ಶುಕ್ರವಾರ, ಸೆಪ್ಟೆಂಬರ್ 25, 2020
25 °C
ನಗರದ ಪಶ್ಚಿಮ ವಲಯದಲ್ಲಿಯೇ ಅಧಿಕ ಸೋಂಕಿತರು

ಪ್ರಯೋಗಾಲಯಗಳ ಸಂಖ್ಯೆ ಏರಿಕೆ; ದಿನಕ್ಕೆ 50 ಸಾವಿರ ಪರೀಕ್ಷೆ ನಡೆಸುವ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ರಾಜ್ಯದಲ್ಲಿ ಇನ್ನೂ 5 ಪ್ರಯೋಗಾಲಯಗಳಿಗೆ ಅನುಮೋದನೆ ನೀಡಿದ್ದು, ಇದರಿಂದಾಗಿ ಕೋವಿಡ್‌ ಪ್ರಯೋಗಾಲಯಗಳ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. 

ಇದರಿಂದಾಗಿ ಪ್ರಾರಂಭಿಕ ಹಂತದಲ್ಲಿಯೇ ಕೊರೊನಾ ಸೋಂಕನ್ನು ಪತ್ತೆ ಮಾಡುವ ಸಂಬಂಧ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದಾಗಿದೆ.

ದೇಶದಲ್ಲಿ ಮೊದಲ ಕೋವಿಡ್ ಪ್ರಕರಣ ವರದಿಯಾದಾಗ, ಮಾದರಿಗಳ ಪರೀಕ್ಷೆಗೆ ರಾಜ್ಯದಲ್ಲಿ ಒಂದೇ ಒಂದು ಪ್ರಯೋಗಾಲಯ ಇರಲಿಲ್ಲ. ಹೀಗಾಗಿ ಸೋಂಕು ಶಂಕಿತರ ಗಂಟಲ ದ್ರವದ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ರೋಗ ಸೂಕ್ಷ್ಮಾಣು ಅಧ್ಯಯನ ಸಂಸ್ಥೆಗೆ (ಎನ್‌ಐವಿ) ಕಳುಹಿಸಲಾಗುತ್ತಿತ್ತು. ಇದರಿಂದಾಗಿ ಪರೀಕ್ಷಾ ವರದಿ ವಿಳಂಬವಾಗುತ್ತಿತ್ತು. ಫೆಬ್ರುವರಿ ಅಂತ್ಯಕ್ಕೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ಹಾಗೂ ಎನ್‌ಐವಿ ಬೆಂಗಳೂರು ಕೇಂದ್ರದ ಪ್ರಯೋಗಾಲಯಕ್ಕೆ ಐಸಿಎಂಆರ್ ಅನುಮೋದನೆ ನೀಡಿತು. ಮೇ ಅಂತ್ಯಕ್ಕೆ ರಾಜ್ಯದಲ್ಲಿ ಪ್ರಯೋಗಾಲಯಗಳ ಸಂಖ್ಯೆ 60 ಕ್ಕೆ ಏರಿಕೆ ಮಾಡಿ, ದಿನವೊಂದಕ್ಕೆ ಗರಿಷ್ಠ 13 ಸಾವಿರ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಯಿತು. 

50 ಸಾವಿರ ಗುರಿ: ಸದ್ಯ ರಾಜ್ಯದಲ್ಲಿ ದಿನವೊಂದಕ್ಕೆ ಆ್ಯಂಟಿಜೆನ್ ಸೇರಿದಂತೆ 40 ಸಾವಿರಕ್ಕೂ ಅಧಿಕ ಕೋವಿಡ್ ಪರೀಕ್ಷೆ
ನಡೆಸಲಾಗುತ್ತಿದೆ. ಆರ್‌ಟಿಪಿಸಿಆರ್‌ ಪರೀಕ್ಷೆಗಳ ಸಂಖ್ಯೆ 20 ಸಾವಿರದ ಗಡಿದಾಟಿದೆ. ಈವರೆಗೆ 16.68 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ. 45 ಸರ್ಕಾರಿ ಹಾಗೂ 55 ಖಾಸಗಿ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ದಿನವೊಂದಕ್ಕೆ 50 ಸಾವಿರ ಕೋವಿಡ್ ಪರೀಕ್ಷೆ ನಡೆಸುವ ಗುರಿಯನ್ನು ರಾಜ್ಯ ಸರ್ಕಾರ ಹಾಕಿಕೊಂಡಿದೆ. ದೇಶದಲ್ಲಿ ಬೆರಳೆಣಿಕೆಯಷ್ಟು ರಾಜ್ಯಗಳು ಮಾತ್ರ ನೂರು ಹಾಗೂ ಅದಕ್ಕಿಂತ ಹೆಚ್ಚಿನ ಪ್ರಯೋಗಾಲಯಗಳನ್ನು ಹೊಂದಿವೆ. 

ಅಧಿಕ ಕೋವಿಡ್ ಪರೀಕ್ಷೆ ನಡೆಸುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 8ನೇ ಸ್ಥಾನದಲ್ಲಿದೆ. ದೆಹಲಿ ಅಗ್ರ ಸ್ಥಾನದಲ್ಲಿದ್ದು, ಅಲ್ಲಿ ಪ್ರತಿ 10 ಲಕ್ಷ ಜನರಲ್ಲಿ 64,650 ಮಂದಿಗೆ ಪರೀಕ್ಷೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಈ ಸಂಖ್ಯೆ 25,072 ರಷ್ಟಿದೆ. ಬಿಹಾರದಲ್ಲಿ ಅತ್ಯಂತ ಕಡಿಮೆ ಪರೀಕ್ಷೆ (7,120) ನಡೆಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಪ್ರತಿ ನೂರು ಪರೀಕ್ಷೆಗಳಲ್ಲಿ ಶೇ 19 ರಷ್ಟು ಮಂದಿಗೆ ಸೋಂಕು ದೃಢಪಟ್ಟರೇ, ರಾಜ್ಯದಲ್ಲಿ ಶೇ 9 ರಷ್ಟು ಮಂದಿ ಸೋಂಕಿತರಾಗಿರುವುದು ಖಚಿತಪಡುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಕೋವಿಡ್: ಸೋಂಕಿತರ ಸಂಖ್ಯೆ 74 ಸಾವಿರಕ್ಕೆ ಏರಿಕೆ
ಬೆಂಗಳೂರು: 
ನಗರದಲ್ಲಿ ಭಾನುವಾರ 1,948 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 74 ಸಾವಿರ ದಾಟಿದೆ. 

ಕೋವಿಡ್ ಪೀಡಿತರಲ್ಲಿ ಮತ್ತೆ 22 ಮಂದಿ ಮೃತಪಟ್ಟಿದ್ದು, ಸೋಂಕಿಗೆ ಈವರೆಗೆ ಸಾವಿಗೀಡಾದವರ ಸಂಖ್ಯೆ 1,240ಕ್ಕೆ ಏರಿಕೆಯಾಗಿದೆ. ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದ ಪರಿಣಾಮ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದ್ದು, 48 ಗಂಟೆಗಳಲ್ಲಿ 4,613 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಚೇತರಿಸಿಕೊಳ್ಳುವವರ ಸಂಖ್ಯೆ ಕೂಡ ಹೆಚ್ಚುತ್ತಿದ್ದು, 1,837 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಈವರೆಗೆ 39 ಸಾವಿರಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದು, 33 ಸಾವಿರಕ್ಕೂ ಅಧಿಕ ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಹೊಸದಾಗಿ ವರದಿಯಾದ ಪ್ರಕರಣಗಳಲ್ಲಿ ಪಶ್ಚಿಮ ವಲಯದಲ್ಲಿಯೇ ಅಧಿಕ ಮಂದಿ (359) ಸೋಂಕಿತರಾಗಿದ್ದಾರೆ. ದಕ್ಷಿಣ ವಲಯದಲ್ಲಿ 288, ಪೂರ್ವ ವಲಯದಲ್ಲಿ 252, ಬೊಮ್ಮನಹಳ್ಳಿಯಲ್ಲಿ 210, ಮಹದೇವಪುರದಲ್ಲಿ 147, ಆರ್.ಆರ್.ನಗರದಲ್ಲಿ 176, ಯಲಹಂಕದಲ್ಲಿ 133 ಹಾಗೂ ದಾಸರಹಳ್ಳಿಯಲ್ಲಿ 101 ಮಂದಿಗೆ ಸೋಂಕು ತಗುಲಿದೆ. ಹತ್ತು ದಿನಗಳಿಂದ ಪಶ್ಚಿಮ ವಲಯದಲ್ಲಿ ಪ್ರಕರಣಗಳು ಹೆಚ್ಚುತ್ತಿದ್ದು, ಈ ಅವಧಿಯಲ್ಲಿ ನಗರದಲ್ಲಿ ಸೋಂಕಿತರಾದವರಲ್ಲಿ ಶೇ 25 ರಷ್ಟು ಮಂದಿ ಆ ಭಾಗಕ್ಕೆ ಸೇರಿದವರು. ಬೆಂಗಳೂರು ದಕ್ಷಿಣದಲ್ಲಿ ಶೇ 18 ರಷ್ಟು ಪ್ರಕರಣಗಳು ವರದಿಯಾಗಿವೆ. 

665 ಆಂಬುಲೆನ್ಸ್ ನಿಯೋಜನೆ
‘ನಗರದಲ್ಲಿ ಕೊರೊನಾ ಸೋಂಕಿತರು ಮತ್ತು ಕೋವಿಡೇತರ ರೋಗಿಗಳನ್ನು ಆಸ್ಪತ್ರೆಗಳು, ಕೋವಿಡ್ ಆರೈಕೆ ಕೇಂದ್ರಗಳಿಗೆ ಕರೆದೊಯ್ಯಲು 665 ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

‘ಪೂರ್ವ ವಲಯದಲ್ಲಿ 127, ಪಶ್ಚಿಮ ವಲಯದಲ್ಲಿ 141, ದಕ್ಷಿಣದಲ್ಲಿ 110, ರಾಜರಾಜೇಶ್ವರಿ ನಗರದಲ್ಲಿ 40, ಬೊಮ್ಮನಹಳ್ಳಿಯಲ್ಲಿ 43, ಮಹದೇವಪುರದಲ್ಲಿ 52, ದಾಸರಹಳ್ಳಿಯಲ್ಲಿ 24, ಯಲಹಂಕದಲ್ಲಿ 33 ಆಂಬುಲೆನ್ಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಗೃಹ ಇಲಾಖೆಗೆ 11 ಹಾಗೂ ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ 84 ಆಂಬುಲೆನ್ಸ್‌ಗಳನ್ನು ನಿಯೋಜನೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. 

*
ರಾಜ್ಯದಲ್ಲಿ 45 ಸರ್ಕಾರಿ ಸೇರಿದಂತೆ ಪ್ರಯೋಗಾಲಯಗಳ ಸಂಖ್ಯೆ ನೂರಕ್ಕೆ ಏರಿಕೆಯಾಗಿದೆ. ಶೇ 79.85 ರಷ್ಟು ಪರೀಕ್ಷೆಗಳಲ್ಲಿ ಆರ್‌ಟಿ‌ಪಿಸಿಆರ್ ಮಾದರಿಯನ್ನು ಅನುಸರಿಸಲಾಗಿದೆ. 
-ಡಾ.ಕೆ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು