ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಗುಂಡಿ ಮುಚ್ಚಲು ನ. 10ರವರೆಗೆ ಸಮಯಬೇಕೇ?

ಕೌನ್ಸಿಲ್ ಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರ ಪ್ರಶ್ನೆ
Last Updated 1 ನವೆಂಬರ್ 2019, 2:06 IST
ಅಕ್ಷರ ಗಾತ್ರ

ಬೆಂಗಳೂರು: ಮಳೆಗಾಲದಲ್ಲಿ ರಸ್ತೆಗಳು ಗುಂಡಿ ಬೀಳುವುದು ಸಹಜ. ಅವುಗಳನ್ನು ಮುಚ್ಚಲು ನವೆಂಬರ್‌ 10ರವರೆಗೆ ಕಾಲಾವಕಾಶ ನೀಡಿದ್ದಾದರೂ ಏಕೆ. ತುರ್ತಾಗಿ ಗುಂಡಿ ಮುಚ್ಚಲು ಸಾಧ್ಯವಿಲ್ಲವೇ?

ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಗುರುವಾರ ವಿರೋಧ ಪಕ್ಷ ಕಾಂಗ್ರೆಸ್‌ ಸದಸ್ಯರು ಆಡಳಿತ ಪಕ್ಷದ ಮುಂದಿಟ್ಟ ಪ್ರಶ್ನೆ ಇದು.

ಸಭೆ ಆರಂಭವಾಗುತ್ತಿದ್ದಂತೆಯೇ ರಸ್ತೆ ಗುಂಡಿಗಳ ವಿಚಾರ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್‌, ‘ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು 99 ದಿನಗಳಾದವು. ಪಾಲಿಕೆಯಲ್ಲಿ ಬಿಜೆಪಿ ಅಧಿಕಾರ ಹಿಡಿದು ಒಂದು ತಿಂಗಳಾಯಿತು. ಇದುವರೆಗೂ ರಸ್ತೆ ಗುಂಡಿ ಮುಚ್ಚಲು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

‘ಬೆಂಗಳೂರು ಅಭಿವೃದ್ಧಿ ಖಾತೆಯೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಳಿಯೇ ಇದೆ. ಅವರು ಒಮ್ಮೆ ನಗರ ಪ್ರದಕ್ಷಿಣೆ ಕೈಗೊಂಡಿದ್ದು ಬಿಟ್ಟರೆ, ನಗರದ ಅಭಿವೃದ್ಧಿ ಬಗ್ಗೆ ಒಂದು ಸಭೆಯನ್ನೂ ನಡೆಸಿಲ್ಲ. ಅವರ ಮನೆ ಮುಂದಿನ ರಸ್ತೆಯಲ್ಲೇ ಗುಂಡಿಗಳಿದ್ದರೂ ಸರಿ ಪಡಿಸಲು ಕ್ರಮಕೈಗೊಳ್ಳದವರು ನಗರದ ಇತರ ಭಾಗಗಳ ರಸ್ತೆ ಗುಂಡಿಗಳನ್ನು ಮುಚ್ಚಿಸುತ್ತಾರಾ. ತಾವು ಬೆಂಗಳೂರು ಅಭಿವೃದ್ಧಿ ಸಚಿವ ಎಂಬ ವಿಚಾರವಾದರೂ ಅವರ ನೆನಪಿನಲ್ಲಿದೆಯೇ’ ಎಂದು ಪ್ರಶ್ನೆ ಮಾಡಿದರು.

