ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸದೆ ಕವಾಟ ಬದಲು, ಜಯದೇವ ಆಸ್ಪತ್ರೆಯ ಸಾಧನೆ

ಜಯದೇವ ಹೃದ್ರೋಗ ಆಸ್ಪತ್ರೆ ವೈದ್ಯರ ಸಾಧನೆ
Last Updated 11 ಮಾರ್ಚ್ 2022, 15:14 IST
ಅಕ್ಷರ ಗಾತ್ರ

ಬೆಂಗಳೂರು:ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 17 ವರ್ಷದ ಬಾಲಕನಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸದೇ ಯಶಸ್ವಿಯಾಗಿ ಕವಾಟ ಬದಲಾವಣೆ ಮಾಡಲಾಗಿದೆ. ₹15 ಲಕ್ಷ ವೆಚ್ಚದ ಈ ಶಸ್ತ್ರಚಿಕಿತ್ಸೆಯನ್ನು ದಾನಿಗಳ ನೆರವಿನಿಂದ ಉಚಿತವಾಗಿ ಒದಗಿಸಲಾಗಿದೆ.

ಬಾಲಕನಿಗೆ ಈ ಮೊದಲು ಎರಡು ಬಾರಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಮೂರನೇ ಬಾರಿ ಈ ಶಸ್ತ್ರಚಿಕಿತ್ಸೆ ನಡೆಸಿದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿತ್ತು. ಹಾಗಾಗಿ, ಸಂಸ್ಥೆಯಮಕ್ಕಳ ಹೃದ್ರೋಗ ತಜ್ಞರಾದ ಡಾ. ಜಯರಂಗನಾಥ್ ಎಂ. ಮತ್ತು ಡಾ. ಜಾನ್ ಜೋಸೆಫ್ ನೇತೃತ್ವದ ವೈದ್ಯರ ತಂಡವುತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸದೆ 19ಮಿಲಿ ಮೀಟರ್ ಅಂಗಾಂಶ ಕವಾಟ ಅಳವಡಿಸಿದೆ. ಈ ಮಾದರಿಯ ಶಸ್ತ್ರಚಿಕಿತ್ಸೆ ರಾಜ್ಯದಲ್ಲೇ ಮೊದಲು ಎಂದು ಸಂಸ್ಥೆ ಹೇಳಿದೆ.

ಬೆಂಗಳೂರಿನಲ್ಲಿ ವಾಸವಿರುವ ಬಾಲಕನ ತಂದೆ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅವರುಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಮನೆ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದ ತಾಯಿ, ಇಬ್ಬರ ಮಕ್ಕಳ ಜವಾಬ್ದಾರಿ ಹೊಂದಿದ್ದರು.

‘ಬಾಲಕನಿಗೆ 2012ರಲ್ಲಿ ಹೃದಯ ಸಮಸ್ಯೆ ಕಾಣಿಸಿಕೊಂಡಿತ್ತು. ಜಯದೇವ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿದಾಗ ಹೃದಯದ ಬಲಭಾಗದಲ್ಲಿ ಸೋಂಕು ದೃಢಪಟ್ಟಿತ್ತು. ಆ ವೇಳೆಸೋಂಕು ಕವಾಟವನ್ನು ಸಂಪೂರ್ಣವಾಗಿ ನಾಶಮಾಡಿತ್ತು. ಸೂಕ್ತ ಚಿಕಿತ್ಸೆ ನೀಡಿ, ತೆರೆದ ಶಸ್ತ್ರಚಿಕಿತ್ಸೆಗೆ ನಡೆಸಿ ಕವಾಟ ಸರಿಪಡಿಸಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ನಿರಂತರ ಸಮಸ್ಯೆ:‘ಒಂದು ವರ್ಷದ ನಂತರ ಪುನಃ ಅದೇ ಕವಾಟದ ಸೋರಿಕೆಯಾಗಿತ್ತು. ಆಗ ಚಿಕಿತ್ಸೆ ಒದಗಿಸಿ,2017ರಲ್ಲಿ ಸೋರಿಕೆಯನ್ನು ತಡೆಯಲು ಎರಡನೇ ಬಾರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಎರಡು ವರ್ಷಗಳ ನಂತರ ಸೋರಿಕೆ ಮತ್ತಷ್ಟುತೀವ್ರಗೊಂಡಿತು. 2020ರಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಆತನ ಹೃದಯದಲ್ಲಿ ಏರುಪೇರು ಕಂಡುಬಂದಿತು. ಆದ್ದರಿಂದ ಅವನನ್ನು ಪುನಃ ಚಿಕಿತ್ಸೆಗೆ ಒಳಪಡಿಸಿ,‘ರೇಡಿಯೋ ಫ್ರೀಕ್ವೆನ್ಸಿ ಅಬ್ಲೇಶನ್’ ಮೂಲಕ ಕಡಿಮೆ ಇದ್ದ ಹೃದಯದ ಬಡಿತವನ್ನು ಹೆಚ್ಚಿಸಲಾಯಿತು’ ಎಂದು ಹೇಳಿದ್ದಾರೆ.

‘ಸರಿಪಡಿಸಲಾದ ಕವಾಟದಿಂದ ಮತ್ತೆ ಸೋರಿಕೆ ಕಂಡು ಬಂದು, ದೈನಂದಿನ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ, ಹೆಚ್ಚು ಆಯಾಸ ಮತ್ತು ಪಾದಗಳಲ್ಲಿ ಊತ ಕಂಡುಬರುತ್ತಿತ್ತು. ಈಗಾಗಲೇ ಎರಡು ಬಾರಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಾಲಕನಿಗೆ ಮೂರನೇ ಬಾರಿ ಶಸ್ತ್ರಚಿಕಿತ್ಸೆ ಮಾಡುವುದು ಅಪಾಯಕಾರಿಯಾಗಿತ್ತು. ಆದ್ದರಿಂದ ಹೊಸ ಮಾದರಿಯನ್ನು ಅನುಸರಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು’ ಎಂದು ವೈದ್ಯರು ತಿಳಿಸಿದ್ದಾರೆ.

ಸಂಸ್ಥೆ ನಿರ್ದೇಶಕಡಾ.ಸಿ.ಎನ್. ಮಂಜುನಾಥ್, ‘ಈ ಹೃದಯ ಶಸ್ತ್ರಚಿಕಿತ್ಸೆಗೆ ಕವಾಟ ವೆಚ್ಚ ಸೇರಿ ₹ 15 ಲಕ್ಷ ಆಗಿದೆ. ರೋಗಿಯ ಆರ್ಥಿಕ ಪರಿಸ್ಥಿತಿ ಪರಿಗಣಿಸಿ, ದಾನಿಗಳಿಂದ ₹ 6.5 ಲಕ್ಷ ಸಂಗ್ರಹಿಸಲಾಗಿದೆ. ಬಾಕಿ ಮೊತ್ತವನ್ನು ಸಂಸ್ಥೆ ಮತ್ತು ಕವಾಟ ತಯಾರಿಕಾ ಕಂಪನಿಯಿಂದ ಭರಿಸಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT