ಶನಿವಾರ, ಜುಲೈ 24, 2021
22 °C
ಅಖಿಲ ಭಾರತ ಪ್ರಜಾ ವೇದಿಕೆಯಿಂದ ವೆಬಿನಾರ್

ಕಾರ್ಯಾಂಗದ ಕೈಯಲ್ಲಿ ನ್ಯಾಯಾಂಗ: ತೀಸ್ತಾ ಸೆತಲ್ವಾಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ದೇಶದಲ್ಲಿ 1975ರಲ್ಲಿ ತುರ್ತು ಪರಿಸ್ಥಿತಿ ಜಾರಿಯಾದ ಸಂದರ್ಭದಲ್ಲಿ ಜೀವಿಸುವ ಹಕ್ಕು ಉಲ್ಲಂಘನೆಯಾಗಿದೆ ಎಂದೂ ದೂರುವಂತಿಲ್ಲ ಎಂದು ನ್ಯಾಯಾಲಯವೇ ಹೇಳಿತ್ತು. ಪ್ರಸ್ತುತ ಸಂದರ್ಭದಲ್ಲಿ ನ್ಯಾಯಾಂಗವೂ ಸಮರ್ಥವಾಗಿ ಕೆಲಸ ಮಾಡುತ್ತಿಲ್ಲ. ಕಾರ್ಯಾಂಗದ ಕೈಯಲ್ಲಿ ನ್ಯಾಯಾಂಗ ಇದ್ದಂತಾಗಿದೆ’ ಎಂದು ಪತ್ರಕರ್ತೆ ತೀಸ್ತಾ ಸೆತಲ್ವಾಡ್‌ ದೂರಿದರು. 

ಅಖಿಲ ಭಾರತೀಯ ಪ್ರಜಾವೇದಿಕೆಯು (ಎಐಪಿಎಫ್‌) ‘ಅಘೋಷಿತ ತುರ್ತು ಪರಿಸ್ಥಿತಿಯನ್ನು ವಿರೋಧಿಸಲು, ಘೋಷಿತ ತುರ್ತು ಪರಿಸ್ಥಿತಿಯಿಂದ ಕಲಿತ ಪಾಠ’ ಕುರಿತು ಶನಿವಾರ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು. ‘ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನು ದೇಶದ ವಿರುದ್ಧವೇ ಮಾತನಾಡುತ್ತಿದ್ದಾರೆ ಎಂಬಂತೆ ಬಿಂಬಿಸಲಾಗುತ್ತಿದೆ. ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ)ಸಂವಿಧಾನದ ತತ್ವಗಳಿಗೆ ವಿರುದ್ಧವಾದುದು. ಈ ಕಾನೂನನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ’ ಎಂದರು.

‘ಶೇ 80ಕ್ಕೂ ಹೆಚ್ಚು ಸಂಸದರು ಕೋಟ್ಯಾಧಿಪತಿಗಳು, ಗಣಿ ಉದ್ಯಮಿಗಳು, ಕಾರ್ಪೊರೇಟ್‌ ಕಂಪನಿಗಳ ಮಾಲೀಕರು. ವಲಸೆ ಕಾರ್ಮಿಕರಿಗೆ ಅನ್ಯಾಯವಾದಾಗ ಪ್ರಶ್ನಿಸಲು ಅವರು ಸಿದ್ಧರಿಲ್ಲ’ ಎಂದು ದೂರಿದರು. 

ಹಿರಿಯ ವಕೀಲ ಅರವಿಂದ್ ನಾರಾಯಣ್, ‘ಕೋವಿಡ್‌ ನೆಪದಲ್ಲಿ, ದೇಶದಲ್ಲಿ ಅಸಮಾನತೆ ಹೆಚ್ಚಿಸುವಂತಹ ಕಾನೂನುಗಳನ್ನು ರೂಪಿಸಲಾಗುತ್ತಿದೆ. ರಾಜಕೀಯ ಸ್ವಾತಂತ್ರ್ಯ, ಸಮಾನತೆ, ಘನತೆ, ಭ್ರಾತೃತ್ವದಂತಹ ಮೌಲ್ಯಗಳನ್ನು ಉಳಿಸಲು ಒಗ್ಗೂಡಿ ಕೆಲಸ ಮಾಡಬೇಕಾಗಿದೆ’ ಎಂದರು. 

‘ನ್ಯಾಯಕ್ಕಾಗಿ ಹೋರಾಡುತ್ತಿರುವವರೂ ಯುಎಪಿಎ ಅಡಿ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಎನ್‌ಪಿಆರ್, ಎನ್‌ಸಿಆರ್‌ ವಿರುದ್ಧದ ನಡೆದ ಆಂದೋಲನ ಇತಿಹಾಸದಲ್ಲಿ ಪ್ರಮುಖವಾದ ಹೋರಾಟ. ಆ ರೀತಿ ಭಯವನ್ನು ಮೀರಿ ಪ್ರತಿಭಟಿಸಬೇಕು’ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು