ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಗ್ಗೆರೆ ದುರ್ಗಾ ಪರಮೇಶ್ವರಿ ದೇವರ ವಿಗ್ರಹ ಪ್ರತಿಷ್ಠಾಪನೆ: ಯಥಾಸ್ಥಿತಿಗೆ ಆದೇಶ

Published 28 ಫೆಬ್ರುವರಿ 2024, 15:51 IST
Last Updated 28 ಫೆಬ್ರುವರಿ 2024, 15:51 IST
ಅಕ್ಷರ ಗಾತ್ರ

ಬೆಂಗಳೂರು: ‘ಯಶವಂತಪುರ ಹೋಬಳಿ ಚೌಡೇಶ್ವರಿ ನಗರದ ಲಗ್ಗೆರೆಯ 50 ಅಡಿ ಮುಖ್ಯರಸ್ತೆಯಲ್ಲಿ ನಿರ್ಮಾಣವಾಗಿದೆ ಎನ್ನಲಾದ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಮಾರ್ಚ್‌ 4ರಂದು ನಡೆಸಲು ಉದ್ದೇಶಿಸಿರುವ ದೇವರ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಪೊಲೀಸರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

‘ಕೋವಿಡ್‌-19ರ ಲಾಕ್‌ಡೌನ್‌ ನಿರ್ಬಂಧವಿದ್ದ ದಿನಗಳಲ್ಲಿ ಲಗ್ಗೆರೆ ಮುಖ್ಯರಸ್ತೆಯ ಪಾದಚಾರಿ ಮಾರ್ಗ ಒತ್ತುವರಿ ಮಾಡಿ ದೇವಾಲಯ ನಿರ್ಮಿಸಲಾಗಿದೆ’ ಎಂದು ಆರೋಪಿಸಿ ಡಿ.ದಾಕ್ಷಾಯಣಿ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ ಪ್ರಸಾದ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಯಥಾಸ್ಥಿತಿ ಕಾಯ್ದುಕೊಳ್ಳುವುದನ್ನು ಬಿಬಿಎಂಪಿ ವಾರ್ಡ್‌ ನಂ. 73ರ ಹಾಲಿ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ ಖಾತರಿಪಡಿಸಬೇಕು. ಈ ವಿಷಯದಲ್ಲಿ ಅಗತ್ಯಬಿದ್ದರೆ ಆರ್‌ಎಂಸಿ ಯಾರ್ಡ್‌ ಸಹಾಯಕ ಪೊಲೀಸ್‌ ಆಯುಕ್ತ ಹಾಗೂ ರಾಜಗೋಪಾಲ ನಗರ ಠಾಣೆ ಇನ್‌ಸ್ಪೆಕ್ಟರ್‌ ನೆರವು ಪಡೆಯಬಹುದು. ದೇವಸ್ಥಾನ ನಿರ್ಮಾಣವಾಗಿದೆ ಎನ್ನಲಾದ ಪಾದಚಾರಿ ಮಾರ್ಗದಲ್ಲಿ ಸಂಬಂಧಿಸಿದ ನಗರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕ, ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಸೇರ್ಪಡೆ: ಅರ್ಜಿದಾರರ ಪರ ವಕೀಲ ಎನ್‌.ಪಿ.ಅಮೃತೇಶ್‌ ಮನವಿಯಂತೆ ಆರ್‌ಎಂಸಿ ಯಾರ್ಡ್‌ ಸಹಾಯಕ ಪೊಲೀಸ್‌ ಆಯುಕ್ತರು ಮತ್ತು ರಾಜಗೋಪಾಲ ನಗರ ಠಾಣೆ  ಇನ್‌ಸ್ಪೆಕ್ಟರ್‌ ಅವರನ್ನು ಅರ್ಜಿಯಲ್ಲಿ ಹೆಚ್ಚುವರಿ ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡಲು ನ್ಯಾಯಪೀಠ ಇದೇ ವೇಳೆ ಅದೇಶಿಸಿದೆ.

ಅತೃಪ್ತಿ: ವಿವಾದಿತ ಜಾಗದ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು 2023ರ ಡಿಸೆಂಬರ್ 21ರಂದು ಮತ್ತು 2024ರ ಫೆಬ್ರುವರಿ 20ರಂದು ಹೊರಡಿಸಿದ್ದ ಆದೇಶವನ್ನು ಪಾಲಿಸದ ನಗರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕರ ಕ್ರಮದ ಬಗ್ಗೆ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

‘ನ್ಯಾಯಾಲಯದ ಆದೇಶದಂತೆ ವಿವಾದಿತ ಸ್ಥಳದ ಪರಿಶೀಲನೆ ನಡೆಸಿ ವರದಿ ಸಲ್ಲಿಸಿಲ್ಲ. ವರದಿ ಸಲ್ಲಿಸದೇ ಇರುವುದಕ್ಕೆ ಕಾರಣವನ್ನೂ ತಿಳಿಸಿಲ್ಲ. ಇದು ನ್ಯಾಯಾಲಯದ ನಿರ್ದೇಶನವನ್ನು ಉದ್ದೇಶಪೂರ್ವಕವಾಗಿ ಪಾಲಿಸಿಲ್ಲ ಎಂಬುದನ್ನು ತೋರಿಸುತ್ತದೆ. ಮತ್ತೊಂದೆಡೆ ರಾಜಗೋಪಾಲ ನಗರ ಠಾಣಾ ಪೊಲೀಸರು ಕೋರ್ಟ್‌ನ ಈ ಆದೇಶದ ಪ್ರತಿಯನ್ನು ದುರ್ಗಾ ಪರಮೇಶ್ವರಿ ಸೇವಾ ಸಮಿತಿಗೂ ತಲುಪಿಸಿಲ್ಲ’ ಎಂದು ನ್ಯಾಯಪೀಠ ಅತೃಪ್ತಿ ಹೊರಹಾಕಿದೆ.

ಪ್ರಕರಣವೇನು?: ‘ಕೋವಿಡ್‌-19ರ ಲಾಕ್‌ ಡೌನ್‌ ನಿರ್ಬಂಧವಿದ್ದ ದಿನಗಳಲ್ಲಿ ಲಗ್ಗೆರೆಯ 50 ಅಡಿ ಮುಖ್ಯ ರಸ್ತೆಯ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿ ದುರ್ಗಾ ಪರಮೇಶ್ವರಿ ಸೇವಾ ಸಮಿತಿಯು ದುರ್ಗಾ ಪರಮೇಶ್ವರಿ ದೇವಸ್ಥಾನ ನಿರ್ಮಿಸಿದೆ. ಹಾಗಾಗಿ, ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ತೆರವುಗೊಳಿಸಲು ಬಿಬಿಎಂಪಿಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

‘ದೇವಾಲಯದಲ್ಲಿ ಮಾರ್ಚ್‌ 4ರಂದು ದೇವರ ವಿಗ್ರಹ ಪ್ರತಿಷ್ಠಾಪನೆ ನಿಗದಿಯಾಗಿದೆ. ಒಂದೊಮ್ಮೆ ದೇವರ ವಿಗ್ರಹ ಪ್ರತಿಷ್ಠಾಪನೆ ನೆರವೇರಿದರೆ, ಒತ್ತುವರಿ ತೆರವು ಕಷ್ಟವಾಗುತ್ತದೆ ಎಂಬುದನ್ನು ಇತ್ತೀಚಿನ ವಿಚಾರಣೆ ವೇಳೆ ಅರ್ಜಿದಾರರು ನ್ಯಾಯಪೀಠದ ಗಮನಕ್ಕೆ ತಂದಿದ್ದರು. ಇದನ್ನು ಪರಿಗಣಿಸಿದ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು, ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT