ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಹ್ಯಾಕಾಶ ಮಿಲಿಟರಿಯ ನಾಲ್ಕನೇ ಅಂಗ: ಡಾ.ಜಿ.ಸತೀಶ್‌ ರೆಡ್ಡಿ

Last Updated 11 ಜನವರಿ 2023, 14:28 IST
ಅಕ್ಷರ ಗಾತ್ರ

ಬೆಂಗಳೂರು:‘ಬಾಹ್ಯಾಕಾಶವು ಮಿಲಿಟರಿಯ ನಾಲ್ಕನೇ ಅಂಗವಾಗಿದೆ. ಅನ್ಯ ದೇಶಗಳ ಮಿಲಿಟರಿ ಉಪಗ್ರಹಗಳಿಂದ ನಡೆಯುವ ಬೇಹುಗಾರಿಕೆ, ಅಧಿಕ ಶಕ್ತಿಯ ಅಯಸ್ಕಾಂತೀಯ ಮತ್ತು ವಿದ್ಯುತ್ಕಾಂತೀಯ ದಾಳಿಗಳನ್ನು ತಡೆಯುವ ಮತ್ತು ರಾಡಾರ್ ಚಟುವಟಿಕಗಳ ಮೇಲೆ ಕಣ್ಗಾವಲಿಡುವ ಅಗತ್ಯವಿದೆ’ ಎಂದು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ.ಜಿ.ಸತೀಶ್‌ ರೆಡ್ಡಿ ತಿಳಿಸಿದರು.

ಬಾಹ್ಯಾಕಾಶದಲ್ಲಿ ಉಪಗ್ರಹಗಳ ದಟ್ಟಣೆ ಮತ್ತು ಉಪಗ್ರಹ ಅವಶೇಷಗಳ ನಿರ್ವಹಣೆ ಕುರಿತ ಮೂರು ದಿನಗಳ ಅಂತರರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಬುಧವಾರ ಅವರು ಮಾತನಾಡಿ, ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಇದ್ದಂತೆ ಬಾಹ್ಯಾಕಾಶವೂ ಸೇನೆಯ ಪ್ರತ್ಯೇಕ ಅಂಗವಾಗಿ ರೂಪುಗೊಳ್ಳುತ್ತಿದೆ. ಇದರ ಮೂಲಕ ರಾಷ್ಟ್ರದ ನೆಲದ ಮತ್ತು ಸ್ವತ್ತುಗಳ ರಕ್ಷಣೆ ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು.

'ಬಾಹ್ಯಾಕಾಶದಲ್ಲಿ ನಿರ್ದಿಷ್ಟ ಉಪಗ್ರಹಗಳನ್ನು ಹೊಡೆದುರುಳಿಸುವ ತಂತ್ರಜ್ಞಾನವಿದೆ. ಈ ರೀತಿ ಆಕ್ರಮಣ ನಡೆಸಿದರೆ ದೇಶದೊಳಗಿನ ಎಲ್ಲ ಎಲೆಕ್ಟ್ರಾನಿಕ್ಸ್‌ ವ್ಯವಸ್ಥೆಗಳೂ ಅಸ್ತವ್ಯಸ್ತಗೊಳುತ್ತವೆ. ಆದ್ದರಿಂದ, ನಮ್ಮ ಉಪಗ್ರಹಗಳನ್ನು ನಾವು ರಕ್ಷಿಸಿಕೊಳ್ಳಲೇಬೇಕು. ಇದಕ್ಕೆ ಉಪಗ್ರಹ ನಿರೋಧಕ ವ್ಯವಸ್ಥೆ ಅಗತ್ಯವಿದ್ದು, ಭಾರತ ಅದನ್ನು ಹೊಂದಿದೆ. ಅಲ್ಲದೇ, ಯಾವುದೇ ದೇಶ ಅಯಸ್ಕಾಂತೀಯ, ವಿದ್ಯುತ್ಕಾಂತಿಯ ಮತ್ತು ಲೇಸರ್‌ ಕಿರಣಗಳ ಮೂಲಕ ದಾಳಿ ನಡೆಸಲು ಮುಂದಾದರೆ ಅದನ್ನು ತಕ್ಷಣವೇ ಪತ್ತೆ ಮಾಡಿ, ತಡೆಯಬೇಕಾಗುತ್ತದೆ. ಬಾಹ್ಯಾಕಾಶದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಚಟುವಟಿಕೆಗಳು ವ್ಯಾಪಕವಾಗಿ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಕಣ್ಗಾವಲಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ' ಎಂದು ಸತೀಶ್‌ ರೆಡ್ಡಿ ತಿಳಿಸಿದರು.

ಅಲ್ಲದೇ, ಸೌರ ಮಾರುತ, ಭೂಮಿಯ ಮೇಲೆ ಕ್ಷುದ್ರಗ್ರಹಗಳ ಅಪ್ಪಳಿಸುವಿಕೆ, ಉಲ್ಕಾಪಾತಗಳನ್ನು ಮೊದಲೇ ಗ್ರಹಿಸಿ ಅವುಗಳನ್ನು ನಿಭಾಯಿಸುವ ಪ್ರಯತ್ನ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಂಟಿಯಾಗಿ ನಡೆಸಬೇಕು. ಸೌರ ಮಾರುತದಿಂದ ದೂರಸಂಪರ್ಕ ವ್ಯವಸ್ಥೆಯೇ ಹಾಳಾಗಿ ಹೋಗುತ್ತದೆ. ವಿಕಿರಣ ಪ್ರವಾಹದಿಂದ ಜಿಪಿಎಸ್‌ ವ್ಯವಸ್ಥೆಯೇ ಸ್ಥಗಿತಗೊಳ್ಳುತ್ತದೆ. ಆದ್ದರಿಂದ ಬಾಹ್ಯಾಕಾಶ ಹವಾಮಾನದ ಮೇಲೂ ನಿಗಾ ಇಡುವ ಕೆಲಸ ಜಂಟಿಯಾಗಿ ಆಗಬೇಕಿದೆ ಎಂದು ಅವರು ಹೇಳಿದರು.

‘ಬಾಹ್ಯಾಕಾಶದ ಉಡಾವಣಾ ಯೋಜನೆಗಳನ್ನೇ ಅವಶೇಷ ಶೂನ್ಯವಾಗಿ ಮಾರ್ಪಡಿಸಲು ಸಾಧ್ಯವೇ? ಈ ದಿಸೆಯಲ್ಲಿ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಸಾಧ್ಯವೇ ಎಂಬ ಬಗ್ಗೆ ವಿಜ್ಞಾನಿಗಳು ಚಿಂತನೆ ನಡೆಸಬೇಕು. ಬಾಹ್ಯಾಕಾಶದಲ್ಲಿನ ಉಪಗ್ರಹಗಳು ಸೇರಿ ಎಲ್ಲ ಬಗೆಯ ಸ್ವತ್ತುಗಳನ್ನು ಪರಸ್ಪರ ರಕ್ಷಿಸಿಕೊಳ್ಳಲು ವಿವಿಧ ದೇಶಗಳ ಮಧ್ಯೆ ಪರಸ್ಪರ ಮಾಹಿತಿ ವಿನಿಮಯ ಅಗತ್ಯ’ ಎಂದು ರೆಡ್ಡಿ ಪ್ರತಿಪಾದಿಸಿದರು.

ಅವಶೇಷ ನಿರ್ವಹಣೆ ಲಾಭದಾಯಕ ವ್ಯಾಪಾರ

‘ಬಾಹ್ಯಾಕಾಶ ಅವಶೇಷಗಳು ಮತ್ತು ಉಪಗ್ರಹ ದಟ್ಟಣೆ ನಿ‌ರ್ವಹಣೆ ಲಾಭದಾಯಕ ವ್ಯಾಪಾರ– ವ್ಯವಹಾರದ ಅವಕಾಶವಾಗಿ ಮಾರ್ಪಟ್ಟಿದೆ. ಇದಕ್ಕೆ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಪ್ರಯತ್ನ ಜಗತ್ತಿನ ಎಲ್ಲೆಡೆ ನಡೆಯುತ್ತಿದ್ದು, ನಮ್ಮಲ್ಲೂ ಹಲವು ಖಾಸಗಿಯವರು ಕಾರ್ಯಪ್ರವೃತ್ತರಾಗಿದ್ದಾರೆ’ ಎಂದು ಇನ್‌ಸ್ಪೇಸ್‌ ಅಧ್ಯಕ್ಷ ಪವನ್‌ ಕುಮಾರ್‌ ಗೋಯೆಲ್ ಹೇಳಿದರು.

ಈ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳು, ಇಸ್ರೊ ಮತ್ತು ಸರ್ಕಾರ ಜಂಟಿಯಾಗಿ ಪ್ರಯತ್ನ ನಡೆಸಬೇಕು. ಬಾಹ್ಯಾಕಾಶ ಕ್ಷೇತ್ರದಲ್ಲಿರುವ ವಿಪುಲ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಮುಂಚೂಣಿಗೆ ಬರಬೇಕು. ಇದಕ್ಕಾಗಿ ಜಾಗತಿಕ ಸಹಭಾಗಿತ್ವಕ್ಕೂ ಮುಂದಾಗಬೇಕು ಎಂದು ಸಲಹೆ ನೀಡಿದರು. ಇಸ್ರೊ ಅಧ್ಯಕ್ಷ ಎಸ್‌. ಸೋಮನಾಥ್ ಅವರೂ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT