ಗುರುವಾರ , ಡಿಸೆಂಬರ್ 8, 2022
18 °C

ಮಹ್ಸಾ ಅಮೀನಿ ಹತ್ಯೆ: ಇರಾನ್ ಸರ್ಕಾರದ ವಿರುದ್ಧ ಮೌನ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇರಾನ್‌ ಮಹಿಳೆಯರ ಹೋರಾಟವನ್ನು ಬೆಂಬಲಿಸಿ ಇರಾನ್‌ನ ಇಬ್ಬರು ಮಹಿಳೆಯರು ನಗರದ ಚರ್ಚ್‌ ಸ್ಟ್ರೀಟ್‌ನಲ್ಲಿ ಮೌನ ಪ‍್ರತಿಭಟನೆ ನಡೆಸಿದರು. #MahsaAmini ಹ್ಯಾಷ್‌ಟ್ಯಾಗ್‌ ಅನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.

ನಗರದ ರಾಜೀವಗಾಂಧಿ ವಿಶ್ವವಿದ್ಯಾಲಯದಲ್ಲಿ ಫಾರ್ಮಸಿ ಅಧ್ಯಯನ ಮಾಡುತ್ತಿರುವ ಇರಾನ್‌ನ ಮಹಶಾ ಮತ್ತು ಇಲ್ಲಿಯೇ ನೆಲೆಸಿರುವ ನಿಕೊ ಅವರು ಭಿತ್ತಿಪತ್ರ, ಬೀದಿ ನಾಟಕದ ಮೂಲಕ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ಮೌನ ಪ್ರತಿಭಟನೆ ನಡೆಸಿದರು.

‘ಹಿಜಾಬ್ ಅನ್ನು ಸರಿಯಾಗಿ ಧರಿಸಿಲ್ಲ ಎಂಬ ಕಾರಣಕ್ಕೆ ಇರಾನ್‌ನ ಖುರ್ದ್‌ ಪ್ರಾಂತ್ಯದಲ್ಲಿ ಮಹ್ಸಾ ಅಮೀನಿ ಎಂಬ ಯುವತಿಯನ್ನು ಬಂಧಿಸಿದ್ದ ಪೊಲೀಸರು, ಚಿತ್ರಹಿಂಸೆ ನೀಡಿದ್ದರು. ಮೂರು ದಿನಗಳ ಕಾಲ ಠಾಣೆಯಲ್ಲಿದ್ದ ಅಮೀನಿ ಮೃತಪಟ್ಟರು. ಆಕೆಯ ಸಾವಿಗೂ ನಮಗೂ ಸಂಬಂಧವಿಲ್ಲ ಎಂದು ಸರ್ಕಾರ ಈಗಲೂ ಹೇಳುತ್ತಿದೆ. ಆಕೆಯ ಸಾವಿಗೆ ಪೊಲೀಸರೇ ನೇರ ಹೊಣೆ’ ಎಂದು ಮಹಶಾ ತಿಳಿಸಿದರು.

‘ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರವು ಹಲವು ತಂತ್ರಗಳನ್ನು ಹೂಡಿದೆ. ಪ್ರತಿಭಟನಕಾರರ ಮೇಲೆ ಸೇನೆಯು ಬಲ ಪ್ರಯೋಗ ನಡೆಸುತ್ತಿದೆ. ಮಹಿಳಾ ಪ್ರತಿಭಟನಕಾರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗುತ್ತಿದೆ. ಹಿಜಾಬ್‌ ವಿರೋಧಿ ಹೋರಾಟವನ್ನು ಬೆಂಬಲಿಸಿದ ಪತ್ರಕರ್ತರು, ಮಾನವ ಹಕ್ಕು ಹೋರಾಟಗಾರರು, ಚಿತ್ರ ನಿರ್ದೇಶಕರು ಸೇರಿ ಹಲವರನ್ನು ಇರಾನ್‌ ಸರ್ಕಾರ ಬಂಧಿಸಿದೆ. ಇರಾನ್ ಮಹಿಳೆಯರ ಹೋರಾಟವನ್ನು ಬೆಂಬಲಿಸಿ ವಿಶ್ವದಾದ್ಯಂತ ಪತ್ರಿಭಟನೆಗಳು ನಡೆಯುತ್ತಿವೆ’ ಎಂದರು.

‘ಇದು ಇಸ್ಲಾಂ ವಿರುದ್ಧದ ಯುದ್ಧವಲ್ಲ; ಸ್ವಾತಂತ್ರ್ಯ, ಘನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಅಲ್ಲಿನ ಸರ್ಕಾರವನ್ನು ಧರ್ಮಾಂಧತೆಯಿಂದ ದೂರ ಮಾಡುವ ಹೋರಾಟವಾಗಿದೆ. ಉಕ್ರೇನ್ ಯುದ್ಧಕ್ಕೆ ಬೆಂಬಲ ವ್ಯಕ್ತಪಡಿಸಿದಂತೆ ಈ ಹೋರಾಟಕ್ಕೆ ಬೆಂಬಲ ನೀಡಿ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.