ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟ್‌ ಟಾಪಿಂಗ್‌: ಕೆ.ಆರ್. ರಸ್ತೆಯಲ್ಲಿ ಸಂಚಾರ ದುಸ್ತರ, ಸ್ಥಳೀಯರ ಆಕ್ರೋಶ

ವರ್ಷ ಕಳೆದರೂ ಕಾಮಗಾರಿಗಿಲ್ಲ ಮುಕ್ತಿ
Last Updated 4 ಅಕ್ಟೋಬರ್ 2020, 20:09 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆ.ಆರ್‌. ರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿ ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಅಲ್ಲಿ ವಾಹನ ಸಂಚಾರ ದುಸ್ತರವಾಗಿದೆ.

‘ಮುಖ್ಯಮಂತ್ರಿಗಳ ನವ ನಗರೋತ್ಥಾನ’ ಯೋಜನೆಯಡಿ ಕೃಷ್ಣ ರಾಜೇಂದ್ರ ವೃತ್ತದಿಂದ ಟಿಪ್ಪು ಸುಲ್ತಾನ್ ಅರಮನೆ ರಸ್ತೆ ಸಂಪರ್ಕಿಸುವ ವೃತ್ತದವರೆಗೆ 239 ಮೀ. ಹಾಗೂ ಕೆ.ಆರ್. ಮಾರುಕಟ್ಟೆ ಮೆಟ್ರೊ ನಿಲ್ದಾಣದಿಂದ ಮಾರುಕಟ್ಟೆಯ ಸಿಗ್ನಲ್‌ವರೆಗೆ 510 ಮೀ. ವೈಟ್‌ ಟಾಪಿಂಗ್‌ ಕಾಮಗಾರಿಯನ್ನು ಕಳೆದ ವರ್ಷವೇ ಪ್ರಾರಂಭಿಸಲಾಗಿದೆ.

ಮೊದಲ ಹಂತದಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮುಂಭಾಗ ಕಾಮಗಾರಿ ನಡೆಸಲಾಗುತ್ತಿದೆ. ರಸ್ತೆಯ ಒಂದು ಭಾಗದ ಕಾಮಗಾರಿಯನ್ನು ವರ್ಷಾರಂಭದಲ್ಲಿ ಪೂರ್ಣಗೊಳಿಸಿ, ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಲಾಕ್‌ಡೌನ್‌ನಿಂದಾಗಿ ರಸ್ತೆಯ ಇನ್ನೊಂದು ಭಾಗದ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಕಾಮಗಾರಿ ಮತ್ತೆ ಶುರುವಾಗಿದ್ದು, ಕಾರ್ಮಿಕರ ಸಂಖ್ಯೆ ಕಡಿಮೆ ಇರುವುದರಿಂದ ಕೆಲಸ ವಿಳಂಬವಾಗುತ್ತಿದೆ.

ಮಳೆನೀರು ಕಾಲುವೆಗೆ ಪೈಪ್‌ಲೈನ್‌ ಅಳವಡಿಕೆ ಸಂಬಂಧ ಪಾದಚಾರಿ ಮಾರ್ಗ ಅಗೆಯಲಾಗಿದೆ. ಇದರಿಂದ ಅಲ್ಲಿಯೇ ಇರುವ ಕೋಟೆ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ ಬರುವವರಿಗೆ ಕೂಡ ಸಮಸ್ಯೆಯಾಗಿದೆ. ಇನ್ನೊಂದೆಡೆ, ರಸ್ತೆಯ ಒಂದು ಕಡೆ ಮಾತ್ರ ವೈಟ್‌ ಟಾಪಿಂಗ್‌ ಕಾಮಗಾರಿ ಪೂರ್ಣವಾಗಿರುವುದರಿಂದ ಏಕಮುಖ ಸಂಚಾರ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ವಾಹನ ದಟ್ಟಣೆ ಉಂಟಾಗಿ, ಸವಾರರು ಸಮಸ್ಯೆ ಎದುರಿಸಬೇಕಾಗಿದೆ. ಬೆಂಗಳೂರು ವೈದ್ಯಕೀಯ ಕಾಲೇಜಿಗೆ ಬರುವವರು ಕೂಡ ಕಿರಿಕಿರಿ ಅನುಭವಿಸಬೇಕಾಗಿದೆ.

ಸ್ಥಳೀಯರ ಆಕ್ರೋಶ:ವಾಣಿವಿಲಾಸ ರಸ್ತೆಯಲ್ಲಿ ಕೂಡ ವೈಟ್‌ ಟಾಪಿಂಗ್‌ ನಡೆಸಲು ಯೋಜನೆ ರೂಪಿಸಲಾಗಿದೆ.ಕೆ.ಆರ್. ಮಾರುಕಟ್ಟೆ ಮೆಟ್ರೊ ನಿಲ್ದಾಣದಿಂದ ವಿಕ್ಟೋರಿಯಾ ಆಸ್ಪತ್ರೆಯ ಆವರಣದವರೆಗೆ ಸದ್ಯ ಒಂದು ಭಾಗದಲ್ಲಿ ವೈಟ್‌ ಟಾಪಿಂಗ್‌ ನಡೆಸಲಾಗುತ್ತಿದೆ. ಇಲ್ಲಿ 20 ಅಡಿ ಅಗಲದ ರಸ್ತೆ ನಿರ್ಮಾಣವಾಗಲಿದ್ದು, ರಸ್ತೆ ಪಕ್ಕದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಬೇಕಾಗಿದೆ. ಹೀಗಾಗಿ ಇನ್ನೂ ಒಂದು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕಾಮಗಾರಿಯ ನೆಪದಲ್ಲಿ ಪಾದಚಾರಿ ಮಾರ್ಗವನ್ನು ಬೇಕಾಬಿಟ್ಟಿ ಅಗೆದು, ತಿಂಗಳಾನುಗಟ್ಟಲೆ ಹಾಗೇ ಬಿಡುತ್ತಿದ್ದಾರೆ. ಇದರಿಂದ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ವಿಚಾರಿಸೋಣ ಅಂದರೆ ಅಧಿಕಾರಿಗಳು ಕೂಡ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಪ್ರಮುಖ ರಸ್ತೆ ಆಗಿರುವುದರಿಂದ ವಾಹನ ದಟ್ಟಣೆ ಉಂಟಾಗಿ, ಸಮಸ್ಯೆ ಹೆಚ್ಚುತ್ತಿದೆ’ ಎಂದು ವ್ಯಾಪಾರಿ ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.

4 ದಿನಗಳಲ್ಲಿ ಸಂಚಾರಕ್ಕೆ ಅವಕಾಶ

‘ಲಾಕ್‌ಡೌನ್‌ ಅವಧಿಯಲ್ಲಿ ಕಾಮಗಾರಿಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ, ಕಾಮಗಾರಿ ಪೂರ್ಣಗೊಳ್ಳುವುದು ವಿಳಂಬವಾಯಿತು. ಊರಿಗೆ ಹೋದ ಕೆಲ ಕೆಲಸಗಾರರು ಸಮಯಕ್ಕೆ ಸರಿಯಾಗಿ ವಾಪಸ್‌ ಆಗಲಿಲ್ಲ. ಈಗ ಎರಡು ವಾರಗಳಿಂದ ಹಗಲು 16 ಮಂದಿ ಹಾಗೂ ರಾತ್ರಿ 11 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆ.ಆರ್‌. ಸರ್ಕಲ್‌ನಿಂದ 239 ಮೀ. ವೈಟ್‌ ಟಾಪಿಂಗ್‌ ಕಾಮಗಾರಿ ಪೂರ್ಣಗೊಂಡಿದೆ. 28 ದಿನಗಳವರೆಗೆ ನೀರುಣಿಸಬೇಕಾದ ಕಾರಣ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. 3–4 ದಿನಗಳ ಬಳಿಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ’ ಎಂದು ಗುತ್ತಿಗೆ ಪಡೆದ ಕಂಪನಿಯ ಎಂಜಿನಿಯರ್ ಚರಣ್ ಗೌಡ ತಿಳಿಸಿದರು.

‘ಮಳೆ ಅಡ್ಡಿಪಡಿಸದಿದ್ದಲ್ಲಿ ಒಂದು ತಿಂಗಳಲ್ಲಿಯೇ ಮಾರುಕಟ್ಟೆ ಸಿಗ್ನಲ್‌ವರೆಗೂ ವೈಟ್‌ ಟಾಪಿಂಗ್ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ರಸ್ತೆಯ ಪಕ್ಕದಲ್ಲಿನ ಅಂಗಡಿಗಳನ್ನು ಸ್ಥಳಾಂತರ ಮಾಡಬೇಕಾದ ಕಾರಣ ಪಾದಚಾರಿ ಮಾರ್ಗ ನಿರ್ಮಾಣ ಸ್ವಲ್ಪ ತಡವಾಗಬಹುದು’ ಎಂದು ಇನ್ನೊಬ್ಬ ಎಂಜಿನಿಯರ್ ಟಿಪ್ಪು ಹುಸೇನ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT