ಮಂಗಳವಾರ, ಅಕ್ಟೋಬರ್ 27, 2020
24 °C
ಸ್ಥಳೀಯರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ: ನೋಡಲ್‌ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತ ಸೂಚನೆ

ವಾರದಲ್ಲಿ ಮೂರು ಬಾರಿ ಬೆಳಿಗ್ಗೆ 6.30ಕ್ಕೆ ವಾರ್ಡ್‌ ಪರಿವೀಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಗಿದರೂ ಜನರಿಗೆ ಬಿಬಿಎಂಪಿ ಸೇವೆಯಲ್ಲಿ ವ್ಯತ್ಯಯ ಆಗಬಾರದು ಎಂಬ ಕಾರಣಕ್ಕೆ ಬಿಬಿಎಂಪಿ ಆಯುಕ್ತ  ಎನ್‌.ಮಂಜುನಾಥ ‍ಪ್ರಸಾದ್‌ ಅವರು ಪ್ರತಿ ವಾರ್ಡ್‌ಗೂ ಹಿರಿಯ ಅಧಿಕಾರಿಯೊಬ್ಬರನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಿದ್ದಾರೆ. ನೋಡಲ್‌ ಅಧಿಕಾರಿಗಳು ವಾರದಲ್ಲಿ ಮೂರು ಬಾರಿ ಬೆಳಿಗ್ಗೆ 6.30ಕ್ಕೆ ವಾರ್ಡ್ ಪರಿವೀಕ್ಷಣೆ ನಡೆಸಬೇಕು. ಜನರೊಂದಿಗೆ ಬೆರೆತು, ತಾಳ್ಮೆಯಿಂದ ಅವರ ಸಮಸ್ಯೆ ಆಲಿಸಬೇಕು. ಕುಂದು-ಕೊರತೆಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.

ವಾರ್ಡ್‌ಗಳ ನೋಡಲ್ ಅಧಿಕಾರಿಗಳ ಜೊತೆ ಪಾಲಿಕೆ ಆಯುಕ್ತರು ಬುಧವಾರ ವಿಡಿಯೊ ಸಂವಾದ ನಡೆಸಿ, ಅವರು ನಿಭಾಯಿಸಬೇಕಾದ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು.

‘ಆಯಾ ವಾರ್ಡಿನ ಎಲ್ಲ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಬೇಕು. ಪೌರಕಾರ್ಮಿಕರ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪೌರಕಾರ್ಮಿಕರು, ಆಟೊ ಟಿಪ್ಪರ್, ಕಾಂಪ್ಯಾಕ್ಟರ್‌ಗಳ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆಯಬೇಕು. ಬಯೊಮೆಟ್ರಿಕ್ ಹಾಜರಾತಿ ಪಡೆಯುವುದನ್ನು ಖಾತರಿಪಡಿಸಿಕೊಳ್ಳಬೇಕು. ಹಸಿ, ಒಣ ಮತ್ತು ನೈರ್ಮಲ್ಯ ಕಸಗಳನ್ನು ವಿಂಗಡಿಸಿ ಪ್ರತ್ಯೇಕವಾಗಿ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆಯಬೇಕು’ ಎಂದರು.

ಆಯಾ ವಾರ್ಡ್‌ನ ಮೂಲಸೌಕರ್ಯಗಳ ಮೇಲ್ವಿಚಾರಣೆಯೂ ನೋಡಲ್‌ ಅಧಿಕಾರಿಗಳ ಹೊಣೆ. ವಾರ್ಡ್‌ನ ರಸ್ತೆಗಳ ಗುಂಡಿಗಳನ್ನು ಮುಚ್ಚುವುದು, ಪಾದಚಾರಿ ಮಾರ್ಗ ಹಾಗೂ ಬೀದಿದೀಪಗಳ ದುರಸ್ತಿ, ಪಾದಚಾರಿ ಮಾರ್ಗ ಒತ್ತುವರಿ ಮಾಡಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವ ಮಳಿಗೆಗಳನ್ನು ತೆರವುಗೊಳಿಸುವುದು, ಚರಂಡಿಗಳಲ್ಲಿ ಹೂಳೆತ್ತುವುದು, ಪದೇ ಪದೇ ಕಸ ಸುರಿಯುವ ಸ್ಥಳಗಳನ್ನು ಗುರುತಿಸಿ ಅಲ್ಲಿನ ಕಸವನ್ನು ತೆರವುಗೊಳಿಸುವುದು, ಉದ್ಯಾನ ನಿರ್ವಹಣೆ ಮುಂತಾದ ಕಾಮಗಾರಿಗಳ ಉಸ್ತುವಾರಿಯನ್ನೂ ನೋಡಿಕೊಳ್ಳಬೇಕು ಎಂದು ನೆನಪಿಸಿದರು. 

ವಾರ್ಡ್ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಾಗ ಭೇಟಿ ನೀಡಿ ತಪಾಸಣೆ ನಡೆಸಬೇಕು. ವಾರ್ಡ್‌ನ ಅಧಿಕಾರಿಗಳು ಹಾಗೂ ನಿವಾಸಿಗಳ  ಕ್ಷೇಮಾಭಿವೃದ್ಧಿ ಸಂಘಗಳ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಬೇಕು. ಈ ಸಮಿತಿ ತಿಂಗಳಿನ ಮೊದಲನೇ ಮತ್ತು ಮೂರನೇ ಶನಿವಾರ ಸಭೆ ನಡೆಸಿ ವಾರ್ಡ್‌ನ ಕುಂದುಕೊರತೆಗಳ ಬಗ್ಗೆ ಚರ್ಚಿಸಬೇಕು. ನಡಾವಳಿ ಸಿದ್ಧಪಡಿಸಿ ಅದನ್ನು ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.

ಮುಖ್ಯಾಂಶ

* ತಿಂಗಳಿಗೆರಡು ಬಾರಿ ವಾರ್ಡ್‌ ಸಮಿತಿ ಸಭೆ ನಡೆಸಬೇಕು

* ಮೂಲಸೌಕರ್ಯ ಮೇಲ್ವಿಚಾರಣೆ ನೋಡಲ್‌ ಅಧಿಕಾರಿಯ ಹೊಣೆ

*  ವಾರ್ಡ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಾಗ ಭೇಟಿ ನೀಡಿ ಪರಿಶೀಲಿಸಬೇಕು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು