ಸೋಮವಾರ, ಮೇ 17, 2021
23 °C
ಕೆ.ಸಿ. ವ್ಯಾಲಿ ಯೋಜನೆ

ಅಧಿಕಾರಿಗಳ ಆರೋಪ–ಪ್ರತ್ಯಾರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು/ ಕೋಲಾರ: ಬೆಳ್ಳಂದೂರು ಕೆರೆಯಿಂದ ಕೋರಮಂಗಲ– ಚಲ್ಲಘಟ್ಟ (ಕೆ.ಸಿ ವ್ಯಾಲಿ) ಯೋಜನೆಯ ಮೂಲಕ ಕೋಲಾರದ ಕೆರೆಗಳಿಗೆ ಹರಿಸುತ್ತಿದ್ದ ನೀರಿನಲ್ಲಿ ನೊರೆ ಕಾಣಿಸಿಕೊಂಡಿದ್ದ ವಿಷಯದ ಬಗ್ಗೆ ಜಲಮಂಡಳಿ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಆರೋಪ–ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

‘ಬೆಳ್ಳಂದೂರು ಕೆರೆಯಿಂದ ಬರುವ ನೀರನ್ನು ಎರಡನೇ ಹಂತಕ್ಕೆ ಸಂಸ್ಕರಿಸುವ ಕೆಲಸವನ್ನು ನಾವು ಸರಿಯಾಗಿಯೇ ಮಾಡಿದ್ದೇವೆ. ಭಾರಿ ಮಳೆಯಿಂದ ಸಂಸ್ಕರಿಸಿದ ನೀರಿನ ಜೊತೆ ಕೆರೆಯ ನೀರು ಜಾಕ್‌ವಾಲ್‌ಗೆ ಹರಿದು ನೊರೆ ಉಂಟಾಗಿರಬಹುದು’ ಎಂದು ಜಲಮಂಡಳಿ ಅಧಿಕಾರಿಗಳು ಸಮರ್ಥಿಸಿಕೊಂಡರೆ, ‘ಸಮರ್ಪಕ ರೀತಿಯಲ್ಲಿ ನೀರು ಸಂಸ್ಕರಿಸದಿರುವುದೇ ಇದಕ್ಕೆ ಕಾರಣ’ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಜಲಮಂಡಳಿ ಅಧಿಕಾರಿಗಳ ವಿರುದ್ಧ ದೂರುತ್ತಿದ್ದಾರೆ.

‘ಸಣ್ಣ ನೀರಾವರಿ ಇಲಾಖೆ ವತಿಯಿಂದ ಕೆಲವು ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕ್ಲೋರಿನ್‌ ಕಾಂಟ್ಯಾಕ್ಟ್‌ ಟ್ಯಾಂಕ್‌ನಿಂದ ಕೆರೆಗೆ ಹೋಗುವ ಹೆಚ್ಚುವರಿ ನೀರು ಹಾಗೂ ಕೆರೆಯು ಮಳೆಯಿಂದ ಜಲಾವೃತವಾಗಿದೆ. ಹೀಗಾಗಿ ನೀರು ವಾಪಸ್‌ ಬರುವ ಸಾಧ್ಯತೆ ಇರುವುದರಿಂದ ಟ್ಯಾಂಕ್‌ ಹಾಗೂ ಜಾಕ್‌ವೆಲ್‌ಗೆ ನೀರು ಸೇರದಂತೆ ಸಣ್ಣ ನೀರಾವರಿ ಇಲಾಖೆ ಸಿಬ್ಬಂದಿ ಸರಿಯಾದ ತಡೆಗೋಡೆ ನಿರ್ಮಿಸಿ ಕೊಳ್ಳಬೇಕು’ ಎಂದು ಚಲ್ಲಘಟ್ಟ ವ್ಯಾಲಿಯ (ಎಸ್‌ಟಿಪಿ) ಕಾರ್ಯನಿರ್ವಾಹಕ ಎಂಜಿನಿಯರ್‌ ಸಲಹೆ ನೀಡಿದ್ದಾರೆ.

‘ಚಲ್ಲಘಟ್ಟದಿಂದ ಲಕ್ಷ್ಮೀಸಾಗರ ಕೆರೆಯವರೆಗೂ ಸುಮಾರು 55 ಕಿ.ಮೀ ಪೈಪ್‌ಲೈನ್‌ ಮೂಲಕವೇ ನೀರು ಹರಿದು ಬರುತ್ತದೆ. ಹೀಗಾಗಿ ಆ ನೀರಿನ ಜತೆ ಮಳೆ ನೀರು ಸೇರಲು ಅವಕಾಶವಿಲ್ಲ. ಜಾಕ್ವೆಲ್‌ನಲ್ಲೂ ಯಾವುದೇ ಸಮಸ್ಯೆಯಿಲ್ಲ’ ಎಂದು ಸಣ್ಣ ನೀರಾವರಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್‌ ಎಸ್‌.ಎನ್‌.ಕೃಷ್ಣಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಬೆಂಗಳೂರಿನ ಚಲ್ಲಘಟ್ಟ ಬಳಿ ನೀರಿನ 4 ಸಂಸ್ಕರಣಾ ಘಟಕಗಳಿದ್ದು, ಜಲಮಂಡಳಿ ಇವುಗಳನ್ನು ನಿರ್ವಹಣೆ ಮಾಡುತ್ತಿದೆ. 4 ಘಟಕಗಳ ಪೈಕಿ 10.8 ಕೋಟಿ ಲೀಟರ್‌ ನೀರು ಸಂಸ್ಕರಣ ಸಾಮರ್ಥ್ಯದ ಘಟಕವು 2 ವರ್ಷದಿಂದ ಸ್ಥಗಿತಗೊಂಡಿತ್ತು. ಆ ಘಟಕವನ್ನು ಜಲಮಂಡಳಿ ಅಧಿಕಾರಿಗಳು ದುರಸ್ತಿ ಮಾಡಿ ನೀರು ಹರಿಸಿದ ನಂತರ ಈ ಸಮಸ್ಯೆ ಕಾಣಿಸಿಕೊಂಡಿದೆ’ ಎಂದು ಹೇಳಿದರು.

‘ಭಾನುವಾರದವರೆಗೆ (ಜುಲೈ 15) 3 ಸಂಸ್ಕರಣಾ ಘಟಕಗಳಿಂದ ಮಾತ್ರ ಜಿಲ್ಲೆಗೆ ಪ್ರತಿನಿತ್ಯ 10 ಕೋಟಿ ಲೀಟರ್‌ ನೀರು ಹರಿಸಲಾಗುತ್ತಿತ್ತು. ಆವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಸ್ಥಗಿತಗೊಂಡಿದ್ದ ಘಟಕ ಕಾರ್ಯಾರಂಭ ಮಾಡಿದ ಬಳಿಕ ಹೆಚ್ಚುವರಿಯಾಗಿ 8 ಕೋಟಿ ಲೀಟರ್‌ ನೀರು ಹರಿದು ಬಂದಿತು. ಆ ನಂತರವಷ್ಟೇ ನೀರಿನಲ್ಲಿ ನೊರೆ ಕಾಣಿಸಿಕೊಂಡಿದೆ. ಈ ಸಂಬಂಧ ಇಲಾಖಾ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದೇವೆ’ ಎಂದು ಹೇಳಿದರು.

‘ಯೋಜನೆಯ ಜಾಕ್ವೆಲ್‌ ಮತ್ತು ಪೈಪ್‌ಲೈನ್‌ ಮಾರ್ಗದಲ್ಲಿ ಯಾವುದೇ ಸಮಸ್ಯೆಯಿಲ್ಲ. ನೀರು ಸರಿಯಾಗಿ ಸಂಸ್ಕರಣೆಯಾಗದ ಕಾರಣ ನೊರೆ ಕಾಣಿಸಿಕೊಂಡಿದೆ. 10.8 ಕೋಟಿ ಲೀಟರ್‌ ನೀರು ಸಂಸ್ಕರಣಾ ಸಾಮರ್ಥ್ಯದ ಘಟಕವು ದುರಸ್ತಿ ಆಗುವವರೆಗೂ ನೀರು ಹರಿಸದಂತೆ ಜಲಮಂಡಳಿ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅದಕ್ಕೆ ಸುಮಾರು 20 ದಿನ ಕಾಲಾವಕಾಶ ಬೇಕು ಎಂದು ಜಲಮಂಡಳಿ ಅಧಿಕಾರಿಗಳು ಹೇಳಿದ್ದಾರೆ’ ಎಂದರು.

ಮೂರನೇ ಹಂತದ ಸಂಸ್ಕರಣೆಗೆ ಒತ್ತಾಯ: ಸದ್ಯ ಎರಡು ಹಂತದಲ್ಲಿ ನೀರನ್ನು ಸಂಸ್ಕರಿಸಲಾಗುತ್ತಿದೆ. ಮೂರನೇ ಹಂತದಲ್ಲಿ ಸಂಸ್ಕರಿಸಿದ ನಂತರವಷ್ಟೇ ನೀರು ಬಳಕೆಗೆ ಯೋಗ್ಯವೆಂದು ಭಾರತೀಯ ವಿಜ್ಞಾನ ಸಂಸ್ಥೆಯು ವರದಿ ನೀಡಿತ್ತು.

ಈ ವರದಿ ಆಧರಿಸಿ ಅವಿಭಜಿತ ಕೋಲಾರ ಜಿಲ್ಲೆಯ ನೀರಾವರಿ ಹೋರಾಟಗಾರರು ಕೆ.ಸಿ ವ್ಯಾಲಿ ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸಿ, ಶುದ್ಧತೆ ಖಚಿತಪಡಿಸಲು ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

₹ 1,280 ಕೋಟಿ ವೆಚ್ಚ

ಹಿಂದಿನ ಕಾಂಗ್ರೆಸ್‌ ಸರ್ಕಾರವು ₹ 1,280 ಕೋಟಿ ಅಂದಾಜು ವೆಚ್ಚದ ಕೆ.ಸಿ ವ್ಯಾಲಿ ಯೋಜನೆ ಕೈಗೆತ್ತಿಕೊಂಡಿತ್ತು. 2016ರ ಮೇ 30ರಂದು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಹಲವು ಅಡೆತಡೆಗಳ ನಡುವೆ ಎರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಜಿಲ್ಲೆಯ 121 ಕೆರೆಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ 5 ಕೆರೆಗಳನ್ನು ತುಂಬಿಸಿ ಅಂತರ್ಜಲ ವೃದ್ಧಿಸುವುದು ಈ ಯೋಜನೆಯ ಉದ್ದೇಶ. ಜೂನ್‌ 2ರಿಂದ ಜಿಲ್ಲೆಗೆ ಪ್ರತಿನಿತ್ಯ ಸುಮಾರು 10 ಕೋಟಿ ಲೀಟರ್‌ ನೀರು ಹರಿದು ಬರುತ್ತಿತ್ತು.

ವಿಜ್ಞಾನಿಗಳ ವರದಿ ನಿರಾಕರಣೆ

ಕೊಳಚೆ ನೀರನ್ನು ಕೋಲಾರದ ಕೆರೆಗಳಿಗೆ ಹರಿಸುವ ಯೋಜನೆಯ ಸರಿಯಿಲ್ಲ ಎಂದು 2015ರಲ್ಲಿಯೇ ಐಐಎಸ್‌ಸಿ (ಭಾರತೀಯ ವಿಜ್ಞಾನ ಸಂಸ್ತೆ) ವರದಿ ನೀಡಿತ್ತು. ಸರ್ಕಾರ ಆ ವರದಿಯನ್ನು ನಿರಾಕರಿಸಿ, ‘ಸಂಸ್ಕರಿಸಿದ ನಂತರ ನೀರಿನಲ್ಲಿ ಯಾವುದೇ ಲವಣಗಳಿರುವುದಿಲ್ಲ’ ಎಂದು ವಿರೋಧದ ನಡುವೆಯೇ ಯೋಜನೆಗೆ ಚಾಲನೆ ನೀಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು