ಬೆಂಗಳೂರು: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ನಗರದಲ್ಲಿ ಶನಿವಾರ ಹಮ್ಮಿಕೊಂಡ 16ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ವ್ಯಂಗ್ಯಚಿತ್ರಕಾರ ಜಯಂತೊ ಬ್ಯಾನರ್ಜಿ ಅವರಿಗೆ ‘ಬಾರ್ಟನ್ಸ್ ಜೀವಮಾನ ಸಾಧನೆ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಜಯಂತೊ ಬ್ಯಾನರ್ಜಿ ಅವರ ವ್ಯಂಗ್ಯಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಘ್, ‘ಬರಹಗಳಲ್ಲಿ ಹೇಳಲಾಗದ್ದನ್ನೂ ವ್ಯಂಗ್ಯಚಿತ್ರಗಳು ಹೇಳುತ್ತವೆ. ಇದು ವೈವಿಧ್ಯಮಯ ಕಲಾ ಪ್ರಕಾರವಾಗಿದ್ದು, ವಿಶ್ವದಾದ್ಯಂತ ಪ್ರಸಿದ್ಧಿ ಪಡೆಯುತ್ತಿದೆ. ಭಾರತದಲ್ಲಿಯೂ ಈ ಪ್ರಕಾರ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಎಲ್ಲರನ್ನೂ ಸೆಳೆಯುವ ಶಕ್ತಿ ಈ ಕಲೆಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬಾರ್ಟನ್ಸ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಭರತ್ ಮೆಹ್ತಾ, ‘ವ್ಯಂಗ್ಯ ಚಿತ್ರ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಬೇಕು. ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿ.ಜಿ. ನರೇಂದ್ರ, ‘ಸಂಸ್ಥೆಯು 16 ವರ್ಷಗಳಲ್ಲಿ 190 ವ್ಯಂಗ್ಯಚಿತ್ರ ಪ್ರದರ್ಶನ ನಡೆಸಿದೆ. ದೇಶದ ಪ್ರಮುಖ ವ್ಯಂಗ್ಯಚಿತ್ರಕಾರರೆಲ್ಲ ಇಲ್ಲಿಗೆ ಭೇಟಿ ನೀಡಿದ್ದಾರೆ. ಅಮೆರಿಕ, ಇಂಗ್ಲೆಂಡ್ ಸೇರಿ ಹಲವು ದೇಶಗಳ ಕಲಾವಿದರು ಇಲ್ಲಿಗೆ ಬಂದಿದ್ದಾರೆ. ವ್ಯಂಗ್ಯಚಿತ್ರ ಕಾರ್ಯಾಗಾರವನ್ನೂ ನಡೆಸಿ, ಯುವಜನರನ್ನು ಈ ಕಲೆಯತ್ತ ಸೆಳೆಯಲಾಗುತ್ತಿದೆ. ಮಹಿಳೆಯರು ಕೂಡ ಈ ಕಲೆಯ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ವ್ಯಂಗ್ಯಚಿತ್ರಕ್ಕೆ ಸಂಬಂಧಿಸಿದಂತೆ ಸಂಸ್ಥೆಯಲ್ಲಿ 3 ಸಾವಿರಕ್ಕೂ ಅಧಿಕ ಅಪರೂಪದ ಪುಸ್ತಕಗಳಿವೆ. ಇವು ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿವೆ’ ಎಂದು ತಿಳಿಸಿದರು.
ಜಯಂತೊ ಬ್ಯಾನರ್ಜಿ ಅವರು ರಚಿಸಿದ ನೂರಕ್ಕೂ ಅಧಿಕ ವ್ಯಂಗ್ಯಚಿತ್ರಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ. ಎಂ.ಜಿ. ರಸ್ತೆಯಲ್ಲಿರುವ ಇಂಡಿಯನ್ ಕಾರ್ಟೂನ್ ಗ್ಯಾಲರಿಯಲ್ಲಿ ಸೆ.23ರ ವರೆಗೆ ಭಾನುವಾರ ಹೊರತುಪಡಿಸಿ ಉಳಿದ ದಿನ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಪ್ರದರ್ಶನ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.