‘ಈಗಿನ ಸರ್ಕಾರದ ಅವಧಿಯಲ್ಲಿ ಕಾಮಗಾರಿಯ ಬಗ್ಗೆ ಗುತ್ತಿಗೆದಾರರೇ ಅಂದಾಜುಪಟ್ಟಿ ತಯಾರಿಸುತ್ತಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೇ ಫೋನಿನಲ್ಲಿ ಈ ವಿಚಾರವಾಗಿ ಮಾತನಾಡುತ್ತಾರೆ. ಒಂದೇ ದಿನದಲ್ಲಿ ಕಾಮಗಾರಿಗೆ ಕೆಟಿಪಿಪಿ ಕಾಯ್ದೆಯ 4ಜಿ ಕಲಂ ಅಡಿ ವಿನಾಯಿತಿ ನೀಡಲು ತಯಾರಿ ನಡೆಯುತ್ತದೆ. ಇದನ್ನೆಲ್ಲಾ ತುರ್ತಾಗಿ ಕಾರ್ಯನಿರ್ವಹಿಸುವ ನಿಮ್ಮ ಸರ್ಕಾರಕ್ಕೆ ರಸ್ತೆ ಗುಂಡಿಗಳ ವಿಚಾರದಲ್ಲೂ ಅಷ್ಟೇ ತ್ವರಿತ ಗತಿಯಲ್ಲಿ ಕ್ರಮಕೈಗೊಳ್ಳಲು ಸಾಧ್ಯವಿಲ್ಲವೇಕೆ’ ಎಂದು ಪ್ರಶ್ನೆ ಮಾಡಿದರು.

‘ಸರ್ಕಾರ ತಳೆದ ನಿಲುವುಗಳಿಂದಾಗಿಯೇ ಗುತ್ತಿಗೆದಾರರು ಕಾಮಗಾರಿ ನಡೆಸಲು ಮುಂದೆ ಬರುತ್ತಿಲ್ಲ. ನಿಮ್ಮ ಪಕ್ಷದವರು ಮಾತೆತ್ತಿದರೆ ಅಧಿಕಾರಿಗಳ ವಿರುದ್ಧ ಎಸಿಬಿಗೆ ಸಿಸಿಬಿಗೆ ದೂರು ನೀಡುತ್ತಾರೆ. ಕಾಮಗಾರಿಗಳನ್ನು ಅರ್ಧದಲ್ಲೇ ನಿಲ್ಲಿಸಲು ಸರ್ಕಾರ ಆದೇಶ ಮಾಡುತ್ತದೆ. ಹಾಗಾಗಿಯೇ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ರಗಳೆಯೇ ಬೇಡ ಎಂದು ಅಭಿವೃದ್ಧಿ ಕಾಮಗಾರಿಗಳಿಗೆ ಸಹಕರಿಸುತ್ತಿಲ್ಲ’ ಎಂದು ಆರೋಪಿಸಿದರು.

‘ರಸ್ತೆಗುಂಡಿಗೆ ಮೂಲ ಕಾರಣ ಪಾಲಿಕೆಯಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಯ ಆಡಳಿತ. ಈಗ ನಮ್ಮ ಮೇಲೆ ಗೂಬೆ ಕೂರಿಸಬೇಡಿ’ ಎಂದು ಆಡಳಿತ ಪಕ್ಷದ ಪದ್ಮನಾಭ ರೆಡ್ಡಿ ಹೇಳಿದರು.

ಕಾಂಗ್ರೆಸ್‌ ಸದಸ್ಯ ಸಂಪತ್ ಕುಮಾರ್‌, ‘ನಾವು ಆಡಳಿತ ನಡೆಸುತ್ತಿದ್ದಾಗ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಿದ್ದೆವು. ರಸ್ತೆ ಗುಂಡಿ ಕಾಣಿಸಿಕೊಂಡ 48 ಗಂಟೆಗಳಲ್ಲಿ ಅದನ್ನು ಮುಚ್ಚಲು ಕ್ರಮಕೈಗೊಳ್ಳುತ್ತಿದ್ದರು. ನೀವೂ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಿ’ ಎಂದು ಸಲಹೆ ನೀಡಿದರು.

‘ನಿಮ್ಮ ಪಕ್ಷದ ಶಾಸಕರೇ ಪ್ರತಿನಿಧಿಸುವ ಮಹದೇವಪುರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾಧ್ಯಮಗಳಲ್ಲಿ ನಿತ್ಯ ವಿಶೇಷ ವರದಿಗಳು ಬರುತ್ತಿವೆ. ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿ, ₹ 300 ಕೋಟಿ– ₹ 400 ಕೋಟಿ ಕೋಟಿ ಅನುದಾನ ಮಂಜೂರು ಮಾಡಿಸಿದರೂ ಮೂರು ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಕಾಣಿಸುತ್ತಿಲ್ಲ’ ಎಂದು ವಾಜಿದ್‌ ಹೇಳಿದರು.

****

ಮುಖ್ಯ ರಸ್ತೆಗಳ ಗುಂಡಿಯನ್ನು ರಾತ್ರೋರಾತ್ರಿ ಮುಚ್ಚುತ್ತಾರೆ. ನಾಲ್ಕು ಗುಂಡಿ ಮುಚ್ಚಿದರೆ ಇನ್ನು ನಾಲ್ಕು ಗುಂಡಿಗಳನ್ನು ಹಾಗೆಯೇ ಬಿಡುತ್ತಾರೆ. ಈ ಕಾಮಗಾರಿ ನಡೆಸುವ ಮುನ್ನ ಸ್ಥಳೀಯ ಪಾಲಿಕೆ ಸದಸ್ಯರ ಗಮನಕ್ಕೆ ತರಬೇಕು

-ವೇಲು ನಾಯ್ಕರ್‌, ಲಕ್ಷ್ಮೀದೇವಿನಗರ ವಾರ್ಡ್‌ ಸದಸ್ಯ

***

'ವಾರ್ಡ್‌ ಮಟ್ಟದ ರಸ್ತೆಗಳ ದುರಸ್ತಿಗೆ ಪ್ರತಿ ವಾರ್ಡ್‌ಗೆ ತಲಾ ₹ 20 ಲಕ್ಷ ಅನುದಾನ ನೀಡಲಾಗಿದೆ. ಇದು ಏನೂ ಸಾಲದು. ಕಾಮಗಾರಿಗೆ ಅನುದಾನ ನೀಡುವ ಮುನ್ನ ಪ್ರಾಯೋಗಿಕವಾಗಿ ಆಲೋಚನೆ ಮಾಡಬೇಕು'

-ಮಹಮ್ಮದ್‌ ರಿಜ್ವಾನ್ ನವಾಬ್‌, ಗುರಪ್ಪನಪಾಳ್ಯ ವಾರ್ಡ್‌ ಸದಸ್ಯ

***

'ರಸ್ತೆ ಕಾಮಗಾರಿ ನಡೆಸಿರುವ ಅನೇಕ ಗುತ್ತಿಗೆದಾರರು ದೋಷ ಸರಿಪಡಿಸುವ ಹೊಣೆಗಾರಿಕೆ ಅವಧಿ ಜಾರಿಯಲ್ಲಿದ್ದರೂ ರಸ್ತೆ ಗುಂಡಿ ಮುಚ್ಚಿಸುತ್ತಿಲ್ಲ. ಮತ್ತೆ ತೆರಿಗೆದಾರರ ಹಣವನ್ನು ರಸ್ತೆ ಗುಂಡಿಗೆ ಸುರಿಯುವುದರಲ್ಲಿ ಅರ್ಥವಿಲ್ಲ. ಅಂತಹವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು'
-ಉಮೇಶ್ ಶೆಟ್ಟಿ , ಗೋವಿಂದರಾಜನಗರ ವಾರ್ಡ್‌ ಸದಸ್ಯ

***

'ಸುಮಾರು 70 ವಾರ್ಡ್‌ಗಳಲ್ಲಿ ಎಂಜಿನಿಯರ್‌ಗಳೇ ಇಲ್ಲ. ವಾರ್ಡ್‌ಗಳ್ಲಲಿ ರಸ್ತೆಗುಂಡಿ ಮುಚ್ಚಲು ಬಳಸುವ ಡಾಂಬರ್‌ ಮೂರೇ ದಿನಗಳಲ್ಲಿ ಕಿತ್ತು ಹೋಗುತ್ತಿದೆ'

- ಎನ್‌.ನಾಗರಾಜು, ಭೈರಸಂದ್ರ ವಾರ್ಡ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT