ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಡಿಆರ್‌ ಅಕ್ರಮ ಸಂಗ್ರಹ ಜಾಲದ ತನಿಖೆ ಚುರುಕು

ಕಾರ್ಯಾಚರಣೆ: ಪೊಲೀಸ್‌ ಕಾನ್‌ಸ್ಟೆಬಲ್‌, ಮಧ್ಯವರ್ತಿ ಬಂಧಿಸಿದ ಸಿಸಿಬಿ
Published : 8 ಆಗಸ್ಟ್ 2024, 23:30 IST
Last Updated : 8 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ಸಾರ್ವಜನಿಕರ ಮೊಬೈಲ್ ಕರೆ ವಿವರಗಳನ್ನು(ಸಿಡಿಆರ್) ಅಕ್ರಮವಾಗಿ ಸಂಗ್ರಹಿಸಿ, ಕಾನೂನು ಬಾಹಿರ ಚಟುವಟಿಕೆ ನಡೆಸುವವರಿಗೆ ಹಾಗೂ ಪ್ರೇಮಿಗಳಿಗೆ ನೀಡುತ್ತಿದ್ದ ಜಾಲದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ಮೇನಲ್ಲಿ ಮೂರು ಪತ್ತೆದಾರಿ ಏಜೆನ್ಸಿಗಳ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, 10 ಮಂದಿಯನ್ನು ಬಂಧಿಸಿದ್ದರು. ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್‌ ಸಿಬ್ಬಂದಿ ಮುನಿರತ್ನ ಹಾಗೂ ಪ್ರಕರಣದ ಸೂತ್ರಧಾರ ನಾಗೇಶ್ವರ ರೆಡ್ಡಿ ಅವರನ್ನು ಬಂಧಿಸಿದ್ದಾರೆ. 

ಸಿಐಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುನಿರತ್ನ ಅವರು ಇತ್ತೀಚೆಗೆ ಕೋಲಾರಕ್ಕೆ ವರ್ಗಾವಣೆಗೊಂಡಿದ್ದರು. ಸಿಐಡಿ ಕಚೇರಿಯಿಂದ ಸಿಡಿಆರ್‌ಗಳನ್ನು ಸಂಗ್ರಹಿಸಿ ಆರೋಪಿಗಳಿಗೆ ನೀಡುತ್ತಿದ್ದರು ಎಂದು ಪೊಲೀಸರು ಹೇಳಿದರು.

‘ಮೇನಲ್ಲಿ ಗೋವಿಂದರಾಜನಗರ ಬಳಿಯ ಪ್ರಶಾಂತನಗರದ ‘ಮಹಾನಗರಿ ಡಿಟೆಕ್ಟಿವ್’, ‘ರಾಜಧಾನಿ ಕಾರ್ಪೊರೇಟ್ ಸರ್ವೀಸ್’ ಹಾಗೂ ಬಸವೇಶ್ವರನಗರದ ‘ಎಲಿಗೆಂಟ್ ಡಿಟೆಕ್ಟಿವ್’ ಏಜೆನ್ಸಿಗಳ ಮೇಲೆ ದಾಳಿ ನಡೆಸಲಾಗಿತ್ತು. ಆಗ ಹಲವರನ್ನು ಬಂಧಿಸಲಾಗಿತ್ತು. ಇನ್ನೂ ಹಲವರು ಭಾಗಿ ಆಗಿರುವ ಮಾಹಿತಿ ಸಿಸಿಬಿಗೆ ಸಿಕ್ಕಿತ್ತು. ಅದನ್ನು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ‘ ಎಂದು ಮೂಲಗಳು ಹೇಳಿವೆ.

‘ಮುನಿರತ್ನ ಅವರು ಸಿಐಡಿ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆಗ ಇಲಾಖೆಯ ಹಿರಿಯ ಅಧಿಕಾರಿಗಳು ಕೆಲವು ಪ್ರಕರಣಗಳ ಸಂಬಂಧ ಅಧಿಕೃತವಾಗಿ ಸಿಡಿಆರ್ ಪಡೆಯಲು ಸರ್ವಿಸ್ ಪ್ರೊವೈಡರ್​ಗಳಿಗೆ ನೀಡುವ ಪತ್ರದಲ್ಲಿ ತನಗೆ ಬೇಕಾದ ಕೆಲವು ಮೊಬೈಲ್‌ ಸಂಖ್ಯೆ ಸೇರಿಸಿ ಸಿಡಿಆರ್ ಪಡೆಯುತ್ತಿದ್ದರು. ಸಿಡಿಆರ್ ಬಂದ ನಂತರ ಅಧಿಕೃತವಾದ ಸಿಡಿಆರ್​ಗಳನ್ನು ಅಧಿಕಾರಿಗಳಿಗೆ ನೀಡಿ ಅನಧಿಕೃತ ಸಿಡಿಆರ್​​ಗಳನ್ನು ಮಧ್ಯವರ್ತಿ ನಾಗೇಶ್ವರ ರೆಡ್ಡಿಗೆ ₹15ರಿಂದ ₹20 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಅನುಮಾನ ಬಂದು ಪರಿಶೀಲನೆ:


ಅನುಮಾನ ಬಂದು ಪರಿಶೀಲಿಸಿದಾಗ ಈ ವ್ಯವಸ್ಥಿತ ಜಾಲ ಪತ್ತೆಯಾಗಿದೆ. ಸಿಡಿಆರ್ ಪಡೆಯುತ್ತಿದ್ದವರ ಪೈಕಿ ಪತಿ-ಪತ್ನಿ ಮತ್ತು ಪ್ರೇಮಿಗಳೇ ಹೆಚ್ಚಾಗಿದ್ದರು. ತಮ್ಮ ಪ್ರೀತಿಪಾತ್ರರಾದವರು ಯಾರ ಸಂಪರ್ಕದಲ್ಲಿ ಇದ್ದಾರೆ ಎಂಬುದನ್ನು ಪತ್ತೆಹಚ್ಚಲು ಈ ಪತ್ತೇದಾರಿ ಏಜೆನ್ಸಿಗಳ ಮೂಲಕ ಸಿಡಿಆರ್‌ ಪಡೆದುಕೊಳ್ಳುತ್ತಿದ್ದರು ಎಂದು ಗೊತ್ತಾಗಿದೆ.

ರಾಜಕಾರಣಿಗಳೂ ಸಿಡಿಆರ್‌ ಪಡೆದಿರುವ ಶಂಕೆ?:


ತಮ್ಮ ವಿರೋಧಿಗಳ ಕಾರ್ಯತಂತ್ರವನ್ನು ಪತ್ತೆಹಚ್ಚಲು ಕೆಲವು ರಾಜಕಾರಣಿಗಳೂ ಇದೇ ಪತ್ತೇದಾರಿ ಏಜೆನ್ಸಿಗಳ ಮೊರೆಹೋಗಿರುವ ಅನುಮಾನ ತನಿಖಾ ತಂಡಕ್ಕೆ ಸಿಕ್ಕಿದೆ. ಆ ನಿಟ್ಟಿನಲ್ಲೂ ತನಿಖೆ ಸಾಗುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಅಪರಾಧ, ಕೌಟುಂಬಿಕ ಕಲಹ, ವೈಷಮ್ಯ, ಹಣಕಾಸು ವ್ಯವಹಾರ ಸೇರಿದಂತೆ ಹಲವು ಬಗೆಯ ಪ್ರಕರಣಗಳ ದೂರುದಾರರು ಹಾಗೂ ಸಂತ್ರಸ್ತರನ್ನು ಆರೋಪಿಗಳು ಸಂಪರ್ಕಿಸುತ್ತಿದ್ದರು. ಪೊಲೀಸರು ಮಾಡುವ ಕೆಲಸವನ್ನು ತಾವೇ ಮಾಡಿಕೊಡುವುದಾಗಿ ಹೇಳಿ ನಂಬಿಸುತ್ತಿದ್ದರು. ಆಂತರಿಕ ತನಿಖೆ ನಡೆಸಿ ಪುರಾವೆ ಸಮೇತ ವರದಿ ನೀಡುವುದಾಗಿ ಹೇಳುತ್ತಿದ್ದರು. ಇದಕ್ಕಾಗಿ ಶುಲ್ಕ ಸಹ ನಿಗದಿ ಪಡಿಸಿದ್ದರು’ ಎಂದು ಮೂಲಗಳು ಹೇಳಿವೆ.

ಎಲ್ಲಿಗೆ ಮಾರಾಟ?

ಸಿಐಡಿ ಸಿಬ್ಬಂದಿಯಿಂದ ಪಡೆದ ಸಿಡಿಆರ್‌ಗಳನ್ನು ಮಧ್ಯವರ್ತಿ ನಾಗೇಶ್ವರ ರಾವ್ ‘ಮಹಾನಗರಿ ಡಿಟೆಕ್ಟಿವ್’ ‘ರಾಜಧಾನಿ ಕಾರ್ಪೊರೇಟ್ ಸರ್ವೀಸ್’ ಹಾಗೂ ಬಸವೇಶ್ವರನಗರದ ‘ಎಲಿಗೆಂಟ್ ಡಿಟೆಕ್ಟಿವ್’ಗೆ ಕೊಟ್ಟು ಹಣ ಪಡೆಯುತ್ತಿದ್ದರು. ಪ್ರತಿ ಬಾರಿ ಸಿಡಿಆರ್ ಕೊಡುವಾಗ ನಾಗೇಶ್ವರ ರಾವ್‌ ಮತ್ತಷ್ಟು ನಂಬರ್‌ ಪಡೆದು ಮುನಿರತ್ನ ಅವರಿಗೆ ನೀಡುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

ಅನುಮತಿ ಇಲ್ಲದೇ ಪರಿಶೀಲನೆ ಅಪರಾಧ ‘ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರ ಸಿಡಿಆರ್ ಪಡೆಯಲು ಕಾನೂನಿನ್ವಯ ತನಿಖಾಧಿಕಾರಿಗಳಿಗೆ ಮಾತ್ರ ಅಧಿಕಾರ ಇದೆ. ಈ ಸಿಡಿಆರ್ ಅನ್ನು ಪಡೆಯಲು ಕಮಿಷನರೇಟ್‌ನಲ್ಲಿ ಡಿಸಿಪಿ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಎಸ್‌ಪಿಗಳ ಅನುಮತಿ ಬೇಕು. ಸಿಡಿಆರ್ ಪಡೆಯುವ ಮುನ್ನ ಅಪರಾಧ ಪ್ರಕರಣದ ಆರೋಪಿ ಪಾತ್ರದ ಕುರಿತು ಮಾಹಿತಿ ಸಂಗ್ರಹಿಸಬೇಕು. ಈ ಕಾನೂನು ಪ್ರಕ್ರಿಯೆ ಬಳಿಕ ಸಿಡಿಆರ್ ತನಿಖಾಧಿಕಾರಿಗೆ ಸಿಗುತ್ತದೆ. ಅನುಮತಿಯಿಲ್ಲದೇ ಪರಿಶೀಲನೆ ಅಪರಾಧ ಆಗುತ್ತದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT