ಬುಧವಾರ, ಏಪ್ರಿಲ್ 1, 2020
19 °C
ತೆರಿಗೆ ಮರುಪಾವತಿಗೆ ಕಮಿಷನ್ ಪಡೆಯುತ್ತಿದ್ದ ಆರೋಪ | ಆದಾಯ ತೆರಿಗೆ ಇಲಾಖೆ ನಿರ್ದೇಶಕರಿಂದ ದೂರು

ತೆರಿಗೆ ಮರುಪಾವತಿಗೆ ಕಮಿಷನ್: ಇನ್ಫೊಸಿಸ್ ಲೆಕ್ಕಾಧಿಕಾರಿ ಸೇರಿ ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆದಾಯ ತೆರಿಗೆ ಪಾವತಿಸುತ್ತಿದ್ದವರನ್ನು ಸಂಪರ್ಕಿಸಿ ತೆರಿಗೆ ಮರುಪಾವತಿ ಮಾಡಿಸುವುದಾಗಿ ಹೇಳಿ ಶೇ 4ರಷ್ಟು ಕಮಿಷನ್ ಪಡೆದು ಇಲಾಖೆಗೆ ವಂಚಿಸುತ್ತಿದ್ದ ಆರೋಪದಡಿ ಇನ್ಫೊಸಿಸ್ ಕಂಪನಿ ಉದ್ಯೋಗಿ ಸೇರಿ ಮೂವರನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. 

ರೇಣುಕಾಕುಂಟ ಕಲ್ಯಾಣಕುಮಾರ್ (30), ದೇವೇಶ್ವರ ರೆಡ್ಡಿ (28) ಹಾಗೂ ಕೆ. ಪ್ರಕಾಶ್ (26) ಬಂಧಿತರು. ಇವರ ಅಕ್ರಮವನ್ನು ಪತ್ತೆ ಹಚ್ಚಿದ್ದ ಆದಾಯ ತೆರಿಗೆ ಇಲಾಖೆಯ ನಿರ್ದೇಶಕ ಸಿಬಿಚೆನ್ ಮ್ಯಾಥ್ಯೂ ಮಾ. 2ರಂದು ಠಾಣೆಗೆ ದೂರು ನೀಡಿದ್ದರು.

‘ಆದಾಯ ತೆರಿಗೆ ಪಾವತಿ ವ್ಯವಸ್ಥೆಯನ್ನು ಸರಳೀಕರಣಗೊಳಿಸಿರುವ ಇಲಾಖೆ, ಕೇಂದ್ರೀಕೃತ ಸಂಸ್ಕರಣಾ ಘಟಕ (ಸಿಪಿಸಿ) ಸ್ಥಾಪಿಸಿದೆ. ಈ ಘಟಕದ ದತ್ತಾಂಶ ನಿರ್ವಹಣೆ ಸಂಬಂಧ ಇನ್ಫೊಸಿಸ್ ಕಂಪನಿ ಜೊತೆ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯಡಿಯಲ್ಲೇ ಇನ್ಫೋಸಿಸ್ ಉದ್ಯೋಗಿ ರೇಣುಕಾಕುಂಟ ಕಲ್ಯಾಣಕುಮಾರ್ ಲೆಕ್ಕಾಧಿಕಾರಿ ಆಗಿ ಕೆಲಸ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು. 

‘ತೆರಿಗೆ ಪಾವತಿ ವ್ಯವಸ್ಥೆ ಬಗ್ಗೆ ತಿಳಿದಿದ್ದ ರೇಣುಕಾಕುಂಟ, ಹಲವು ತೆರಿಗೆದಾರರ ದತ್ತಾಂಶವನ್ನೂ ತನ್ನ ಬಳಿ ಇಟ್ಟುಕೊಂಡಿದ್ದ. ಅದನ್ನೇ ಬಳಸಿಕೊಂಡು ಸ್ನೇಹಿತರೇ ಆಗಿರುವ ದೇವೇಶ್ವರ ಹಾಗೂ ಪ್ರಕಾಶ್ ಜೊತೆ ಸೇರಿ ಕೃತ್ಯ ಎಸಗಿದ್ದ’ ಎಂದು ವಿವರಿಸಿದರು. 

ತೆರಿಗೆದಾರರಿಗೆ ಸಂದೇಶ ಕಳುಹಿಸುತ್ತಿದ್ದ: ‘ತೆರಿಗೆ ಪಾವತಿ ಮಾಡಿದವರ ಮೊಬೈಲ್‌ ನಂಬರ್‌ಗೆ ಸಂದೇಶ ಕಳುಹಿಸುತ್ತಿದ್ದ ಆರೋಪಿ ರೇಣುಕಾಕುಂಟ, ‘ನಾನು ನಿಮಗೆ 7 ದಿನದೊಳಗೆ ತೆರಿಗೆ ಮರುಪಾವತಿ ಮಾಡಿಸಿಕೊಡುತ್ತೇನೆ. ಇದಕ್ಕೆ ನೀವು ಶೇ 4ರಷ್ಟು ಹಣವನ್ನು ಕಮಿಷನ್ ರೂಪದಲ್ಲಿ ನೀಡಬೇಕು’ ಎಂಬುದಾಗಿ ಹೇಳುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

‘ಸಂದೇಶವನ್ನು ನಂಬಿದ್ದ ಹಲವರು ಕಮಿಷನ್ ಕೊಟ್ಟು ತೆರಿಗೆ ಮರುಪಾವತಿ ಮಾಡಿಸಿಕೊಂಡಿದ್ದಾರೆ. ಇನ್ನು ಹಲವರು ಮರು ಪಾವತಿ ಮಾಡಿಸಿಕೊಳ್ಳುವ ಹಂತದಲ್ಲಿದ್ದರು. ಆರೋಪಿಗಳ ಕಮಿಷನ್ ದಂಧೆ ಬಗ್ಗೆ ಅನುಮಾನಗೊಂಡಿದ್ದ ಇಲಾಖೆಯ ನಿರ್ದೇಶಕ ಸಿಬಿಚೆನ್ ಮ್ಯಾಥ್ಯೂ ಆಂತರಿಕ ತನಿಖೆ ನಡೆಸಿದ್ದರು’.

‘ನಂಬಿಕೆ ದ್ರೋಹ ಹಾಗೂ ವಂಚನೆ ಆರೋಪದಡಿ ರೇಣುಕಾಕುಂಟ ಸೇರಿ ಮೂವರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ವಿವರಿಸಿದರು.

ಪ್ರಕರಣ ಸಂಬಂಧ ಪ್ರತಿಕ್ರಿಯೆ ಪಡೆಯಲು ಇನ್ಫೊಸಿಸ್ ಕಂಪನಿಯ ಪ್ರತಿನಿಧಿಗಳು ಲಭ್ಯರಾಗಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು