ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಾಜಿನಗರ ಜೆಟ್‌ಲ್ಯಾಗ್ ರೆಸ್ಟೊಬಾರ್ ವಿರುದ್ಧ ಚಾರ್ಜ್‌ಶೀಟ್: ನಟ ದರ್ಶನ್ ಸಾಕ್ಷಿ

ಅವಧಿ ಮೀರಿ ವ್ಯಾಪಾರ ನಡೆಸಿದ್ದ ಆರೋಪದಡಿ ರಾಜಾಜಿನಗರದ ‘ಜೆಟ್‌ಲ್ಯಾಗ್’ ರೆಸ್ಟೊಬಾರ್ ವಿರುದ್ಧ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರಿಂದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ.
Published 1 ಏಪ್ರಿಲ್ 2024, 20:44 IST
Last Updated 2 ಏಪ್ರಿಲ್ 2024, 3:34 IST
ಅಕ್ಷರ ಗಾತ್ರ

ಬೆಂಗಳೂರು: ಅವಧಿ ಮೀರಿ ವ್ಯಾಪಾರ ನಡೆಸಿದ್ದ ಆರೋಪದಡಿ ರಾಜಾಜಿನಗರದ ‘ಜೆಟ್‌ಲ್ಯಾಗ್’ ರೆಸ್ಟೊಬಾರ್ ವಿರುದ್ಧ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದು, ನಟ ದರ್ಶನ್ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಿದ್ದಾರೆ.

‘ಕಾಟೇರ’ ಸಿನಿಮಾ ಬಿಡುಗಡೆಯ ಯಶಸ್ಸು ಸಂಭ್ರಮಿಸಲು ರಾಜಾಜಿನಗರದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ‘ಜೆಟ್‌ಲ್ಯಾಗ್‌’ ರೆಸ್ಟೊಬಾರ್‌ನಲ್ಲಿ ಜನವರಿ 3ರಂದು ತಡರಾತ್ರಿ ಪಾರ್ಟಿ ಆಯೋಜಿಸಲಾಗಿತ್ತು. ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್, ನಟರಾದ ನೀನಾಸಂ ಸತೀಶ್, ಡಾಲಿ ಧನಂಜಯ, ಚಿಕ್ಕಣ್ಣ ಹಾಗೂ ಇತರರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.

‘ರಾತ್ರಿ 1 ಗಂಟೆವರೆಗೆ ಮಾತ್ರ ಪಾರ್ಟಿಗೆ ಅವಕಾಶವಿತ್ತು. ಆದರೆ, ಜನವರಿ 3ರಂದು ರಾತ್ರಿ 8 ಗಂಟೆಗೆ ಆರಂಭವಾದ ಪಾರ್ಟಿ ಮರುದಿನ ಜನವರಿ 4ರ ನಸುಕಿನ 3.30 ಗಂಟೆವರೆಗೂ ನಡೆದಿತ್ತು. ಪಾರ್ಟಿಯಲ್ಲಿದ್ದವರಿಗೆ ಮದ್ಯ ಹಾಗೂ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

‘ತಡರಾತ್ರಿ ಸ್ಥಳಕ್ಕೆ ಹೋಗಿದ್ದ ಪೊಲೀಸರು, 1 ಗಂಟೆಗೆ ವ್ಯಾಪಾರ ಬಂದ್ ಮಾಡುವಂತೆ ಸೂಚಿಸಿ ತೆರಳಿದ್ದರು. ಆದರೆ, ರೆಸ್ಟೊಬಾರ್ ಬಂದ್ ಮಾಡಿರಲಿಲ್ಲ. ಪಾರ್ಟಿಗೆ ಸಂಬಂಧಪಟ್ಟ ಫೋಟೊಗಳು ಹಾಗೂ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಅವಧಿ ಮೀರಿ ವ್ಯಾಪಾರ ನಡೆಸಿದ್ದ ಆರೋಪದಡಿ ರೆಸ್ಟೊಬಾರ್ ಮಾಲೀಕರಾದ ಶಶಿರೇಖಾ ಜಗದೀಶ್ ಹಾಗೂ ವ್ಯವಸ್ಥಾಪಕ ಪ್ರಶಾಂತ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ಇದೀಗ, ಇಬ್ಬರ ವಿರುದ್ಧವೂ 39ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಊಟ ಮಾಡಿ ಮನೆಗೆ

‘ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ದರ್ಶನ್ ಸೇರಿದಂತೆ ಎಂಟು ಮಂದಿಗೆ ನೋಟಿಸ್ ನೀಡಲಾಗಿತ್ತು. ವಿಚಾರಣೆಗೆ ಬಂದಿದ್ದ ಅವರು, ‘ರೆಸ್ಟೊಬಾರ್‌ನಲ್ಲಿ ಮದ್ಯದ ಪಾರ್ಟಿ ಮಾಡಿಲ್ಲ. ಊಟಕ್ಕೆಂದು ರೆಸ್ಟೊಬಾರ್‌ಗೆ ತೆರಳಿದ್ದೆವು. ಊಟ ಮಾಡಿ ಮನೆಗೆ ಹೋಗಿದ್ದೆವು’ ಎಂಬುದಾಗಿ ಹೇಳಿದ್ದರು. ಇವರೆಲ್ಲರನ್ನೂ ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT