ಸೋಮವಾರ, ಮಾರ್ಚ್ 30, 2020
19 °C

ಅಲ್‌ ಹಿಂದ್‌ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ ಐಎಸ್‌ ಶಂಕಿತ ಉಗ್ರ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಮತ್ತು ಕೋಲಾರ ಸೇರಿದಂತೆ ಕರ್ನಾಟಕ ಮತ್ತು ತಮಿಳುನಾಡಿನ 25 ಕಡೆ ಈಚೆಗೆ ಉಗ್ರರ ಅಡ್ಡೆಗಳ ಮೇಲೆ ನಡೆದ ದಾಳಿಯ ಬೆನ್ನಲ್ಲೇ ಅಲ್‌ ಹಿಂದ್‌ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ ಐಎಸ್‌ ಶಂಕಿತ ಉಗ್ರ ಫಝಿ ಅಲಿಯಾಸ್‌ ಸೈಯದ್‌ ಫಝಿ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

ಆರೋಪಿಯು ದೇಶದ ವಿವಿಧೆಡೆ ಸಕ್ರಿಯವಾಗಿದ್ದ ಮೆಹಬೂಬ್ ಪಾಷಾ ಮತ್ತು ಖ್ವಾಜಾ ಮೊಹಿನುದ್ದೀನ್‌ ನೇತೃತ್ವದ ತಂಡದಲ್ಲಿ ಗುರುತಿಸಿಕೊಂಡಿದ್ದ.ಇಲ್ಲಿನ ಟ್ಯಾನರಿ ಬಳಿ ಈತನನ್ನು ಸಿನಿಮೀಯ ರೀತಿಯಲ್ಲಿ ಬೆನ್ನತ್ತಿ ಹಿಡಿಯಲಾಗಿದೆ. ಕಳೆದ ಒಂದು ವಾರದಿಂದ ಎನ್‌ಐಎ ಅಧಿಕಾರಿಗಳು ಫಝಿ ಹಿಂದೆ ಬಿದ್ದಿದ್ದರು ಎಂದು ಮೂಲಗಳು ತಿಳಿಸಿವೆ.

ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆಯಲ್ಲಿ ಜನವರಿ 10ರಂದು ದಾಖಲಾದ ಪ್ರಕರಣದ ಕೆಲವು ಆರೋಪಿಗಳ ಜೊತೆ ಫಝಿಯೂ ‍ಪರಾರಿ ಆಗಿರಬಹುದೆಂದು ಭಾವಿಸಲಾಗಿತ್ತು. ಕಾರ್ಯಕ್ರಮ ಸಂಘಟಿಸುವ ಸಂಸ್ಥೆ ನಡೆಸುತ್ತಿದ್ದ ಈತ ಬಳಿಕ ಗ್ಯಾರೇಜ್‌ನಲ್ಲೂ ಕೆಲಸ ಮಾಡುತ್ತಿದ್ದ. ಜನವರಿ 19ರ ಬಳಿಕ ತಲೆ ಮರೆಸಿಕೊಂಡಿದ್ದ. ಪಾಷಾನ ಮಾಹಿತಿ ಆಧರಿಸಿ ಎನ್‌ಐಎ ಅಧಿಕಾರಿಗಳು ಈತನನ್ನು ಬಂಧಿಸಿದರು.

ಮಂಗಳವಾರ ರಾತ್ರಿ ಫಝಿ ಟ್ಯಾನರಿ ಒಳಗೆ ಹೊಕ್ಕು ಅವಿತಿದ್ದ. ಆನಂತರ ಹೆಚ್ಚಿನ ಪೊಲೀಸರನ್ನು ಕರೆಸಿಕೊಂಡು ಟ್ಯಾನರಿಯನ್ನು ಸುತ್ತುವರಿಯಲಾಗಿತ್ತು. ಪೊಲೀಸರಿಂದ ತಪ್ಪಿಸಿಕೊಂಡು ಓಡಿದ ಆರೋಪಿಯನ್ನು ಒಂದು ಕಿ.ಮೀ. ಹಿಂಬಾಲಿಸಿ ಹಿಡಿಯಲಾಯಿತು.

ಹಿಂದೂ ಮುಖಂಡರನ್ನು ಕೊಲ್ಲುವ ಮೂಲಕ ಅಲ್‌ ಹಿಂದ್‌ ಚಟುವಟಿಕೆಗಳನ್ನು ತೀವ್ರಗೊಳಿಸುವ ಸಂಬಂಧ ಮೆಹಬೂಬ್‌ ಪಾಷಾನ ಬೆಂಗಳೂರು ಗುರಪ್ಪನಪಾಳ್ಯದ ಮನೆಯಲ್ಲಿ ನಡೆದಿದ್ದ ಹಲವು ಸಭೆಗಳಲ್ಲಿ ಫಝಿ ಭಾಗವಹಿಸಿದ್ದ. ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಸಂಗ್ರಹಿಸುವ ಸಂಚಿನಲ್ಲೂ ಬಂಧಿತ ಭಾಗಿಯಾಗಿದ್ದ ಎಂದು ದೂರಲಾಗಿದೆ.

ಅಲ್‌ ಹಿಂದ್‌ ಸಂಘಟನೆಯ ಕೆಲವು ಉಗ್ರರನ್ನು ಈಗಾಗಲೇ ಬಂಧಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು