ಬುಧವಾರ, ಜನವರಿ 29, 2020
29 °C
ಡಿಆರ್‌ಡಿಒ ರಕ್ಷಣಾ ಸಂಶೋಧನಾ ಪ್ರಯೋಗಾಲಯದಿಂದ ಅಭಿವೃದ್ಧಿ

ಉಗ್ರರಿಗೆ ‘ಚಿಲ್ಲಿ ಗ್ರೆನೇಡ್‌’ ಘಾಟು!

ಅಭಿಲಾಷ್‌ ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉಗ್ರರ ವಿರುದ್ಧ ಕಾರ್ಯಾಚರಣೆಗೆ ಇಳಿಯುವ ಸೇನೆಯ ಯೋಧರ ಕೈಗೆ ಹೊಸ ಗ್ರೆನೇಡ್‌ ಸೇರ್ಪಡೆಯಾಗಿದೆ. ಈ ಅಸ್ತ್ರವನ್ನು ಬಳಸಿದರೆ, ಎಂಥಾ ಉಗ್ರನೂ ಶರಣಾಗಬೇಕು.

ಇದು ಮಾಮೂಲಿ ಗ್ರೆನೇಡ್‌ ಅಲ್ಲ, ಬದಲಾಗಿ ಮೆಣಸಿನಕಾಯಿಯ ರಾಸಾಯನಿಕ ಅಂಶಗಳಿರುವ ‘ಚಿಲ್ಲಿ ಗ್ರೆನೇಡ್‌’. 

ವಿಶ್ವದ ಅತಿ ಖಾರದ ಮೆಣಸಿನ ಕಾಯಿಗಳಲ್ಲಿ ಒಂದಾದ ‘ನಾಗಾ ಚಿಲ್ಲಿ’ ಅಥವಾ ‘ಕಿಂಗ್‌ ಚಿಲ್ಲಿ’ಯ ರಾಸಾಯನಿಕ ಅಂಶಗಳನ್ನು ಗುರುತಿಸಿ, ಈ ಗ್ರೆನೇಡ್‌ಗಳನ್ನು ತಯಾರಿಸಲಾಗಿದೆ.

ಟಿನ್‌ಕ್ಯಾನ್‌ ಮಾದರಿಯಲ್ಲಿ ಇವುಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ
(ಡಿಆರ್‌ಡಿಒ) ಅಂಗಸಂಸ್ಥೆಯಾದ ರಕ್ಷಣಾ ಸಂಶೋಧನಾ ಪ್ರಯೋಗಾಲಯ (ಡಿಆರ್‌ಎಲ್‌) ಅಭಿವೃದ್ಧಿಪಡಿಸಿದೆ. 

ಬಳಕೆ ಹೇಗೆ?: ‘ಗ್ರೆನೇಡ್‌ ಎಸೆಯುವಂತೆ ಕ್ಯಾನ್‌ನ ಲಾಕ್‌ ತೆಗೆದು ಎಸೆದರೆ, ಮೆಣಸಿನ ಘಾಟು ಹರಡುತ್ತದೆ. ತಕ್ಷಣ ದಲ್ಲೇ ಕಣ್ಣುರಿ, ಚರ್ಮ ತುರಿಸಲು ಪ್ರಾರಂಭವಾಗುತ್ತದೆ. ಮನೆಯೊಳಗೆ ಅಡಗಿರುವ ಉಗ್ರರು, ಗುಂಪು ಚದುರಿಸಲು ಇಂಥ ಚಿಲ್ಲಿ ಗ್ರೆನೇಡ್‌ ಬಳಸಲಾಗುತ್ತಿದೆ. ಏಳು ಗಂಟೆಗಳ ಕಾಲ ಇದರ ಪರಿಣಾಮವಿರುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಗ್ರೆನೇಡ್‌ ಬಳಸಿಕೊಂಡು ಉಗ್ರರನ್ನು ಸೆರೆ ಹಿಡಿಯಲಾಗಿದೆ’ ಎಂದು ಡಿಆರ್‌ಎಲ್‌ ವಿಜ್ಞಾನಿ ಡಾ.ಎಸ್‌. ದತ್ತಾ ಮಾಹಿತಿ ನೀಡಿದರು. 

ಅಶ್ರುವಾಯು ಬದಲು ಬಳಕೆ: ‘ಗುಂಪು ಘರ್ಷಣೆ ಸಂದರ್ಭದಲ್ಲಿ ಪೊಲೀಸರು ಹೆಚ್ಚಾಗಿ ಅಶ್ರುವಾಯು ಸಿಡಿಸುತ್ತಾರೆ. ಇದರಿಂದ ಕಣ್ಣಿಗೆ ಹಾನಿಯಾಗುತ್ತದೆ. ಆದರೆ, ಚಿಲ್ಲಿ ಗ್ರೆನೇಡ್‌ನಲ್ಲಿ ಮನುಷ್ಯನ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಲಾಂಚರ್‌ ಸಹಾಯದಿಂದ ಈ ಗ್ರೆನೇಡ್‌ಗಳನ್ನು ಗರಿಷ್ಠ 1 ಕಿ.ಮೀ. ದೂರಕ್ಕೆ ಸಿಡಿಸಬಹುದು. ಎಸೆದ ಗ್ರೆನೇಡ್‌ ಕ್ಯಾನ್‌ಗಳು ನೆಲದಲ್ಲಿ ನೇರವಾಗಿ ನಿಲ್ಲುವಂತೆಯೂ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದು ದತ್ತಾ ತಿಳಿಸಿದರು. 

ಯೋಧರಿಗೆ ‘ಸನ್‌ಸ್ಕ್ರೀನ್‌’ ರಕ್ಷಣೆ

ಮೈಕೊರೆಯುವ ಚಳಿ ಇರುವಂಥ ಸಿಯಾಚಿನ್‌ ಆಗಿರಲಿ ಅಥವಾ ಮೈಸುಡುವ ಮರುಭೂಮಿಯೇ ಆಗಿರಲಿ. ಯೋಧರ ಚರ್ಮದ ರಕ್ಷಣೆಗೆ ಡಿಆರ್‌ಡಿಒದ ರಕ್ಷಣಾ ಸಂಶೋಧನಾ ಪ್ರಯೋಗಾಲಯ(ಡಿಆರ್‌ಎಲ್‌) ನೂತನ ‘ಸನ್‌ಸ್ಕ್ರೀನ್‌’ ಅಭಿವೃದ್ಧಿಪಡಿಸಿದೆ.

ಈ ಸನ್‌ಸ್ಕ್ರೀನ್‌ಗಳು 50+ ಸನ್‌ ಪ್ರೊಟೆಕ್ಷನ್‌ ಫ್ಯಾಕ್ಟರ್‌(ಎಸ್‌ಪಿಎಫ್‌) (ಸೂರ್ಯನಿಂದ ಹೊರಹೊಮ್ಮುವ ಯುವಿ (ನೇರಳಾತೀತ) ಕಿರಣಗಳನ್ನು ತಡೆಯುವ ಸಾಮರ್ಥ್ಯ) ಹೊಂದಿವೆ. ಈ ಕಿರಣಗಳು ಚರ್ಮಕ್ಕೆ ಹಾನಿಯುಂಟು ಮಾಡುತ್ತವೆ. ಕೆಲವೊಮ್ಮೆ ಇದು ಚರ್ಮದ ಕ್ಯಾನ್ಸರ್‌ಗೂ ಕಾರಣವಾಗುತ್ತವೆ.

ಮಾರುಕಟ್ಟೆಯಲ್ಲಿ ದೊರೆಯುವ ಸನ್‌ಸ್ಕ್ರೀನ್‌ಗಳು 20–30 ಎಸ್‌ಪಿಎಫ್‌ ಹೊಂದಿರುತ್ತವೆ. ತೀವ್ರ ಚಳಿ ಇರುವಂಥ ಪ್ರದೇಶಗಳಲ್ಲಿ ಇವುಗಳನ್ನು ಬಳಸಲೂ ಸಾಧ್ಯವಾಗುವುದಿಲ್ಲ. ಡಿಆರ್‌ಎಲ್‌ ಅಭಿವೃದ್ಧಿಪಡಿಸಿರುವ ಸನ್‌ ಸ್ಕ್ರೀನ್‌ ಅನ್ನು –25 ಡಿಗ್ರಿ ಸೆಲ್ಸಿಯಸ್‌ನಿಂದ 55 ಡಿಗ್ರಿ ಸೆಲ್ಸಿಯಸ್‌ ವಾತಾವರಣದಲ್ಲೂ ಬಳಸಬಹುದು. ಇವುಗಳು ಚಳಿಯಲ್ಲಿ ಗಟ್ಟಿಯಾಗುವುದಿಲ್ಲ.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು