ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BWSSB: ರಾಸಾಯನಿಕ ತ್ಯಾಜ್ಯ ನಿರ್ವಹಣೆಗೆ ಜಪಾನ್ ತಂತ್ರಜ್ಞಾನ

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಜಲಮೂಲ ಕಲುಷಿತಗೊಳಿಸದಂತೆ ಮೂಲದಲ್ಲೇ ಸಂಸ್ಕರಣೆ
Published 16 ಏಪ್ರಿಲ್ 2024, 20:43 IST
Last Updated 16 ಏಪ್ರಿಲ್ 2024, 20:43 IST
ಅಕ್ಷರ ಗಾತ್ರ

ಬೆಂಗಳೂರು: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಉತ್ಪತ್ತಿಯಾಗುತ್ತಿರುವ ರಾಸಾಯನಿಕ ತ್ಯಾಜ್ಯದ ನೀರನ್ನು ಜಪಾನಿನ ಆಧುನಿಕ ತಂತ್ರಜ್ಞಾನದ ಮೂಲಕ ಸಂಸ್ಕರಿಸಿ ‘ವಿಶ್ವದ ಪ್ರಮುಖ ಪರಿಸರಸ್ನೇಹಿ’ ಕೈಗಾರಿಕಾ ಪ್ರದೇಶವನ್ನಾಗಿಸಲು ಬೆಂಗಳೂರು ಜಲಮಂಡಳಿ ನಿರ್ಧರಿಸಿದೆ.

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನಿಡಿದ್ದ ಜಪಾನ್‌ ತಂತ್ರಜ್ಞಾನ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ಪ್ರಸಾತ್‌ ಮನೋಹರ್‌ ಅವರು ಚರ್ಚೆ ನಡೆಸಿದರು. ಕೈಗಾರಿಕಾ ಪ್ರದೇಶದಲ್ಲಿನ ರಾಸಾಯನಿಕ ತ್ಯಾಜ್ಯ ನೀರು ಉತ್ಪಾದನೆ ಹಾಗೂ ಅದರ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಪೀಣ್ಯ ಕೈಗಾರಿಕಾ ಪ್ರದೇಶ ಏಷ್ಯಾದಲ್ಲೇ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿದೆ. ಇಲ್ಲಿ ಹಲವು ಕೈಗಾರಿಕೆಗಳು ರಾಸಾಯನಿಕ ತ್ಯಾಜ್ಯ ನೀರನ್ನು ಉತ್ಪತ್ತಿ ಮಾಡುತ್ತವೆ. ಕೆಲವು ದೊಡ್ಡ ಸಂಸ್ಥೆಗಳು ತಮ್ಮದೇ ಇಟಿಪಿ ಹೊಂದಿದ್ದು ಅದರ ಮೂಲಕ ಸಂಸ್ಕರಣೆ ಮಾಡುತ್ತಿವೆ. ಹಲವು ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳು ಸಂಸ್ಕರಣಾ ವ್ಯವಸ್ಥೆ ಹೊಂದದೆ ಬೇರೆ ಮಾರ್ಗಗಳ ಮೂಲಕ ತ್ಯಾಜ್ಯ ನೀರು ವಿಲೇವಾರಿ ಮಾಡುತ್ತಿವೆ. ಅಲ್ಲದೆ, ನೀರಿಗಾಗಿ ಹೆಚ್ಚಿನ ಹಣ ವೆಚ್ಚ ಮಾಡುತ್ತಿವೆ.ಇದು ಹೆಚ್ಚು ಖರ್ಚು ಆಗುವ ವ್ಯವಸ್ಥೆಯಾಗಿದೆ. ಸಂಸ್ಕರಣೆ ಇಲ್ಲದೆ ಭೂಮಿಗೆ ಸೇರುವ ಕಲುಷಿತ ನೀರಿನಿಂದ ಜಲಮೂಲಗಳು ಹಾಗೂ ಅಂತರ್ಜಲ ಕಲುಷಿತವಾಗುತ್ತಿದೆ.

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಅತ್ಯಾಧುನಿಕ ಜಪಾನ್‌ ತಂತ್ರಜ್ಞಾನದ ‘ಮೊಬೈಲ್‌ ಇ.ಟಿ.ಪಿ’ ಅಳವಡಿಸಲು ಜಲಮಂಡಳಿ ಮುಂದಾಗಿದೆ. ಇದರಿಂದ ಕೈಗಾರಿಕೆಗಳ ಬಾಗಿಲಿನಲ್ಲೇ ರಾಸಾಯನಿಕ ತ್ಯಾಜ್ಯ ನೀರು ಸಂಸ್ಕರಣೆಯಾಗಲಿದ್ದು, ಅದನ್ನು ಮರುಬಳಕೆ ಮಾಡಿಕೊಳ್ಳಬಹುದು. ಇದರಿಂದ ಕೈಗಾರಿಕೆಗಳಿಗೆ ನೀರಿನ ವೆಚ್ಚದಲ್ಲಿ ಉಳಿತಾಯವಾಗುತ್ತದೆ.

‘ಜಪಾನ್‌ನ ಈ ತಂತ್ರಜ್ಞಾನದ ಪ್ರದರ್ಶನವನ್ನು ಏಪ್ರಿಲ್‌ 23ರಂದು ಆಯೋಜಿಸಲಾಗುವುದು. ಮೂರು ದಿನ ವಿವಿಧ ಕೈಗಾರಿಕೆಗಳ ಬಾಗಿಲಿಗೆ ತೆರಳಲಿರುವ ‘ಮೊಬೈಲ್‌ ಇ.ಟಿ.ಪಿ’ ಕೈಗಾರಿಕೆಗಳಿಗಾಗುವ ಅನುಕೂಲದ ಬಗ್ಗೆ ಪ್ರಾಯೋಗಿಕ ಮಾಹಿತಿ ನೀಡಲಾಗುತ್ತದೆ’ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ ಪ್ರಸಾತ್‌ ತಿಳಿಸಿದರು.

ಪೀಣ್ಯ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಆರೀಫ್‌, ನಿಯೋಜಿತ ಅಧ್ಯಕ್ಷ ಶಿವಕುಮಾರ್, ಎಸಿಇ ಸಂಸ್ಥೆಯ ಟಿ.ಕೆ. ರಮೇಶ್, ಜಪಾನ್ ಸಂಸ್ಥೆಯ ಪ್ರತಿನಿಧಿಗಳು, ಜಲಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT