ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಹಾದಿ’ ಪ್ರಚಾರಕ್ಕೆ ಸಿದ್ಧತೆ ನಡೆಸಿದ್ದ ಜೆಎಂಬಿ: ಉಗ್ರರ ಡೈರಿಗಳಿಂದ ಬಹಿರಂಗ

ಬೆಂಗಳೂರಿನಲ್ಲಿ ವಶಪಡಿಸಿಕೊಳ್ಳಲಾದ ಡೈರಿಗಳಿಂದ ಆಘಾತಕಾರಿ ಮಾಹಿತಿ
Last Updated 21 ಫೆಬ್ರುವರಿ 2020, 2:41 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಾದ್ಯಂತ ತಮ್ಮ ಚಟುವಟಿಕೆ ವಿಸ್ತರಿಸಿ ‘ಜಿಹಾದಿ’ ಸಿದ್ಧಾಂತವನ್ನು ಪ್ರಚುರಪಡಿಸಲು ಜಮಾತ್‌– ಉಲ್‌–ಮುಜಾಹಿದ್ದೀನ್ (ಜೆಎಂಬಿ) ಸಂಘಟನೆಯ ಉಗ್ರರು ಸಿದ್ಧತೆ ನಡೆಸಿದ್ದರು’ ಎಂಬ ಸಂಗತಿಯನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ತನಿಖೆ ಬಯಲಿಗೆ ಎಳೆದಿದೆ.

ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಎನ್‌ಐಎ ಪರ ವಕೀಲ ಪಿ.ಪ್ರಸನ್ನ ಕುಮಾರ್‌ ಅವರ ಮೂಲಕ ಸಲ್ಲಿಸಲಾದ ಸುದೀರ್ಘ ದೋಷಾರೋಪ ಪಟ್ಟಿಯಲ್ಲಿ, ಬೆಂಗಳೂರಿನ ಚಿಕ್ಕಬಾಣಾವರ ಹಾಗೂ ಶಿಕಾರಿಪಾಳ್ಯದ ಉಗ್ರರ ಅಡಗುದಾಣಗಳಲ್ಲಿ ವಶಪಡಿಸಿಕೊಂಡ ದಾಖಲೆಗಳಿಂದ ಈ ಅಂಶ ಖಚಿತವಾಗಿದೆ ಎಂದು ತನಿಖಾ ಸಂಸ್ಥೆ ವಿವರಿಸಿದೆ.

ಕೈಬರಹದ ಟಿಪ್ಪಣಿಗಳು, ಪುಸ್ತಕಗಳು, ಡೈರಿಗಳು ಹಾಗೂ ರಾಜಕೀಯ ನಕ್ಷೆಗಳು ಎನ್‌ಐಎ ಅಧಿಕಾರಿಗಳು ಜಪ್ತಿ ಮಾಡಿರುವ ದಾಖಲೆಗಳಲ್ಲಿ ಸೇರಿದ್ದು, ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ಕೈಗೊಳ್ಳಲಿರುವ ಕಾರ್ಯಯೋಜನೆಗಳ ವಿವರಗಳಿವೆ ಎಂದು ಆರೋಪಿಸಲಾಗಿದೆ.

ಬಂಗಾಳಿ ಭಾಷೆಯಲ್ಲಿರುವ ಟಿಪ್ಪಣಿ ಮತ್ತು ದಾಖಲೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಲಾಗಿದೆ. 2005ರಲ್ಲಿ ಬಾಂಗ್ಲಾದಲ್ಲಿ ನಡೆದಿದ್ದ ಸರಣಿ ಸ್ಫೋಟದ ಬಳಿಕ ಅಲ್ಲಿನ ಸರ್ಕಾರ ಜೆಎಂಬಿ ಸಂಘಟನೆಯನ್ನು ನಿಷೇಧಿಸಿದೆ. ಬಳಿಕ ಶಂಕಿತ ಉಗ್ರರು ಭಾರತದ ಗಡಿಯೊಳಕ್ಕೆ ನುಸುಳಿದ್ದಾರೆ. ಗೃಹ ಸಚಿವಾಲಯವೂ ಈ ಸಂಘಟನೆಯನ್ನು ನಿಷೇಧಿಸಿದೆ.

ಎನ್‌ಐಎ ವಶದಲ್ಲಿರುವ ದಾಖಲೆಗಳಲ್ಲಿ, ಯಾರ್‍ಯಾರನ್ನು ಹತ್ಯೆ ಮಾಡಬೇಕು. ಯಾವ್ಯಾವ ಸ್ಥಳಗಳನ್ನು ಸ್ಫೋಟಿಸಬೇಕು, ಸ್ಫೋಟಕಗಳನ್ನು ಹೇಗೆ ಸಾಗಿಸಬೇಕು. ಸ್ಫೋಟದ ವೇಳೆ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು, ಯಾರು ಯಾವ ಜವಾಬ್ದಾರಿ ನಿರ್ವಹಿಸಬೇಕು ಎಂಬ ಸಂಪೂರ್ಣ ಮಾಹಿತಿ ಇದೆ ಎಂದು ಎನ್‌ಐಎ ವಿವರಿಸಿದ್ದರೂ, ಯೋಜಿತ ದಾಳಿ ಕುರಿತು ನಿಖರವಾಗಿ ಏನನ್ನೂ ಹೇಳಿಲ್ಲ.

ಜೆಎಂಬಿ ಸಂಘಟನೆಯ ಖರ್ಚುವೆಚ್ಚಗಳು, ಪ್ರವಾಸದ ವಿವರಗಳು, ಅಡಗುದಾಣಗಳು, ಮದ್ದುಗುಂಡುಗಳು ಮತ್ತು ಸ್ಫೋಟಕ ಕುರಿತ ಮಾಹಿತಿಗಳೂ ಇವೆ. ತಮ್ಮ ಯೋಜನೆಗಳಿಗೆ ಸಂಬಂಧಿಸಿದಂತೆ ಶಂಕಿತರು ಸಂಕೇತಾಕ್ಷರಗಳನ್ನು ಬಳಸಿದ್ದಾರೆ ಎಂಬ ಮಾಹಿತಿ ಇದೆ.

ಶಂಕಿತ ಉಗ್ರರು ನಕಲಿ ಗುರುತಿನ ಚೀಟಿಗಳನ್ನು ಬಳಸಿ ಸಿಮ್‌ಗಳನ್ನು ಖರೀದಿಸಿದ್ದರೂ ಮೊಬೈಲ್‌ನಲ್ಲಿ ‍ಪರಸ್ಪರ ಸಂಪರ್ಕ ಮಾಡುತ್ತಿರಲಿಲ್ಲ. ಚರ್ಚೆಗೆ ಉಚಿತ ಹಾಗೂ ಪಾವತಿ ಆ್ಯಪ್‌ಗಳನ್ನು ಬಳಸುತ್ತಿದ್ದರು ಎಂಬ ಅಂಶವನ್ನೂ ದೋಷಾರೋಪ ಪಟ್ಟಿ ಒಳಗೊಂಡಿದೆ. ಈ ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಎನ್‌ಐಎ ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT