ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನಸೇವಕ' ಕಾರ್ಯಕ್ರಮಕ್ಕೆ ಚಾಲನೆ : ಮನೆ ಬಾಗಿಲಿಗೆ ಸರ್ಕಾರಿ ಸೇವೆ

Last Updated 19 ಫೆಬ್ರುವರಿ 2021, 21:54 IST
ಅಕ್ಷರ ಗಾತ್ರ

ಕೆಂಗೇರಿ: ಸಕಾಲ ಯೋಜನೆಯಡಿ ‘ಜನಸೇವಕ’ ಕಾರ್ಯಕ್ರಮಕ್ಕೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ಯಶವಂತಪುರ ಕ್ಷೇತ್ರದ ಉಳ್ಳಾಲ ವಾರ್ಡ್‌ನಲ್ಲಿ ಯೋಜನೆಗೆ ಚಾಲನೆ ನೀಡಿದ ಸಕಾಲ ಮಿಷನ್ ಸಚಿವ ಎಸ್. ಸುರೇಶ್ ಕುಮಾರ್, ‘ಸಾರ್ವಜನಿಕರ ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳನ್ನು ತಲುಪಿಸುವುದು ಯೋಜನೆಯ ಉದ್ದೇಶವಾಗಿದೆ' ಎಂದರು.

‘ಈ ಕಾರ್ಯಕ್ರಮವನ್ನು ರಾಜಧಾನಿಯ ಐದು ವಿಧಾನಸಭಾಕ್ಷೇತ್ರಗಳಲ್ಲಿ ಜಾರಿಗೊಳಿಸಲಾಗಿದ್ದು, ನಂತರ ರಾಜ್ಯದ ಇತರೆಡೆಗಳಲ್ಲಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು’ ಎಂದು ಅವರು ಹೇಳಿದರು.

‘ಹಿರಿಯ ನಾಗರಿಕರು ಸೇರಿದಂತೆ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆಯುವುದು ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಲಿದೆ’ ಎಂದರು.

‘ಬೆಂಗಳೂರು ಒನ್ ಮಾದರಿಯಲ್ಲಿ ಗ್ರಾಮ ಒನ್ ಸೇವೆಯನ್ನು ಶೀಘ್ರದಲ್ಲಿ ಜಾರಿಗೊಳಿಸಲಾಗುವುದು’ ಎಂದು ಅವರು ಹೇಳಿದರು.

ಕ್ಷೇತ್ರದ ಶಾಸಕರೂ ಆದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ‘ಆಧಾರ್, ಮತದಾರರ ಗುರುತಿನ ಚೀಟಿ, ಪಹಣಿಯಂತ ಅಗತ್ಯ ಸೇವೆಗಳಿಗಾಗಿ ಸರ್ಕಾರಿ ಕಚೇರಿಗೆ ಅಲೆದಾಡುತ್ತಿದ್ದ ಜನರಿಗೆ ಈ ಸೇವೆ ಅತ್ಯಂತ ಉಪಯುಕ್ತವಾಗಿದೆ’ ಎಂದರು.

ಸಾಂಕೇತಿಕವಾಗಿ ಯಶವಂತಪುರ ಕ್ಷೇತ್ರದ ಮೂವರು ಫಲಾನುಭವಿಗಳ ಮನೆಗೆ ಹೋಗಿ ಅವರು ಕೋರಿದ್ದ ಸೇವೆಗಳ ದಾಖಲಾತಿಗಳನ್ನು ಸಚಿವರಿಬ್ಬರು ನೀಡಿದರು.

ಜನಸೇವಕ್ ಯೋಜನಾ ನಿರ್ದೇಶಕಿ ಸಿಂಧೂ, ಬಿಬಿಎಂಪಿ ಜಂಟಿ ಆಯುಕ್ತ ನಾಗರಾಜ್, ಎಇಇ ದಯಾನಂದ್, ಆರ್.ಒ ದಯಾನಂದ್, ಎಆರ್‌ಒ ದೇವರಾಜ್ ಬಿಜೆಪಿ ಮುಖಂಡರಾದ ಅನಿಲ್ ಕುಮಾರ್, ನಿಶಾಂತ್ ಸೋಮಶೇಖರ್, ಬಿಜೆಪಿ ಅಲ್ಪಸಂಖ್ಯಾತರ ಮಹಿಳಾ ಪ್ರಧಾನ ಕಾರ್ಯದರ್ಶಿ ಸಬಿಹಾ ಅಂಜುಂ, ಮಹೇಂದ್ರ ಕಿರಣ್ ಉಪಸ್ಥಿತರಿದ್ದರು.

ಜನಸೇವಕ ಯೋಜನೆಯು ರಾಜಾಜಿನಗರ, ಮಹದೇವಪುರ, ಬೊಮ್ಮನಹಳ್ಳಿ, ದಾಸರಹಳ್ಳಿ, ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಅನುಷ್ಠಾನಗೊಂಡಿದೆ.

ಯಾವ ಸೇವೆಗಳು ಲಭ್ಯ?
ಆಧಾರ್ ಕಾರ್ಡ್, ಜಾತಿ/ ಆದಾಯ ಪ್ರಮಾಣ ಪತ್ರ, ವೃದ್ಧಾಪ್ಯ ವೇತನ, ಅಂಗವಿಕಲ/ ವಿಧವಾ ಪಿಂಚಣಿ, ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ಹಾಗೂ ಕಂದಾಯ ಇಲಾಖೆಯ 21 ಸೇವೆಗಳು, ಕರ್ನಾಟಕ ಕಟ್ಟಡ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿ ಸೇವೆಗಳು, ಬಿಬಿಎಂಪಿ ವ್ಯಾಪ್ತಿಯ18 ಸೇವೆಗಳು.

ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯೋಜನೆಗಳು, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸೇವೆಗಳು, ಪೊಲೀಸ್ ಇಲಾಖೆಯ ಪ್ರಮುಖ 3 ಸೇವೆಗಳು, ಬಿಪಿಎಲ್ ಪಡಿತರ ಚೀಟಿ, ಇ-ಸ್ಟ್ಯಾಂಪ್, ಸಾರಿಗೆ ಇಲಾಖೆ ಮತ್ತು ಇನ್ನಿತರೆ ಇಲಾಖೆಯ ಸೇವೆಗಳು 'ಜನಸೇವಕ'ದ ಅಡಿ ದೊರೆಯುತ್ತವೆ.
ಮಾಹಿತಿಗೆ, 080-44554455, www.janasevaka.karnataka.gov.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT