕೆಗಳತ್ತ ಗಮನಹರಿಸಲು ಅವರಿಗೆ ಅಷ್ಟು ಸಮಯ ಸಿಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಈ ಪ್ರಾಧಿಕಾರ ರಸ್ತೆ ಸಾರಿಗೆಗೆ ಸೀಮಿತವಾದರೆ ಪರಿಣಾಮಕಾರಿಯಾಗದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT