ಶನಿವಾರ, ಫೆಬ್ರವರಿ 22, 2020
19 °C
ಹೊರ ವಲಯದಲ್ಲಿ ಹೊಸ ರಸ್ತೆಗಳ ಸದ್ದು

ಸಂಚಾರದ ಒತ್ತಡ ನೀಗಿಸುವುದೇ ಹೊಸ ರಸ್ತೆ ಜಾಲ?

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

ಬೆಂಗಳೂರು: 80 ಲಕ್ಷಕ್ಕೂ ಅಧಿಕ ವಾಹನಗಳ ಒತ್ತಡ ಎದುರಿಸುತ್ತಿರುವ ನಗರದ ರಸ್ತೆಗಳು ದಟ್ಟಣೆಯ ಅವಧಿಗಳಲ್ಲಿ ಅಕ್ಷರಶಃ ‘ಪಾರ್ಕಿಂಗ್ ತಾಣ’ಗಳಂತಾಗುತ್ತಿವೆ. ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ನಗರದ ಹೊರವಲಯದಲ್ಲಿ ಹೊಸದಾಗಿ 11 ರಸ್ತೆಗಳ ಅಭಿವೃದ್ಧಿಗೆ ಪ್ರಸ್ತಾವ ಸಿದ್ಧಪಡಿಸಿದೆ. 

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ವೈಟ್‌ಫೀಲ್ಡ್‌, ಮೈಸೂರು ರಸ್ತೆ, ತುಮಕೂರು ರಸ್ತೆಗಳನ್ನು ಬೆಸೆಯಲು ಈ ರಸ್ತೆಗಳು ಸಂಪರ್ಕ ಕೊಂಡಿಯಾಗಲಿವೆ. ಹೊರವಲಯದ ರಸ್ತೆ ಸಂಪರ್ಕ ಜಾಲವನ್ನು ವಿಸ್ತರಿಸುವುದರಿಂದ ವಾಹನಗಳು ಅನಗತ್ಯವಾಗಿ ನಗರದೊಳಗೆ ಹಾದುಹೋಗುವ ಸಂಭವ ಎದುರಾಗದು ಎಂಬುದು ಕೆಆರ್‌ಡಿಸಿಎಲ್‌ ವಾದ. ಈ ರಸ್ತೆಗಳು ನಗರದ ದಟ್ಟಣೆ ಸಮಸ್ಯೆಗೆ ತಾತ್ಕಾಲಿಕ ಮುಕ್ತಿ ನೀಡಲಿವೆಯಾದರೂ, ಇವುಗಳಿಂದಾಗಿ ದೂರಗಾಮಿ ಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ ಸಾರಿಗೆ ತಜ್ಞರು.

ತುಮಕೂರು ಮತ್ತು ಹಾಸನ ಕಡೆಯಿಂದ ಬರುವ ವಾಹನಗಳು ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದರೆ ಸದ್ಯ ಗೊರಗುಂಟೆ ಪಾಳ್ಯಕ್ಕೆ ಬಂದು ಹೆಬ್ಬಾಳ ಮೂಲಕ ಸಾಗಬೇಕು. ಮೈಸೂರು ಕಡೆಯಿಂದ ಬರುವ ವಾಹನಗಳು ರಿಂಗ್ ರಸ್ತೆ ಮೂಲಕ ಗೊರಗುಂಟೆಪಾಳ್ಯ ಮಾರ್ಗದಲ್ಲಿ ಹೋಗಬೇಕು, ಇಲ್ಲವೇ ನಗರದೊಳಗೇ ಹಾದು ಸಾಗಬೇಕು.

ತುಮಕೂರು ರಸ್ತೆಯ ಮಾಕಳಿಯಿಂದ ಮಧುರೆ ಮತ್ತು ಮಾದನಾಯಕನಹಳ್ಳಿಯಿಂದ ಕಾಕೋಳು ಸಂಪರ್ಕಿಸುವ ಎರಡು ಮಾರ್ಗಗಳನ್ನು ಕೆಆರ್‌ಡಿಸಿಎಲ್ ಗುರುತಿಸಿದೆ. ಈ ಎರಡೂ ರಸ್ತೆಗಳನ್ನು ಅಭಿವೃದ್ಧಿಪಡಿಸಿದರೆ ಬೇರೆ ರಸ್ತೆಗಳಿಗೆ ಒತ್ತಡ ಕಡಿಮೆಯಾಗಲಿದೆ ಎನ್ನುತ್ತಾರೆ ಕೆಆರ್‌ಡಿಸಿಎಲ್ ಅಧಿಕಾರಿಗಳು.

ನೆಲಮಂಗಲದಿಂದ ಸುಂಡೆಕೊಪ್ಪ, ತಾವರೆಕೆರೆ, ಚಂದ್ರಪ್ಪ ಸರ್ಕಲ್ ಮಾರ್ಗದಲ್ಲಿ ಬಿಡದಿ ಸಂಪರ್ಕಿಸುವ ರಸ್ತೆಯನ್ನೂ ಅಧಿಕಾರಿಗಳು ಗುರುತಿಸಿದ್ದಾರೆ. ಈ ರಸ್ತೆಯನ್ನು ನಾಲ್ಕು ಪಥವಾಗಿ ಅಭಿವೃದ್ಧಿಪಡಿಸಿದರೆ ನೆಲಮಂಗಲದಿಂದ ಮೈಸೂರು ರಸ್ತೆಗೆ ಹೋಗುವ ಮತ್ತು ಬರುವ ವಾಹನಗಳು ನಗರ ಪ್ರವೇಶಿಸದೇ ಸಾಗಬಹುದು.

ಕಾಡುಮನೆ ಗೇಟ್‌ ಬಳಿಯಿಂದ ನೆಲಗುಳಿಗೆ ನೇರ ಮಾರ್ಗ, ಕಗ್ಗಲಿಪುರದಿಂದ ಬನ್ನೇರುಘಟ್ಟ ಸಂಪರ್ಕಿಸುವ ರಸ್ತೆಯನ್ನೂ ಅಭಿವೃದ್ಧಿಪಡಿಸುವ ಪ್ರಸ್ತಾವನೆಯನ್ನೂ ಕೆಆರ್‌ಡಿಸಿಎಲ್‌ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ.

ಜಿಗಣಿಯಿಂದ ಬೊಮ್ಮಸಂದ್ರ, ಆನೇಕಲ್‌ನಿಂದ ಚಂದಾಪುರ, ಸರ್ಜಾಪುರ ರಸ್ತೆ ಮೂಲಕ ವೈಟ್‌ಫೀಲ್ಡ್‌, ಎಲೆಕ್ಟ್ರಾನಿಕ್ ಸಿಟಿ ನೈಸ್ ರಸ್ತೆ ಜಂಕ್ಷನ್‌ನಿಂದ ವೈಟ್‌ಫೀಲ್ಡ್ ಸಂಪರ್ಕಿಸಲು 16 ಕಿ.ಮೀ. ಉದ್ದದ ರಸ್ತೆಯನ್ನು ವಿಸ್ತರಿಸುವ ಯೋಜನೆ ಇದೆ.

ಈ ರಸ್ತೆಗಳು ಅಭಿವೃದ್ಧಿಯಾದರೆ ಈಗಿರುವ ರಸ್ತೆಗಳ ಮೇಲೆ ಒತ್ತಡ ಕಡಿಮೆಯಾಗುವ ಜತೆಗೆ ಸುತ್ತು ಬಳಸಿ ಸಂಚರಿಸುವುದು ಕೂಡ ತಪ್ಪಲಿದೆ ಎನ್ನುತ್ತಾರೆ ಕೆಆರ್‌ಡಿಸಿಎಲ್‌ನ ಹಿರಿಯ ಅಧಿಕಾರಿಗಳು.

ಈ ರಸ್ತೆಗಳ ಅಭಿವೃದ್ಧಿಗೆ ಸಮಗ್ರ ಯೋಜನಾ ವರದಿ (ಡಿಪಿಆರ್‌) ಇನ್ನಷ್ಟೇ ಸಿದ್ಧಪಡಿಸಬೇಕಿದೆ. ಸರ್ಕಾರ ಅನುದಾನ ಮಂಜೂರು ಮಾಡಿದರೆ ಮಾತ್ರ ಈ ಪ್ರಸ್ತಾವನೆ ಜಾರಿಯಾಗಲಿದೆ.

ಪಿ.ಆರ್‌.ಆರ್‌ ಆಗದಿದ್ದರೆ ಪ್ರಯೋಜನವಿಲ್ಲ: ‘ಪೆರಿಫೆರಲ್‌ ವರ್ತುಲ ರಸ್ತೆ (ಹೊಸೂರು ರಸ್ತೆಯಿಂದ ತುಮಕೂರು ರಸ್ತೆವರೆಗೆ) ನಿರ್ಮಿಸುವುದರ ಜೊತೆಗೆ ಈ ರಸ್ತೆಗಳನ್ನು ವಿಸ್ತರಿಸಿದರೆ ಮಾತ್ರ ದಟ್ಟಣೆ ನಿವಾರಣೆಗೆ ಸ್ವಲ್ಪ ಅನುಕೂಲವಾದೀತು. ಇಲ್ಲದಿದ್ದರೆ ಅಷ್ಟೇನೂ ಪ್ರಯೋಜನವಾಗದು’ ಎನ್ನುತ್ತಾರೆ ಸಾರಿಗೆ ತಜ್ಞ ಎಂ.ಎನ್‌.ಶ್ರೀಹರಿ.

‘ಈ ರಸ್ತೆಗಳ ಬಲವರ್ಧನೆಯಾದಂತೆ ಅಲ್ಲಿ ಜನವಸತಿಯೂ ಹೆಚ್ಚಲಿದೆ. ಭೂಮಿಯ ಮೌಲ್ಯ ಅನೇಕ ಪಟ್ಟು ಹೆಚ್ಚುತ್ತದೆ. ಪರೋಕ್ಷವಾಗಿ ಇದು ಮತ್ತಷ್ಟು ನಗರೀಕರಣಕ್ಕೆ ಕಾರಣವಾಗುತ್ತದೆ. ಕೆಆರ್‌ಡಿಸಿಎಲ್‌ ಬೆಂಗಳೂರು ಆಸುಪಾಸಿನ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಕ್ಕಿಂತ ರಾಜ್ಯ ಇತರ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಗಮನ ಹರಿಸುವುದು ಒಳ್ಳೆಯದು’ ಎಂದು ಅವರು ಸಲಹೆ ನೀಡಿದರು.

ಅಂದಾಜು ₹1,400 ಕೋಟಿ: ಹೊಸ 11 ರಸ್ತೆಗಳ ಅಭಿವೃದ್ಧಿಗೆ ಅಂದಾಜು ₹1,400 ಕೋಟಿ ವೆಚ್ಚವಾಗಬಹುದು ಎಂದು ಕೆಆರ್‌ಡಿಸಿಎಲ್ ಅಂದಾಜಿಸಿದೆ. ‘ಈ ರಸ್ತೆಗಳ ಅಭಿವೃದ್ಧಿಗೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಸಲಹಾ ಸಂಸ್ಥೆಗಳನ್ನು ಆಯ್ಕೆ ಮಾಡಲು ಟೆಂಡರ್ ಕರೆಯಲಾಗಿದೆ’ ಎಂದು ಕೆಆರ್‌ಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಾಲ್ಕು ಯೋಜನೆಗಳು ಪ್ರಗತಿಯಲ್ಲಿ

 ‌ಕೆಆರ್‌ಡಿಸಿಎಲ್‌ ಈಗಾಗಲೇ ಹೊರವಲಯದ ನಾಲ್ಕು ರಸ್ತೆಗಳನ್ನು ವಿಸ್ತರಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಈ ನಾಲ್ಕು ರಸ್ತೆಗಳೂ ಕೂಡ ವಿಮಾನ ನಿಲ್ದಾಣ ಮತ್ತು ಐ.ಟಿ ಹಬ್‌ ಸಂಪರ್ಕಿಸುವ ಪ್ರಮುಖ ಪರ್ಯಾಯ ರಸ್ತೆಗಳಾಗಿವೆ.

10 ಪ್ಯಾಕೇಜ್‌ಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಭೂಸ್ವಾಧೀನ ಸೇರಿ ಒಟ್ಟು ₹2,095 ಕೋಟಿ ಮೊತ್ತದ ಯೋಜನೆ ಇದಾಗಿದೆ. ಇದರಲ್ಲಿ ₹545 ಕೋಟಿ ಭೂಸ್ವಾಧೀನ ಪ್ರಕ್ರಿಯೆಗೆ ಮೀಸಲಿಡಲಾಗಿದೆ.

ನೆಲಮಂಗಲದಿಂದ ಮಧುರೆ, ಕಾಕೋಳು, ರಾಜಾನುಕುಂಟೆ ಮಾರ್ಗದಲ್ಲಿ ವಿಮಾನ ನಿಲ್ದಾಣ ರಸ್ತೆ ಸಂಪರ್ಕಿಸುವ ಈ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. ಈ ರಸ್ತೆಯಲ್ಲಿ ರೈಲು ಮಾರ್ಗಕ್ಕೆ ಬಸವನಹಳ್ಳಿ ಬಳಿ 800  ಮೀಟರ್ ಉದ್ದದ ಕೆಳಸೇತುವೆ, ಗೊಲ್ಲಹಳ್ಳಿ ಬಳಿ 330 ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣವಾಗಲಿದೆ. ರಾಜಾನುಕುಂಟೆ ಮತ್ತು ನಾರಾಯಣಪುರ ಬಳಿಯೂ ರೈಲ್ವೆ ಮೇಲ್ಸೇತುವೆಗಳು ನಿರ್ಮಾಣವಾಗಲಿದೆ.

ಈ ರಸ್ತೆ ನೆಲಮಂಗಲದಿಂದ ನೇರವಾಗಿ 39.24 ಕಿಲೋ ಮೀಟರ್‌ನಲ್ಲಿ ವಿಮಾನ ನಿಲ್ದಾಣ ಸಂಪರ್ಕಿಸಬಹುದಾಗಿದೆ. ಸದ್ಯ ತಡೆಗೋಡೆ ನಿರ್ಮಾಣ, ರೈಲ್ವೆ ಸೇತುವೆಗಳ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ.

ಬಿಡದಿಯಿಂದ ಕಂಚುಗಾರನಹಳ್ಳಿ, ಹಾರೋಹಳ್ಳಿ ಮತ್ತು ಉರಗನದೊಡ್ಡಿ ಮೂಲಕ ಜಿಗಣಿ ಮತ್ತು ಬನ್ನೇರುಘಟ್ಟದಿಂದ ಆನೇಕಲ್‌ ಸಂಪರ್ಕಿಸುವ 56.18 ಕಿಲೋ ಮಿಟರ್‌ ನಾಲ್ಕು ಪಥಗಳ ರಸ್ತೆ ಅಭಿವೃದ್ಧಿಯಾಗುತ್ತಿದೆ. ಚಂದಾಪುರ ಬಳಿ ಒಂದು ಗ್ರೇಡ್ ಸಪರೇಟರ್‌ ಮತ್ತು ರೈಲ್ವೆ ಕೆಳ ಸೇತುವೆ ಕೂಡ ನಿರ್ಮಾಣವಾಗುತ್ತಿದೆ. ಈ ರಸ್ತೆ ಮೈಸೂರು ಕಡೆಯಿಂದ ಬರುವವರು ವೈಟ್‌ಫೀಲ್ಡ್‌ ಕಡೆಗೆ ಸಾಗಲು ಅನುಕೂಲವಾಗುತ್ತದೆ.

‘ಆನೇಕಲ್‌ನಿಂದ (ಬೆಸ್ತಮಾನಹಳ್ಳಿ) ಅತ್ತಿಬೆಲೆ, ಸರ್ಜಾಪುರ, ವೈಟ್‌ಫೀಲ್ಡ್‌ ಮಾರ್ಗವಾಗಿ ಹೊಸಕೋಟೆ ತನಕ 39.28 ಕಿ.ಮೀ ಉದ್ದದ ಮತ್ತೊಂದು ರಸ್ತೆ ವಿಸ್ತರಣೆಯಾಗುತ್ತಿದೆ. ಇದು ಐ.ಟಿ ಹಬ್‌ನಲ್ಲಿ ಈಗಿರುವ ರಸ್ತೆಗಳಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಲಿದೆ. ವರ್ತೂರು ಗ್ರಾಮದಲ್ಲಿ 1.30 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್‌ ನಿರ್ಮಾಣವಾಗಲಿದೆ. ತಳಿ ಜಂಕ್ಷನ್, ದೊಡ್ಡಬೊಮ್ಮಸಂದ್ರ ಜಂಕ್ಷನ್, ವರ್ತೂರು ಕೋಡಿ ಜಂಕ್ಷನ್ ಬಳಿಯೂ ಗ್ರೇಡ್ ಸಪರೇಟರ್ ಹಾಗೂ ಕಾಡುಗೋಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗಲಿದೆ’ ಎಂದು ಕೆಆರ್‌ಡಿಸಿಎಲ್‌ ಅಧಿಕಾರಿಗಳು ಹೇಳುತ್ತಾರೆ.

ಹೊಸಕೋಟೆ ಬಳಿಯ ಬೂದಿಗೆರೆ ಕ್ರಾಸ್‌ನಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 20.11 ಕಿ.ಮೀ ಉದ್ದದ ರಸ್ತೆಯಲ್ಲಿ ಸದ್ಯ 1 ಕಿ.ಮೀ ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಹೊಸಕೋಟೆ, ವೈಟ್‌ಫೀಲ್ಡ್ ಭಾಗದ ಜನರು ನೇರವಾಗಿ ವಿಮಾನ ನಿಲ್ದಾಣ ತಲುಪಲು ಅತ್ಯಂತ ಕಡಿಮೆ ದೂರದ ಮಾರ್ಗ ಇದಾಗಿದೆ.

15 ತಿಂಗಳಲ್ಲಿ ಕಾಮಗಾರಿ ಪೂರ್ಣ: ‘ನಾಲ್ಕು ರಸ್ತೆಗಳ ಅಭಿವೃದ್ಧಿ ಕಾಮಗಾರಿ 15 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ಶಿವಕುಮಾರ್ ತಿಳಿಸಿದರು. ‘ನಾಲ್ಕು ಪ್ಯಾಕೇಜ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆಗಳು ಆಯಾ ವ್ಯಾಪ್ತಿಯಲ್ಲಿ ನಡೆಯುತ್ತಿವೆ. ಭೂಮಿ ಲಭ್ಯ ಇರುವ ಕಡೆ ಕಾಮಗಾರಿಗಳು ನಡೆಯುತ್ತಿವೆ’ ಎಂದು ಹೇಳಿದರು.

ಹೊಸ ಪ್ರಸ್ತಾವನೆಗಳು: 

*ಮಾಕಳಿ–ಕಾಕೋಳು (18 ಕಿ.ಮೀ)

*ದೇವನಹಳ್ಳಿ ರಸ್ತೆ–ಬಾಗೂರು (5 ಕಿ.ಮೀ)

*ನೈಸ್ ರಸ್ತೆ ಜಂಕ್ಷನ್– ವೈಟ್‌ ಫೀಲ್ಡ್‌
(ಸರ್ಜಾಪುರ, ಹುಸ್ಕೂರು ರಸ್ತೆ 14 ಕಿ.ಮೀ)

*ಗೌರಿಗೆರೆ ರಸ್ತೆ–ಬೂದಿಗೆರೆ ಕ್ರಾಸ್‌ (1.2 ಕಿ.ಮೀ)

*ಮಾಕಳಿ–ಮಧುರೆ ರಸ್ತೆ (ಎಪಿಎಂಸಿ ಯಾರ್ಡ್‌, ಹೊನ್ನಸಂದ್ರ ವೃತ್ತ, ಬಸವೇಶ್ವರ ದೇವಸ್ಥಾನ, ಕೋಡಿಪಾಳ್ಯ –17 ಕಿ.ಮೀ)

*ಆನೇಕಲ್‌– ಸರ್ಜಾಪುರ ರಸ್ತೆ (ಚಂದಾಪುರ ಮಾರ್ಗ–27 ಕಿ.ಮೀ)

*ಬಿಡದಿ–ನೆಲಮಂಗಲ (ತಾವರೆಕೆರೆ ಮಾರ್ಗ–43 ಕಿ.ಮೀ)

*ನೆಲಗುಳಿ (ಕನಕಪುರ ರಸ್ತೆ)– ಬಿಡದಿಯ ಕಾಡುಮನೆ ಗೇಟ್‌ ಕ್ರಾಸ್‌(12.5 ಕಿ.ಮೀ)

*ಬನ್ನೇರುಘಟ್ಟ–ಕಗ್ಗಲಿಪುರ (ಗುಲಕಮಲೆ ಮತ್ತು ಭೂತನಹಳ್ಳಿ ಮಾರ್ಗ–13 ಕಿಮೀ)

*ಜಿಗಣಿ–ಬೊಮ್ಮಸಂದ್ರ (ಜಿಗಣಿ ರಸ್ತೆ–8 ಕಿ.ಮೀ)

*ಯಮಲೂರು–ಹೊರ ವರ್ತುಲ ರಸ್ತೆ (ಬೆಳ್ಳಂದೂರು ಮಾರ್ಗ–4.7 ಕಿ.ಮೀ)

15 ತಿಂಗಳಲ್ಲಿ ಕಾಮಗಾರಿ ಪೂರ್ಣ
‘ನಾಲ್ಕು ರಸ್ತೆಗಳ ಅಭಿವೃದ್ಧಿ ಕಾಮಗಾರಿ 15 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ಶಿವಕುಮಾರ್ ತಿಳಿಸಿದರು.

‘ನಾಲ್ಕು ಪ್ಯಾಕೇಜ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆಗಳು ಆಯಾ ವ್ಯಾಪ್ತಿಯಲ್ಲಿ ನಡೆಯುತ್ತಿವೆ. ಭೂಮಿ ಲಭ್ಯ ಇರುವ ಕಡೆ ಕಾಮಗಾರಿಗಳು ನಡೆಯುತ್ತಿವೆ’ ಎಂದು ಹೇಳಿದರು.

ನಾಲ್ಕು ಯೋಜನೆಗಳು ಪ್ರಗತಿಯಲ್ಲಿ
‌ಕೆಆರ್‌ಡಿಸಿಎಲ್‌ ಈಗಾಗಲೇ ಹೊರವಲಯದ ನಾಲ್ಕು ರಸ್ತೆಗಳನ್ನು ವಿಸ್ತರಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಈ ನಾಲ್ಕು ರಸ್ತೆಗಳೂ ಕೂಡ ವಿಮಾನ ನಿಲ್ದಾಣ ಮತ್ತು ಐ.ಟಿ ಹಬ್‌ ಸಂಪರ್ಕಿಸುವ ಪ್ರಮುಖ ಪರ್ಯಾಯ ರಸ್ತೆಗಳಾಗಿವೆ.

10 ಪ್ಯಾಕೇಜ್‌ಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಭೂಸ್ವಾಧೀನ ಸೇರಿ ಒಟ್ಟು ₹2,095 ಕೋಟಿ ಮೊತ್ತದ ಯೋಜನೆ ಇದಾಗಿದೆ. ಇದರಲ್ಲಿ ₹545 ಕೋಟಿ ಭೂಸ್ವಾಧೀನ ಪ್ರಕ್ರಿಯೆಗೆ ಮೀಸಲಿಡಲಾಗಿದೆ.

ನೆಲಮಂಗಲದಿಂದ ಮಧುರೆ, ಕಾಕೋಳು, ರಾಜಾನುಕುಂಟೆ ಮಾರ್ಗದಲ್ಲಿ ವಿಮಾನ ನಿಲ್ದಾಣ ರಸ್ತೆ ಸಂಪರ್ಕಿಸುವ ಈ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. ಈ ರಸ್ತೆಯಲ್ಲಿ ರೈಲು ಮಾರ್ಗಕ್ಕೆ ಬಸವನಹಳ್ಳಿ ಬಳಿ 800  ಮೀಟರ್ ಉದ್ದದ ಕೆಳಸೇತುವೆ, ಗೊಲ್ಲಹಳ್ಳಿ ಬಳಿ 330 ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣವಾಗಲಿದೆ. ರಾಜಾನುಕುಂಟೆ ಮತ್ತು ನಾರಾಯಣಪುರ ಬಳಿಯೂ ರೈಲ್ವೆ ಮೇಲ್ಸೇತುವೆಗಳು ನಿರ್ಮಾಣವಾಗಲಿದೆ.

ಈ ರಸ್ತೆ ನೆಲಮಂಗಲದಿಂದ ನೇರವಾಗಿ 39.24 ಕಿಲೋ ಮೀಟರ್‌ನಲ್ಲಿ ವಿಮಾನ ನಿಲ್ದಾಣ ಸಂಪರ್ಕಿಸಬಹುದಾಗಿದೆ. ಸದ್ಯ ತಡೆಗೋಡೆ ನಿರ್ಮಾಣ, ರೈಲ್ವೆ ಸೇತುವೆಗಳ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ.

ಬಿಡದಿಯಿಂದ ಕಂಚುಗಾರನಹಳ್ಳಿ, ಹಾರೋಹಳ್ಳಿ ಮತ್ತು ಉರಗನದೊಡ್ಡಿ ಮೂಲಕ ಜಿಗಣಿ ಮತ್ತು ಬನ್ನೇರುಘಟ್ಟದಿಂದ ಆನೇಕಲ್‌ ಸಂಪರ್ಕಿಸುವ 56.18 ಕಿಲೋ ಮಿಟರ್‌ ನಾಲ್ಕು ಪಥಗಳ ರಸ್ತೆ ಅಭಿವೃದ್ಧಿಯಾಗುತ್ತಿದೆ. ಚಂದಾಪುರ ಬಳಿ ಒಂದು ಗ್ರೇಡ್ ಸಪರೇಟರ್‌ ಮತ್ತು ರೈಲ್ವೆ ಕೆಳ ಸೇತುವೆ ಕೂಡ ನಿರ್ಮಾಣವಾಗುತ್ತಿದೆ. ಈ ರಸ್ತೆ ಮೈಸೂರು ಕಡೆಯಿಂದ ಬರುವವರು ವೈಟ್‌ಫೀಲ್ಡ್‌ ಕಡೆಗೆ ಸಾಗಲು ಅನುಕೂಲವಾಗುತ್ತದೆ.

‘ಆನೇಕಲ್‌ನಿಂದ (ಬೆಸ್ತಮಾನಹಳ್ಳಿ) ಅತ್ತಿಬೆಲೆ, ಸರ್ಜಾಪುರ, ವೈಟ್‌ಫೀಲ್ಡ್‌ ಮಾರ್ಗವಾಗಿ ಹೊಸಕೋಟೆ ತನಕ 39.28 ಕಿ.ಮೀ ಉದ್ದದ ಮತ್ತೊಂದು ರಸ್ತೆ ವಿಸ್ತರಣೆಯಾಗುತ್ತಿದೆ. ಇದು ಐ.ಟಿ ಹಬ್‌ನಲ್ಲಿ ಈಗಿರುವ ರಸ್ತೆಗಳಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಲಿದೆ. ವರ್ತೂರು ಗ್ರಾಮದಲ್ಲಿ 1.30 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್‌ ನಿರ್ಮಾಣವಾಗಲಿದೆ. ತಳಿ ಜಂಕ್ಷನ್, ದೊಡ್ಡಬೊಮ್ಮಸಂದ್ರ ಜಂಕ್ಷನ್, ವರ್ತೂರು ಕೋಡಿ ಜಂಕ್ಷನ್ ಬಳಿಯೂ ಗ್ರೇಡ್ ಸಪರೇಟರ್ ಹಾಗೂ ಕಾಡುಗೋಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗಲಿದೆ’ ಎಂದು ಕೆಆರ್‌ಡಿಸಿಎಲ್‌ ಅಧಿಕಾರಿಗಳು ಹೇಳುತ್ತಾರೆ.

ಹೊಸಕೋಟೆ ಬಳಿಯ ಬೂದಿಗೆರೆ ಕ್ರಾಸ್‌ನಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 20.11 ಕಿ.ಮೀ ಉದ್ದದ ರಸ್ತೆಯಲ್ಲಿ ಸದ್ಯ 1 ಕಿ.ಮೀ ಮಾತ್ರ ಕಾಮಗಾರಿ ಪೂರ್ಣಗೊಂಡಿದೆ. ಹೊಸಕೋಟೆ, ವೈಟ್‌ಫೀಲ್ಡ್ ಭಾಗದ ಜನರು ನೇರವಾಗಿ ವಿಮಾನ ನಿಲ್ದಾಣ ತಲುಪಲು ಅತ್ಯಂತ ಕಡಿಮೆ ದೂರದ ಮಾರ್ಗ ಇದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು