ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ತಬ್ಬಿಕೊಂಡು ಮುತ್ತಿಟ್ಟು ಪರಾರಿಯಾಗಿದ್ದ ಕಲಬುರಗಿ ಜಿಲ್ಲೆಯ ಜೇವರ್ಗಿಯ ಬಸವರಾಜ್ ಎಂಬಾತನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಔಷಧ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆರೋಪಿ ಸದ್ಯ ಚಿಕ್ಕಬಾಣಾವಾರದ ಮಾರುತಿನಗರದಲ್ಲಿ ವಾಸವಾಗಿದ್ದಾನೆ.
ಹೊರ ರಾಜ್ಯದ ಯುವತಿಯೊಬ್ಬರು ಕಾಲೇಜೊಂದರಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಜುಲೈ 30ರ ರಾತ್ರಿ 9ರ ಸುಮಾರಿಗೆ ವಿದ್ಯಾರ್ಥಿನಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ, ಯುವತಿಯನ್ನು ಬಲವಂತವಾಗಿ ತಬ್ಬಿಕೊಂಡು ಮುತ್ತುಕೊಟ್ಟಿದ್ದ. ಗಾಬರಿಗೊಂಡ ವಿದ್ಯಾರ್ಥಿನಿ ರಕ್ಷಣೆಗಾಗಿ ಕೂಗುತ್ತಿದ್ದಂತೆ, ಆರೋಪಿ ಪರಾರಿಯಾಗಿದ್ದ. ಯುವತಿ ದೂರು ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.