ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ತೆರವುಗೊಳಿಸದಿದ್ದರೆ ಕ್ರಮ– ತುಷಾರ್‌

ಜೆ.ಸಿ, ಸಿ.ಇಗೆ ತಲಾ ₹50 ಸಾವಿರ ವಸೂಲಿ
Published 14 ಆಗಸ್ಟ್ 2023, 22:30 IST
Last Updated 14 ಆಗಸ್ಟ್ 2023, 22:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಅನಧಿಕೃತ ಫ್ಲೆಕ್ಸ್‌, ಹೋರ್ಡಿಂಗ್, ಬ್ಯಾನರ್‌ಗಳು ಉಳಿದರೆ ಅದಕ್ಕೆ ಆಯಾ ವಲಯದ ಜಂಟಿ ಆಯುಕ್ತ, ಮುಖ್ಯ ಎಂಜಿನಿಯರ್‌ ಅವರೇ ಹೊಣೆ. ಅವರಿಂದ ತಲಾ ₹50 ಸಾವಿರ ಠೇವಣಿ ವಸೂಲಿ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ ಇತ್ಯಾದಿಗಳನ್ನು ನಿಯಮಾನುಸಾರ ತೆರವುಗೊಳಿಸಬೇಕು. ಇವುಗಳನ್ನು ಅಳವಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಫೆ.17, ಆ.8 ಮತ್ತು 10ರಂದು ಟಿಪ್ಪಣಿ, ಸುತ್ತೋಲೆಗಳ ಮೂಲಕ ಮುಖ್ಯ ಆಯುಕ್ತರು ಸೂಚಿಸಿದ್ದರು. ಆದರೂ  ಸಂಪೂರ್ಣವಾಗಿ ತೆರವಾಗಿಲ್ಲ.

ಹೀಗಾಗಿ, ಆ.14ರಂದು ಆದೇಶ ಹೊರಡಿಸಿರುವ ತುಷಾರ್‌ ಗಿರಿನಾಥ್, ‘ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಎಲ್‌ಇಡಿ ಇತರೆ ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕು. ಈ ಬಗ್ಗೆ ಕೈಗೊಂಡ ಕ್ರಮಗಳ ಕುರಿತ ಅಂಕಿ–ಅಂಶಗಳನ್ನು ದಾಖಲೆ ಸಹಿತ ಅನುಪಾಲನಾ ವರದಿಯನ್ನು ಆ.16ರೊಳಗೆ ಸಲ್ಲಿಸಲು ಸೂಚಿಸಿದ್ದಾರೆ. ಇದಾಗದಿದ್ದರೆ, ಹೈಕೋರ್ಟ್‌ ಆದೇಶದ ಉಲ್ಲಂಘನೆಯಾಗುತ್ತದೆ. ಕರ್ತವ್ಯಲೋಪದಿಂದ ಎದುರಾಗುವ ಪರಿಣಾಮಗಳಿಗೆ ಜಂಟಿ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್‌ಗಳನ್ನು ವೈಯಕ್ತಿಕ ಜವಾಬ್ದಾರರನ್ನಾಗಿಸಲು ಸೂಚಿಸಿದ್ದಾರೆ.

ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಜಾಹೀರಾತುಗಳನ್ನು ತೆರವುಗೊಳಿಸದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ, ತಲಾ ₹50 ಸಾವಿರ ಠೇವಣಿಯನ್ನು ವಸೂಲಿ ಮಾಡಿ ನ್ಯಾಯಾಲಯದಲ್ಲಿ ಇರಿಸಲಾಗುವುದು. ಆದ್ದರಿಂದ, ಈ ಕೂಡಲೇ ಪಾಲಿಕೆಯ ಎಲ್ಲ ವಲಯ ಆಯುಕ್ತರು ತಮ್ಮ ವ್ಯಾಪ್ತಿಯಲ್ಲಿ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಆದೇಶಿಸಿದ್ದಾರೆ.

ಎಂಟು ವಲಯಗಳ ಆಯುಕ್ತರು, ಹಣಕಾಸು, ಆಡಳಿತ, ಕಂದಾಯ, ಜಾಹೀರಾತು ವಿಭಾಗದ ವಿಶೇಷ ಆಯುಕ್ತರು, ಎಲ್ಲ ವಲಯಗಳ ಜಂಟಿ ಆಯುಕ್ತರು, ಜಾಹೀರಾತು ವಿಭಾಗದ ಉಪ ಆಯುಕ್ತರು, ಎಲ್ಲ ವಲಯಗಳ ಮುಖ್ಯ ಎಂಜಿನಿಯರ್‌ಗಳು, ಜಾಹೀರಾತು ವಿಭಾಗದ ಸಹಾಯಕ ಆಯುಕ್ತರಿಗೆ ಆದೇಶದ ಪ್ರತಿಯನ್ನು ಕಳುಹಿಸಿ, ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT