ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಿಧಾನ ದಿನಾಚರಣೆ ವೈರುಧ್ಯವಲ್ಲವೇ?’

Last Updated 26 ನವೆಂಬರ್ 2022, 19:34 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾತಿವಾದಿಗಳಿಗೆ, ಮತಾಂಧರಿಗೆ ಸಂವಿಧಾನವನ್ನು ಧಿಕ್ಕರಿಸಲು ಅನುಮತಿ ಕೊಟ್ಟು, ಮತ್ತೊಂದೆಡೆ ಸಂವಿಧಾನ ದಿನ ಆಚರಿಸುತ್ತಿರುವುದು ವೈರುಧ್ಯ ಅಲ್ಲವೇ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾಶ ಮಾಡಿದಂತೆ ಅಲ್ಲವೇ. ಆಯ್ಕೆ ಮಾಡಿದ ಪ್ರಜೆಗಳಿಗೆ ಮಾಡಿದ ವಂಚನೆಯಲ್ಲವೇ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಚಿಂತಕರು, ಲೇಖಕರು ಪ್ರಶ್ನಿಸಿದ್ದಾರೆ.

ಎಸ್.ಜಿ. ಸಿದ್ದರಾಮಯ್ಯ, ಜಿ. ರಾಮಕೃಷ್ಣ, ಕೆ. ಮರುಳಸಿದ್ದಪ್ಪ, ರಾಜೇಂದ್ರ ಚೆನ್ನಿ, ಕೆ.ಎಸ್. ವಿಮಲ, ಬಂಜಗೆರೆ ಜಯಪ್ರಕಾಶ್, ಗುರುಪ್ರಸಾದ್ ಕೆರಗೋಡು, ಬಿ. ಶ್ರೀಪಾದ ಭಟ್, ಮಾವಳ್ಳಿ ಶಂಕರ್, ಕೆ. ನೀಲಾ, ಎಸ್.ವೈ. ಗುರುಶಾಂತ್ ಈ ಬಗ್ಗೆ ಜಂಟಿ ಹೇಳಿಕೆ ನೀಡಿದ್ದಾರೆ.

‘ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಮರಿಗೆ ಅಂಗಡಿ ಹಾಕಲು ಅನುಮತಿ ಕೊಡಬಾರದೆಂದು ಬ್ಯಾನರ್ ಹಾಕಲಾಗಿದೆ. ನಗರದ ಸಜ್ಜನರಾವ್ ವೃತ್ತದ ಬಳಿ ಭಾನುವಾರ ನಡೆಯಲಿರುವ ಜಾತ್ರೆಯಲ್ಲಿ ಮುಸ್ಲಿಮರಿಗೆ ಅಂಗಡಿ ತೆರೆಯಲು ಅನುಮತಿ ಕೊಡಬಾರದೆಂದು ಬಜರಂಗದಳದವರು ಬ್ಯಾನರ್ ಹಾಕಿದ್ದಾರೆಂದು ವರದಿಯಾಗಿದೆ.ಮತಾಂಧರಿಂದ ದೈಹಿಕ ಹಲ್ಲೆಗೆ ಒಳಗಾಗುವ ಭೀತಿಯಿಂದ ಅನ್ಯಮತೀಯರು ಅಂಗಡಿ ತೆರೆಯಲು ಹಿಂಜರಿಯುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸರ್ಕಾರ ಮೌನವಾಗಿದ್ದು, ದುಷ್ಕರ್ಮಿಗಳಿಗೆ ಮುಕ್ತ ಅವಕಾಶ ಕಲ್ಪಿಸಿರುವುದು ಕಳವಳಕಾರಿ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಮುಸ್ಲಿಮ್ ವರ್ತಕರಿಂದ ವಸ್ತುಗಳನ್ನು ಖರೀದಿಸಬಾರದೆಂದುಕೋವಿಡ್ ಸಂದರ್ಭದಲ್ಲಿ ಹಿಂದೂ ಮತಾಂಧ ಸಂಘಟನೆಗಳು ನಡೆಸಿದ ದೌರ್ಜನ್ಯ ಇನ್ನೂ ಹಸಿಹಸಿಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ, ದೇವಸ್ಥಾನಗಳಲ್ಲಿ ದಲಿತರಿಗೆ ಇಂದಿಗೂ ಪ್ರವೇಶವಿಲ್ಲ. ಚಾಮರಾಜನಗರದಲ್ಲಿ ದಲಿತ ಮಹಿಳೆ ಸಾರ್ವಜನಿಕ ಟ್ಯಾಂಕ್‌ನಿಂದ ನೀರು ಕುಡಿದ ಕಾರಣಕ್ಕೆ ಅಲ್ಲಿನ ಸವರ್ಣೀಯರು ಇಡೀ ಟ್ಯಾಂಕ್‌ನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿದರು. ದಲಿತರ ಮೇಲಿನ ದೌರ್ಜನ್ಯ ನಿಯಂತ್ರಿಸಲು ‌ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಘಟನೆಗಳು ಸಂವಿಧಾನದ ಪರಿಚ್ಛೇದ 14-21ರ ಸಮಾನತೆ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಆದರೂ, ಸಂಬಂಧಿಸಿದ ವ್ಯಕ್ತಿಗಳಿಗೆ ಶಿಕ್ಷೆಯಾಗಿಲ್ಲ. ಸಂವಿಧಾನವನ್ನು ರಕ್ಷಿಸುವ ಇಚ್ಛಾಶಕ್ತಿಯಿದ್ದರೆ ಮೇಲಿನ ಘಟನೆಗಳಲ್ಲಿ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ. ಅನ್ಯಮತೀಯರ, ದಲಿತರ ಘನತೆಗೆ ಚ್ಯುತಿ ಬರದಂತೆ ಎಚ್ಚರ ವಹಿಸಬೇಕು’ ಎಂದೂ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT