ಗುರುವಾರ , ಮೇ 19, 2022
23 °C
ವಾರ್ಡ್‌ಸಭೆಯಿಂದ ಹಿಡಿದು ಕೌನ್ಸಿಲ್‌ ಸಭೆಯವರೆಗಿನ ಚರ್ಚೆ, ನಿರ್ಣಯ ಜನರಿಗೆ ಮುಕ್ತವಾಗಿ ಲಭಿಸಲಿ * ಎಲ್ಲ ಕಾಮಗಾರಿಗಳ ಸಂಪೂರ್ಣ ವಿವರ ವೆಬ್‌ಸೈಟ್‌ನಲ್ಲೇ ಸಿಗಲಿ

ಐಟಿ ರಾಜಧಾನಿಯಲ್ಲಿ ಡಿಜಿಟಲ್‌ ಆಡಳಿತ ಬೇಡವೇ?

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದ ಮಾಹಿತಿ ತಂತ್ರಜ್ಞಾನದ ರಾಜಧಾನಿ ಬೆಂಗಳೂರು ನಗರ. ಜಗತ್ತಿನ ಅನೇಕ ದೇಶಗಳ ಸಮಸ್ಯೆಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ಹುಡುಕಿ ಕೊಡುತ್ತಿರುವ ಸಿಲಿಕಾನ್‌ ಸಿಟಿ ನಮ್ಮದು. ತಂತ್ರಜ್ಞಾನಗಳನ್ನು ಬಳಸಿ ಆಡಳಿತವನ್ನು ಹೇಗೆ ಜನಸ್ನೇಹಿಯನ್ನಾಗಿ ರೂಪಿಸಬಹುದು ಎಂಬುದಕ್ಕೆ ಮೇಲ್ಪಂಕ್ತಿ ಹಾಕಿಕೊಡಲು ‘ಬಿಬಿಎಂಪಿ ಕಾಯ್ದೆ 2020’ ಅತ್ಯುತ್ತಮ ಅವಕಾಶದ ರೂಪದಲ್ಲಿ ಒದಗಿಬಂದಿತ್ತು. ಆದರೆ, ಈ ಅವಕಾಶವನ್ನೂ ಕೈಚೆಲ್ಲಲಾಗಿದೆ.

ಬಿಬಿಎಂಪಿ ಕಾಯ್ದೆಯನ್ನು ಅವಲೋಕಿಸಿದರೆ ಆಡಳಿತ ವ್ಯವಸ್ಥೆಯಲ್ಲಿ ಡಿಜಿಟಲ್‌ ವ್ಯವಸ್ಥೆ ಅಳವಡಿಸಿಕೊಳ್ಳುವುದರ ಬಗ್ಗೆ ಶಾಸನ ರೂಪಿಸುವವರಲ್ಲಿ ದೂರದೃಷ್ಟಿಯ ಕೊರತೆ ಇರುವುದು ಢಾಳಾಗಿ ಕಾಣಿಸುತ್ತದೆ ಎನ್ನುತ್ತಾರೆ ನಗರಾಡಳಿತದ ನೀತಿ ನಿರೂಪಣಾ ತಜ್ಞರು.

ರಾಜ್ಯ ಮಾತ್ರವಲ್ಲ ದೇಶದಲ್ಲೇ ಡಿಜಿಟಲ್‌ ಸಾಕ್ಷರತೆ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ನಗರಗಳಲ್ಲಿ ಬೆಂಗಳೂರು ಒಂದು. ಯಾವುದೇ ತಂತ್ರಜ್ಞಾನ ಸ್ನೇಹಿ ಆಡಳಿತ ಸುಧಾರಣೆಗಳ ಪ್ರಾಯೋಗಿಕ ಜಾರಿಗೆ ಸೂಕ್ತ ವಾತಾವರಣ ಈ ನಗರದಲ್ಲಿದೆ. ಈ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳು ಈ ಹಿಂದೆಯೂ ನಡೆದಿವೆ. ವಿಶ್ವ ಬ್ಯಾಂಕ್‌ ಗೊತ್ತುಪಡಿಸಿರುವ ಉದ್ಯಮ ಸ್ನೇಹಿ ಆಡಳಿತ ಸುಧಾರಣಾ ಕ್ರಮಗಳ ಜಾರಿಗೆ ಆಯ್ಕೆ ಮಾಡಲಾಗಿರುವ ನಗರಗಳಲ್ಲಿ ಬೆಂಗಳೂರು ಕೂಡಾ ಸೇರಿದೆ. ಹಾಗಾಗಿ ಇಲ್ಲಿನ ಆಡಳಿತ ವ್ಯವಸ್ಥೆಯನ್ನು ಹಂತ ಹಂತವಾಗಿ ಡಿಜಿಟಲ್‌ ಸ್ನೇಹಿಯಾಗಿ ರೂಪಿಸುವ ಮೂಲಕ ಪಾರದರ್ಶಕತೆ ತರುವ ಅನಿವಾರ್ಯವೂ ಸರ್ಕಾರಕ್ಕಿದೆ.

ಬಿಬಿಎಂಪಿ ಕೌನ್ಸಿಲ್‌ನ ಮಾಸಿಕ ಸಭೆಗಳನ್ನು ಜನರು ಮನೆಯಲ್ಲೇ ಕುಳಿತು ಪಾಲಿಕೆ ವೆಬ್‌ಸೈಟ್‌ನಲ್ಲಿ ನೇರವಾಗಿ ನೋಡಲು ಅವಕಾಶ ಕಲ್ಪಿಸಲಾಗಿದೆ. ಕಟ್ಟಡ ಪರವಾನಗಿ ಪಡೆಯುವ ವ್ಯವಸ್ಥೆಯನ್ನೂ ಪೂರ್ಣ ಪ್ರಮಾಣದಲ್ಲಿ ಆನ್‌ಲೈನ್‌ ವ್ಯವಸ್ಥೆಗೆ ಅಳಪಡಿಸುವ ಪ್ರಯತ್ನಗಳು ನಡೆದಿವೆ. ಆಸ್ತಿ ತೆರಿಗೆಯನ್ನು ಆನ್‌ಲೈನ್‌ ರೂಪದಲ್ಲಿ ಪಾವತಿಸುವುದಕ್ಕೆ ಅವಕಾಶ ಕಲ್ಪಿಸಿದ್ದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಾರಿ (2020–21) ಇದುವರೆಗೆ ಪಾವತಿ ಆಗಿರುವ ತೆರಿಗೆಯಲ್ಲಿ ಆನ್‌ಲೈನ್‌ ಮೂಲಕ ಕಟ್ಟಿದವರೇ ಜಾಸ್ತಿ. ಕಾಮಗಾರಿಗಳ ವಿವರಗಳು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಲಭ್ಯ ಇವೆ. ಇವುಗಳಿಗೆಲ್ಲವೂ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಇವೆಲ್ಲವೂ ಡಿಜಿಟಲ್ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಅಂಬೆಗಾಲು ಮಾತ್ರ.

‘ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡುವುದಷ್ಟೇ ಡಿಜಿಟಲ್‌ ಆಡಳಿತವಲ್ಲ. ವಾರ್ಡ್‌ ಸಭೆ, ವಲಯ ಮಟ್ಟದ ಸಭೆ ಹಾಗೂ ಪಾಲಿಕೆ ಕೌನ್ಸಿಲ್‌ ಸಭೆಗಳ ಚರ್ಚೆಗಳನ್ನು ಜನ ಮನೆಯಲ್ಲೇ ಕುಳಿತು ಬಿಬಿಎಂಪಿ ವೆಬ್‌ ಪೋರ್ಟಲ್‌ನಲ್ಲಿ ನೋಡುವಂತಾಗಬೇಕು. ಬಿಬಿಎಂಪಿ ಆಡಳಿತ ವ್ಯವಸ್ಥೆಯ ವಿವಿಧ ಹಂತಗಳಲ್ಲಿ ಕೈಗೊಳ್ಳುವ ಪ್ರತಿಯೊಂದು ನಿರ್ಣಯಗಳೂ ವೆಬ್‌ ಪೋರ್ಟಲ್‌ ಮೂಲಕ ಜನರಿಗೆ ಲಭ್ಯವಾಗಬೇಕು. ಅವುಗಳ ಕುರಿತ ಮುಕ್ತ ಚರ್ಚೆಗೆ ವೇದಿಕೆ ಕಲ್ಪಿಸಬೇಕು. ಆಡಳಿತ ನೀತಿ ನಿರೂಪಣೆ, ಬಜೆಟ್‌ ರೂಪಿಸುವಿಕೆ, ಮೂಲಸೌಕರ್ಯ ಅಭಿವೃದ್ಧಿ ಮುಂತಾದ ಎಲ್ಲ ನಿರ್ಣಯಗಳನ್ನು ಕೈಗೊಳ್ಳುವುದಕ್ಕೆ ಮುನ್ನ ನೇರವಾಗಿ ಜನರಿಂದ ಅಭಿಪ್ರಾಯ ಪಡೆಯುವ ವ್ಯವಸ್ಥೆ ರೂಪಿಸುವುದು ಮುಖ್ಯ. ವೆಚ್ಚ ಮತ್ತು ವರಮಾನಗಳಿಗೆ ಸಂಬಂದಿಸಿದ ಮಾಹಿತಿಗಳೂ ಜನರಿಗೆ ಡಿಜಿಟಲ್‌ ವೇದಿಕೆ ಮೂಲಕ ನೇರವಾಗಿ ಸಿಗಬೇಕು’ ಎನ್ನುತ್ತಾರೆ ಸೆಂಟರ್‌ ಫಾರ್‌ ಅರ್ಬನ್‌ ಗವರ್ನನ್ಸ್‌ ಸ್ಟಡೀಸ್‌ ಆ್ಯಂಡ್‌ ಪಾಲಿಸಿ ರಿಸರ್ಚ್‌ ಸಂಸ್ಥೆಯ ಸಿ.ಆರ್‌.ರವೀಂದ್ರ.

‘ಸಮಗ್ರ ಡಿಜಿಟಲ್‌ ಆಡಳಿತದ ರೂಪರೇಷೆಗಳಿಗೆ ಈಗ ಯಾವುದೇ ಕಾನೂನಿನ ಬೆಂಬಲವಿಲ್ಲ. ಉದಾಹರಣೆಗ ನಿರ್ದಿಷ್ಟ ವಾರ್ಡ್‌ಗೆ ಸಂಬಂಧಿಸಿ ಬಿಬಿಎಂಪಿ ಯಾವುದೋ ಕಾಮಗಾರಿ ಕೈಗೆತ್ತಿಕೊಳ್ಳುತ್ತದೆ ಎಂದಿಟ್ಟುಕೊಳ್ಳಿ. ಅದರ ನೀಲನಕ್ಷೆ , ಅದರ ವೆಚ್ಚ, ವಿಸ್ತೃತ ಯೋಜನಾ ವರದಿ (ಡಿಪಿಆರ್‌), ಕಾಮಗಾರಿ ಅನುಷ್ಠಾನಗೊಳಿಸಲು ತಗಲುವ ಸಮಯ, ಅದರ ಗುತ್ತಿಗೆದಾರರು ಯಾರು ಎಂಬೆಲ್ಲ ವಿವರಗಳನ್ನು ಜನ ನೇರವಾಗಿ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ನೋಡುವಂತಾಗಬೇಕು. ಒಂದು ವೇಳೆ ಅದು ವೆಬ್‌ಸೈಟ್‌ನಲ್ಲಿ ಲಭಿಸದಿದ್ದರೆ ಅದರ ಹೊಣೆ ಹೊತ್ತ ಅಧಿಕಾರಿಯ ವಿರುದ್ಧ ಏನು ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂಬ ಅಂಶಗಳನ್ನೂ ಸ್ಪಷ್ಟಪಡಿಸುವ ಅಂಶಗಳು ಕಾಯ್ದೆಯಲ್ಲಿರಬೇಕು. ಜಿಐಎಸ್‌ ಅಥವಾ ಜಿಪಿಎಸ್‌ ನೆರವಿನಿಂದ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಲು ಅವಕಾಶ ಕಲ್ಪಿಸಬೇಕು. ಇಂತಹ ವಿಚಾರಗಳನ್ನು ಕಾಯ್ದೆಯ ವ್ಯಾಪ್ತಿಯಲ್ಲಿ ತಾರದಿದ್ದರೆ ಜನಸ್ನೇಹಿ ಆಡಳಿತ ವ್ಯವಸ್ಥೆಯನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ’ ಎನ್ನುತ್ತಾರೆ ಅವರು.

‘ಬಿಬಿಎಂಪಿಯ ಎಲ್ಲ ಸಾರ್ವಜನಿಕ ಸೇವೆಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲು ಮತ್ತು ಆಡಳಿತದಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಪೂರಕವಾಗಿ ಪ್ರತ್ಯೇಕ ಮಾಹಿತಿ ಮತ್ತು ಸಂವಹನ ವಿಭಾಗ ಆರಂಭಿಸಬೇಕು. ಇದಕ್ಕೆ ಸಮರ್ಥ ತಾಂತ್ರಿಕ ಸಿಬ್ಬಂದಿಯನ್ನೂ ಒದಗಿಸಬೇಕು. ಪ್ರಾತಿನಿಧಿಕ ಪ್ರಜಾಪ್ರಭುತ್ವಕ್ಕೆ ಅವಕಾಶ ಕಲ್ಪಿಸುವ ಅಂಶಗಳನ್ನು ಕಾಯ್ದೆಯಲ್ಲೇ ಗೊತ್ತುಪಡಿಸಬೇಕು’ ಎಂದು ಅವರು ಪ್ರತಿಪಾದಿಸಿದರು.

‘ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿ ನಲುಗುತ್ತಿರುವ ಬಿಬಿಎಂಪಿಯ ಆಡಳಿತ ಸುಧಾರಣೆಗೆ ಡಿಜಿಟಲ್‌ ಆಡಳಿತ ಮಾತ್ರ ತಕ್ಕಮಟ್ಟಿನ ಪರಿಹಾರೋಪಾಯ ಒದಗಿಸಬಲ್ಲದು. ಆಡಳಿತದಲ್ಲಿ ಪಾರದರ್ಶಕತೆ ತರುತ್ತೇವೆ ಎಂದು ರಾಜಕಾರಣಿಗಳು ಬಾಯಿ ಮಾತಿನಲ್ಲಿ ಹೇಳುತ್ತಾ ಹೋದರೆ ಏನೂ ಸಾಧಿಸಿದಂತಾಗಿಲ್ಲ. ಅದನ್ನು ಕಾರ್ಯರೂಪಕ್ಕೆ ತರುವ ನೈಜ ಕಾಳಜಿ ಇದ್ದರೆ ಅದಕ್ಕೆ ಪೂರಕ ಅಂಶಗಳನ್ನು ಬಿಬಿಎಂಪಿ ಕಾಯ್ದೆಯಲ್ಲೇ ಅಳವಡಿಸಲಿ’ ಎನ್ನುತ್ತಾರೆ ಸೆಂಟರ್‌ ಫಾರ್‌ ಅರ್ಬನ್‌ ಗವರ್ನನ್ಸ್‌ ಸ್ಟಡೀಸ್‌ ಆ್ಯಂಡ್‌ ಪಾಲಿಸಿ ರಿಸರ್ಚ್‌ ಸಂಸ್ಥೆಯ ನಿರ್ದೇಶಕ ಪಿ.ಜಿ.ಶೆಣೈ.

'ಮಾಹಿತಿ ತಂತ್ರಜ್ಞಾನ ನೀತಿ ರೂಪಿಸಲಿ’
‘ಬಿಬಿಎಂಪಿಯು ಮಾಹಿತಿ ತಂತ್ರಜ್ಞಾನ ನೀತಿಯನ್ನು ರೂಪಿಸಬೇಕು. ಕೇಂದ್ರ ಸರ್ಕಾರ ಡಿಜಿಟಲ್‌ ಇಂಡಿಯಾ ಯೋಜನೆಯಡಿ ಸ್ಮಾರ್ಟ್‌ ಡಿಜಿಟಲ್‌ ಆಡಳಿತಕ್ಕಾಗಿ ಅಮೃತ್‌ (ಅಟಲ್‌ ನಗರಗಳ ನವೀಕರಣ ಹಾಗೂ ಪುನರುತ್ಥಾನ ಅಭಿಯಾನ ) ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ನಗರಗಳ ಇ–ಆಡಳಿತಕ್ಕೆ ಪರಿಪೂರ್ಣ ಏಕೀಕೃತ ವೇದಿಕೆ ಇದು. ಆಡಳಿತಾತ್ಮಕ ಕಾರ್ಯದಕ್ಷತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹಾಗೂ ನಾಗರಿಕರ ಸಹಭಾಗಿತ್ವಕ್ಕೆ ಸಂಬಂಧಿಸಿದ ಮೂರು ಅಂಶಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಇದಕ್ಕೆ ಪೂರಕವಾಗಿ ಬಿಬಿಎಂಪಿಯು ಪ್ರತ್ಯೇಕ ನೀತಿ ರೂಪಿಸಬೇಕಾದ ಹೊಣೆಯನ್ನು ಕಾಯ್ದೆಯಲ್ಲೇ ಅಡಕಗೊಳಿಸಬಹುದು’ ಎಂದು ಸಂಸ್ಥೆಯ ಮತ್ತೊಬ್ಬ ನಿರ್ದೇಶಕ ಸಿ.ಆರ್‌.ರವೀಂದ್ರ ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು