ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ರತೀರ್ಥ ವಜಾಕ್ಕೆ ಆಗ್ರಹಿಸಿ ಬೆಂಗಳೂರು ನಗರ ಜಿಲ್ಲಾ ಕಸಾಪದಲ್ಲಿ ನಿರ್ಣಯ

Last Updated 2 ಜೂನ್ 2022, 16:09 IST
ಅಕ್ಷರ ಗಾತ್ರ

ಬೆಂಗಳೂರು: ‘ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಷ್ಕರಣೆಗೊಂಡಶಾಲಾ ಪಠ್ಯಪುಸ್ತಕವನ್ನು ಹಿಂಪಡೆದು,ಅರ್ಹ ಶಿಕ್ಷಣ ತಜ್ಞರಿಂದ ಪಠ್ಯಪುಸ್ತಕ ಪರಿಷ್ಕರಣೆ ಆಗುವವರೆಗೂ ಹಳೆಯ ಪಠ್ಯಪುಸ್ತಕಗಳನ್ನೆ ಮುಂದುವರೆಸಬೇಕು.ರೋಹಿತ್ ಚಕ್ರತೀರ್ಥ ಅವರನ್ನು ಎಲ್ಲ ಜವಾಬ್ದಾರಿಯುತ ಸ್ಥಾನಗಳಿಂದ ವಜಾ ಮಾಡಬೇಕು’.

ಇವುಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ನೇತೃತ್ವದಲ್ಲಿ ಗುರುವಾರ ನಡೆದ ಸಮಾಲೋಚನಾ ಸಭೆಯಲ್ಲಿಕೈಗೊಂಡ ನಿರ್ಣಯಗಳು. ‍ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡೆದ ಸಭೆಯಲ್ಲಿ ಕನ್ನಡ ಪರ ಸಂಘಟನೆಗಳ ಪ್ರಮುಖರು, ಹೋರಾಟಗಾರರು ಹಾಗೂ ಚಿಂತಕರು ಅಭಿಮತ ವ್ಯಕ್ತಪಡಿಸಿ, ಪಠ್ಯಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿದರು.

‘ನಾಡಗೀತೆ, ನಾಡಧ್ವಜ, ಮಹಿಳೆಯರು ಹಾಗೂ ರಾಷ್ಟ್ರಕವಿ ಕುವೆಂಪು ಒಳಗೊಂಡಂತೆ ಪ್ರಮುಖ ಸಾಹಿತಿಗಳಬಗೆಗೆ ಸಾಮಾಜಿಕ ಜಾಲತಾಣದಲ್ಲಿರೋಹಿತ್ ಚಕ್ರತೀರ್ಥ ಅವರುಅವಹೇಳನಕಾರಿಯಾಗಿ ಬಿಂಬಿಸಿದ್ದಾರೆ. ವಿಕೃತ ಮನಸ್ಸಿನ ಅವರು ಸಮಾಜದ ಸ್ವಾಸ್ಥ್ಯ ಹಾಳುಗೆಡವುತ್ತಿದ್ದಾರೆ. ಅವರನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿರುವುದು ಖಂಡನೀಯ. ಪಠ್ಯಪುಸ್ತಕ ಸರಿಪಡಿಸುವ ವಿಚಾರದಲ್ಲಿ ಸರ್ಕಾರ ಉದಾಸೀನ ಮುಂದುವರೆಸಿದಲ್ಲಿ ಗೋಕಾಕ್ ಚಳವಳಿ ಮಾದರಿ ಹೋರಾಟ ನಡೆಸಬೇಕು’ ಎಂಬ ತೀರ್ಮಾನ ಕೈಗೊಳ್ಳಲಾಯಿತು.

ಕಸಾಪ ಬೆಂಗಳೂರು ನಗರ ಜಿಲ್ಲೆ ಘಟಕದ ಅಧ್ಯಕ್ಷ ಎಂ. ಪ್ರಕಾಶ್ ಮೂರ್ತಿ, ‘ನಾಡ ಧ್ವಜ, ನಾಡಗೀತೆ ಹಾಗೂ ಮಾತೃಭಾಷೆಗೆ ಅವಮಾನ ಖಂಡನೀಯ.ಸಾಹಿತಿಗಳಿಗೆ ಅವಮಾನಿಸುವ ವಾತಾವರಣ ಆಹ್ವಾನಿಸಿರುವುದು ನಮ್ಮ ದುರ್ದೈವ. ಕನ್ನಡದ ಅಸ್ಮಿತೆ ಎತ್ತಿ ಹಿಡಿದವರ ಪಾಠ ಕೈಬಿಡುವುದು ಸರಿಯಲ್ಲ’ ಎಂದು ಅಭಿಮತ ವ್ಯಕ್ತಪಡಿಸಿದರು.

ಲೇಖಕಿವರದಾ ಶ್ರೀನಿವಾಸ್, ‘ಕನ್ನಡ ಧ್ವಜ, ಭಾಷೆ ಹಾಗೂ ಕುವೆಂಪು ಅವರಿಗೆ ಅವಮಾನ ಮಾಡಿದವರನ್ನು ಶಿಕ್ಷಿಸಬೇಕು. ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು. ಶಿಕ್ಷಣ ತಜ್ಞರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು’ ಎಂದು ಆಗ್ರಹಿಸಿದರು.

ವಿಧಾನಸಭೆ ಅನುಸಾರ ಹೋರಾಟ:ಮೈಕೊ ಕನ್ನಡ ಬಳಗದ ಮಂಜುನಾಥ್, ‘ಪಠ್ಯಪುಸ್ತಕ ಪರಿಷ್ಕರಣೆ ಬಳಿಕಬಸವಣ್ಣನವರ ಪಠ್ಯಕ್ಕೆ ವಿರೋಧ ವ್ಯಕ್ತವಾದ ನಂತರ ಸರಿಪಡಿಸಲಾಗಿದೆ. ಆದರೆ, ಕುವೆಂಪು ಅವರನ್ನು ಅವಮಾನಿಸಿರುವ ಪಠ್ಯವನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಈ ಮೂಲಕ ನಮ್ಮ ನಡುವೆ ವೈರತ್ವ ಹುಟ್ಟುಹಾಕಲಾಗುತ್ತಿದೆ. ಕುವೆಂಪು ಹಾಗೂ ನಾಡಗೀತೆಯನ್ನು ಅವಮಾನಿಸಿದವರ ವಿರುದ್ಧ ಕ್ರಮಕೈಗೊಳ್ಳಲುವಿಧಾನಸಭೆ ಅನುಸಾರ ಹೋರಾಟ ಮಾಡಬೇಕು’ ಎಂದು ತಿಳಿಸಿದರು.

ಕನ್ನಡಪರ ಹೋರಾಟಗಾರತಲಕಾಡು ಚಿಕ್ಕರಂಗೇಗೌಡ, ‘ಈ ಹಿಂದಿನ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಅವರು ಪರಿಷ್ಕರಿಸಿದ ಪಠ್ಯವನ್ನು ಮರು ಪರಿಷ್ಕರಿಸಲು ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನೇ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕಿತ್ತು. ಆದರೆ, ನಾಲ್ಕು ಮಕ್ಕಳಿಗೆ ಪಾಠ ಮಾಡಿದವರು ಅಧ್ಯಕ್ಷರಾಗಿದ್ದಾರೆ. ಸಮಿತಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಯೂ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯಶಿವರಾಮೇಗೌಡ, ‘ಈ ಸರ್ಕಾರಕ್ಕೆ ಸ್ಪರ್ಶಜ್ಞಾನವಿಲ್ಲ. ಪಠ್ಯಪುಸ್ತಕದ ವಿವಾದಕ್ಕೆ ಸಂಬಂಧಿಸಿದಂತೆಸಾಹಿತ್ಯ ಪರಿಷತ್ತು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಹೇಳಿಕೆಗೆ ಸೀಮಿತ ಆಗಬಾರದು’ ಎಂದು ತಿಳಿಸಿದರು.

ಕರವೇ ನಲ್ನುಡಿಯ ದಿನೇಶ್ ಕುಮಾರ್, ಅಖಿಲ ಕರ್ನಾಟಕಮಹಮ್ಮದೀಯರ ಕನ್ನಡ ವೇದಿಕೆಯ ಸಮೀವುಲ್ಲಾ ಖಾನ್, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ, ಮಾವಳ್ಳಿ ಕನ್ನಡ ಸಂಘದ ಕೊ.ನ. ನಾಗರಾಜ್, ಶ್ರೀಸಾಮಾನ್ಯರಕೂಟದ ಪಾರ್ಶ್ವನಾಥ್, ಡಿ.ವಿ.ಜಿ ಕನ್ನಡ ಬಳಗದ ಜಗದೀಶ್ ಮುಳಬಾಗಿಲು, ಜಯ ಕರ್ನಾಟಕದ ರಾಧಾಕೃಷ್ಣ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT