ಶನಿವಾರ, ಅಕ್ಟೋಬರ್ 1, 2022
23 °C
ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ ಪ್ರಕಟ

ಶಿವರಾಮು, ಬಳಿಗಾರಗೆ ‘ಜಾನಪದ ತಜ್ಞ ಪ್ರಶಸ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಜಾನಪದ ಅಕಾಡೆಮಿಯ 2022ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟವಾಗಿದ್ದು, ಜಾನಪದ ವಿದ್ವಾಂಸರಾದ ಮಂಡ್ಯದ ವ.ನಂ. ಶಿವರಾಮು ಹಾಗೂ ಬಾಗಲಕೋಟೆಯ ಶಂಭು ಬಳಿಗಾರ ಅವರು ‘ಜಾನಪದ ತಜ್ಞ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. 

ಅಕಾಡೆಮಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ಹಾಗೂ ರಿಜಿಸ್ಟ್ರಾರ್ ಎನ್. ನಮ್ರತಾ ಅವರು ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಇಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು. ‘ವಾರ್ಷಿಕ ಗೌರವ ಪ್ರಶಸ್ತಿ’ಗೆ 30 ಜಿಲ್ಲೆಗಳಿಂದ 30 ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಎಲ್ಲ ಜಾತಿಯವರಿಗೂ ಪ್ರಾತಿನಿಧ್ಯ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲಾಗಿದೆ. ‘ಜಾನಪದ ತಜ್ಞ ಪ್ರಶಸ್ತಿ’ಯು ತಲಾ ₹ 50 ಸಾವಿರ ನಗದು ಹಾಗೂ ‘ಗೌರವ ಪ್ರಶಸ್ತಿ’ಯು ತಲಾ ₹ 25 ಸಾವಿರ ನಗದು ಒಳಗೊಂಡಿದೆ’ ಎಂದು ಮಂಜಮ್ಮ ಜೋಗತಿ ತಿಳಿಸಿದರು.

‘ಮಂಡ್ಯದ 105 ವರ್ಷದ ಚನ್ನಮ್ಮ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಹಿರಿಯರಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದ ಸ್ಥಳ ಹಾಗೂ ದಿನಾಂಕವನ್ನು ಶೀಘ್ರದಲ್ಲಿಯೇ ನಿಗದಿ ಮಾಡಲಾಗುವುದು’ ಎಂದು ಹೇಳಿದರು. 

ಗೌರವ ಪ್ರಶಸ್ತಿಗೆ ಆಯ್ಕೆಯಾದವರು: ಬೆಂಗಳೂರಿನ ಚಿನ್ನಮ್ಮಯ್ಯ (ಜಾನಪದ ಕಥೆ), ಬೆಂಗಳೂರು ಗ್ರಾಮಾಂತರದ ಹುಚ್ಚ ಹನುಮಯ್ಯ (ಜನಪದ ವೈದ್ಯ), ರಾಮನಗರದ ಗುರುಮೂರ್ತಿ ಜಿ. (ತತ್ವಪದ), ತುಮಕೂರಿನ ಹನುಮಕ್ಕ (ಸೋಬಾನೆ ಪದ), ಕೋಲಾರದ ಡಿ.ಆರ್. ರಾಜಪ್ಪ (ಜಾನಪದ ಗಾಯನ), ಶಿವಮೊಗ್ಗದ ದೇವೇಂದ್ರಪ್ಪ (ಡೊಳ್ಳು ಕುಣಿತ), ಚಿತ್ರದುರ್ಗದ ಕಾ. ರಾಮೇಶ್ವರಪ್ಪ (ಜಾನಪದ ಗಾಯನ), ದಾವಣಗೆರೆಯ ನಾಗರಾಜಪ್ಪ ಡಿ.ಜಿ. (ಭಜನೆ), ಚಿಕ್ಕಬಳ್ಳಾಪುರದ ನಾರಾಯಣಸ್ವಾಮಿ (ಪಂಡರಿ ಭಜನೆ), ಮಂಡ್ಯದ ಚನ್ನಮ್ಮ (ತತ್ವಪದ), ಮೈಸೂರಿನ ಗುರುರಾಜ್ (ತಂಬೂರಿ ಪದ) ಹಾಸನದ ರಂಗಶೆಟ್ಟಿ (ರಂಗದ ಕುಣಿತ) ಆಯ್ಕೆಯಾಗಿದ್ದಾರೆ. 

ದಕ್ಷಿಣ ಕನ್ನಡದ ಅಣ್ಣುಶೆಟ್ಟಿ (ಭೂತಾರಾಧನೆ), ಚಾಮರಾಜನಗರದ ಶಿವರುದ್ರಸ್ವಾಮಿ (ವೀರಭದ್ರನ ನೃತ್ಯ), ಚಿಕ್ಕಮಗಳೂರಿನ ರೇವಣಸಿದ್ದಪ್ಪ (ವೀರಗಾಸೆ), ಕೊಡಗಿನ ಕೆ.ಸಿ. ದೇವಕಿ (ಜಾನಪದ ಹಾಡುಗಾರಿಕೆ), ಉಡುಪಿಯ ರಾಧಮ್ಮ (ಜಾನಪದ ಕರಕುಶಲ ಕಲೆ), ಧಾರವಾಡದ ಸಾಂಬಯ್ಯ ಹಿರೇಮಠ (ಹಾಡುಗಾರಿಕೆ), ಗದಗದ ನಾಗಮ್ಮ ಹೊನ್ನಪ್ಪ ಜೋಗಿ (ಸೋಬಾನೆ ಪದ), ವಿಜಯಪುರದ ವೀರಭದ್ರಪ್ಪ ಯಲ್ಲಪ್ಪ ದಳವಾಯಿ (ಏಕತಾರಿ ಪದ), ಬಾಗಲಕೋಟೆಯ ಶಿವನವ್ವ ಮಲ್ಲಪ್ಪ ಭಾವಿಕಟ್ಟಿ (ಹಂತಿಪದ), ಹಾವೇರಿಯ ಚಂದ್ರಪ್ಪ ಯಲ್ಲಪ್ಪ ಭಜಂತ್ರಿ (ಶಹನಾಯಿ ವಾದನ), ಬೆಳಗಾವಿಯ ಪುಂಡಲೀಕ ಮಾದರ (ಹಲಗೆವಾದನ), ಉತ್ತರ ಕನ್ನಡದ ಶಾರದಾ ಮಹಾದೇವ ಮೊಗೇರ (ಸಂಪ್ರದಾಯದ ಪದ) ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಬಳ್ಳಾರಿಯ ಅಂಜಿನಮ್ಮ ಜೋಗತಿ (ಜೋಗತಿ ನೃತ್ಯ), ರಾಯಚೂರಿನ ಪ್ರಕಾಶಯ್ಯ ನಂದಿ (ಗೀಗೀಪದ), ಕೊಪ್ಪಳದ ದೊಡ್ಡ ಯಮನೂರಪ್ಪ ಭೀಮಪ್ಪ ಭಜಂತ್ರಿ (ಶಹನಾಯಿ ವಾದನ), ಕಲಬುರ್ಗಿಯ ಕರಬಸಯ್ಯ ಶಂಕರಯ್ಯ ಮಠಪತಿ (ತತ್ವಪದ), ಯಾದಗಿರಿಯ ರಾಧಾಬಾಯಿ ಕೃಷ್ಣರಾವ ಮಾಲಿ ಪಾಟೀಲ (ಸಂಪ್ರದಾಯ ಪದ) ಹಾಗೂ ಬೀದರಿನ ಭಾರತೀಬಾಯಿ (ಲಂಬಾಣಿ ನೃತ್ಯ) ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು