ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿರಾ ಕ್ಯಾಂಟೀನ್‌ ಸೇವೆ: ಅದಮ್ಯ ಚೇತನ ಸಂಸ್ಥೆಗೆ ಗುತ್ತಿಗೆ?

Last Updated 3 ಫೆಬ್ರುವರಿ 2020, 20:08 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಪೂರ್ವ ವಲಯದ ಇಂದಿರಾ ಕ್ಯಾಂಟೀನ್ ನಿರ್ವಹಣೆಯ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿರುವ ಸಂಸ್ಥೆಗಳಲ್ಲಿ ಶ್ರೀಮತಿ ಗಿರಿಜಾ ಶಾಸ್ತ್ರಿ ಸ್ಮಾರಕ ಟ್ರಸ್ಟ್‌ (ಅದಮ್ಯ ಚೇತನ) ‌ಅತೀ ಕಡಿಮೆ ದರವನ್ನು ನಮೂದಿಸಿದೆ.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮುನ್ನಡೆಸುತ್ತಿರುವ ಸಂಸ್ಥೆ ಇದಾಗಿದೆ. ಈ ಸಂಸ್ಥೆ ನಗರದಲ್ಲಿ ಪ್ರಸ್ತುತ 1.50 ಲಕ್ಷ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸುತ್ತಿದೆ. ಈ ಸಂಸ್ಥೆಗೆ ಇಂದಿರಾ ಕ್ಯಾಂಟೀನ್‌ಗೆ ಊಟ ಉಪಾಹಾರ ಪೂರೈಸುವ ಗುತ್ತಿಗೆ ಸಿಗುವುದು ಬಹುತೇಕ ನಿಚ್ಚಳವಾಗಿದೆ.

ಶೆಫ್‌ಟಾಕ್ ಮತ್ತು ರಿವಾರ್ಡ್ಸ್ ಸಂಸ್ಥೆಯ ಗುತ್ತಿಗೆ ಕಳೆದ ಆಗಸ್ಟ್ 15ರಲ್ಲೇ ಮುಕ್ತಾಯಗೊಂಡಿತ್ತು. ಹೀಗಾಗಿ ನಾಲ್ಕು ವಲಯಗಳ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ಡಿಸೆಂಬರ್‌ನಲ್ಲಿ ಟೆಂಡರ್ ಕರೆಯಲಾಗಿತ್ತು. ನಾಲ್ಕರಲ್ಲಿ ಮೂರು ವಲಯಗಳ ಟೆಂಡರ್‌ಗಳಲ್ಲಿ ಶೆಫ್‌ಟಾಕ್ ಮತ್ತು ರಿವಾರ್ಡ್‌ ಸಂಸ್ಥೆಗಳು ಅತೀ ಕಡಿಮೆ ದರ ನಮೂದಿಸಿವೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಅವ್ಯವಹಾರ ಆರೋಪದಲ್ಲಿ ಬಿಬಿಎಂಪಿ ಈ ಸಂಸ್ಥೆಗಳ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಈ ಕಾರಣಕ್ಕಾಗಿ ಈ ಎರಡು ಸಂಸ್ಥೆಗಳ ಅರ್ಜಿಗಳು ತಿರಸ್ಕೃತವಾದರೆ ನಾಲ್ಕೂ ವಲಯಗಳಲ್ಲೂ ಕ್ಯಾಂಟೀನ್ ನಿರ್ವಹಣೆ ಗುತ್ತಿಗೆ ಅದಮ್ಯ ಚೇತನ ಸಂಸ್ಥೆ ಪಾಲಾಗುವ ಸಾಧ್ಯತೆ ಇದೆ ಎಂದು ಹೆಸರು ಹೇಳಲು ಬಯಸದ ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

‘ಶೆಫ್‌ಟಾಕ್ ಮತ್ತು ರಿವಾರ್ಡ್ಸ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಟೆಂಡರ್‌ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಶೆಫ್‌ಟಾಕ್ ಮತ್ತು ರಿವಾರ್ಡ್ಸ್ ಸಂಸ್ಥೆಗಳು ಸದ್ಯ ದಿನದಲ್ಲಿ ಎರಡು ಹೊತ್ತಿನ ಊಟ ಹಾಗೂ ಬೆಳಿಗ್ಗೆ ಉಪಾಹಾರ ಪೂರೈಸಲು ಸರಾಸರಿ ₹32 ದರ ಪಡೆಯುತ್ತಿದೆ. ಈ ಬಾರಿಯ ಟೆಂಡರ್‌ನಲ್ಲಿ ಈ ಸಂಸ್ಥೆಗಳು ದಿನವೊಂದಕ್ಕೆ ಆಹಾರ ಪೂರೈಸಲು ₹ 37 ದರ ನಮೂದಿಸಿವೆ. ಪೂರ್ವ ವಲಯದಲ್ಲಿ ಆಹಾರ ಪೂರೈಕೆಗೆ (ದಿನವೊಂದಕ್ಕೆ) ಅದಮ್ಯ ಚೇತನ ಸಂಸ್ಥೆ ₹30.30 ನಮೂದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT