ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ ವಿಚಾರಕ್ಕೆ ಗಲಾಟೆ: ಬೈಕ್ ಸವಾರನ ಕೊಲೆ

Published 6 ಮೇ 2024, 15:16 IST
Last Updated 6 ಮೇ 2024, 15:16 IST
ಅಕ್ಷರ ಗಾತ್ರ

ಬೆಂಗಳೂರು: ಅಪಘಾತದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಹಲ್ಲೆಗೀಡಾಗಿ ಬೈಕ್ ಸವಾರ ಪ್ರಭುರಾಮ್ ಪ್ರಸಾದ್ (33) ಎಂಬುವವರು ಮೃತಪಟ್ಟಿದ್ದು, ಅವರನ್ನು ಕೊಲೆ ಮಾಡಿರುವ ಆರೋಪದಡಿ ಅನಿಲ್ ಎಂಬುವವರನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬೆಳ್ತೂರು ಕಾಲೊನಿಯ ಪ್ರಭುರಾಮ್ ಪ್ರಸಾದ್, ವೃತ್ತಿಯಲ್ಲಿ ಕಾರು ಚಾಲಕ. ಇವರ ಕೊಲೆ ಬಗ್ಗೆ ಸಂಬಂಧಿಕರು ದೂರು ನೀಡಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಅನಿಲ್ ಅವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಪ್ರಭುರಾಮ್ ಅವರು ಸಹೋದರಿಯ ಪುತ್ರ ಅಭಿಲಾಷ್ ಜೊತೆ ದ್ವಿಚಕ್ರ ವಾಹನದಲ್ಲಿ ಬೆಳ್ತೂರಿನಲ್ಲಿದ್ದ ಜಾತ್ರೆಗೆ ಭಾನುವಾರ (ಮೇ 5) ಹೋಗಿದ್ದರು. ಇಬ್ಬರೂ ಒಟ್ಟಿಗೆ ರಾತ್ರಿ 7 ಗಂಟೆ ಸುಮಾರಿಗೆ ಮನೆಯತ್ತ ವಾಪಸು ಹೊರಟಿದ್ದರು. ಮಾರ್ಗಮಧ್ಯೆ ದ್ವಿಚಕ್ರ ವಾಹನದಲ್ಲಿ ಶಬ್ದ ಬಂದಿತ್ತು. ಪ್ರಭುರಾಮ್‌ ರಸ್ತೆ ಪಕ್ಕದಲ್ಲಿ ವಾಹನ ನಿಲ್ಲಿಸಿ, ಏನಾಯಿತೆಂದು ಪರಿಶೀಲಿಸುತ್ತಿದ್ದರು’ ಎಂದು ತಿಳಿಸಿದರು.

‘ಆರೋಪಿ ಅನಿಲ್ ಅವರ ಪತ್ನಿ ತಮ್ಮ ಕಾರಿನಲ್ಲಿ ಅದೇ ಮಾರ್ಗದಲ್ಲಿ ಹೊರಟಿದ್ದರು. ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದರಿಂದ, ಬೈಕ್‌ಗೆ ಕಾರು ತಾಗಿತ್ತು. ಇದನ್ನು ಪ್ರಶ್ನಿಸಿದ್ದ ಪ್ರಭುರಾಮ್, ತರಾಟೆಗೆ ತೆಗೆದುಕೊಂಡಿದ್ದರು. ಅನಿಲ್ ಅವರ ಪತ್ನಿ, ‘ಹತ್ತಿರದಲ್ಲೇ ನಮ್ಮ ಮನೆ ಇದೆ. ಅಲ್ಲಿಗೆ ಬಂದರೆ, ಪತಿ ಜೊತೆ ಮಾತನಾಡಿಸುವೆ’ ಎಂದಿದ್ದರು. ಅದಕ್ಕೆ ಒಪ್ಪಿ ಪ್ರಭುರಾಮ್ ಮನೆಗೆ ಹೋಗಿದ್ದರು’ ಎಂದು ಪೊಲೀಸರು ಹೇಳಿದರು.

‘ಅಪಘಾತದ ವಿಚಾರವನ್ನು ಅನಿಲ್‌ ಅವರಿಗೆ ಪತ್ನಿ ತಿಳಿಸಿದ್ದರು. ಪ್ರಭುರಾಮ್ ಜೊತೆ ಜಗಳ ತೆಗೆದಿದ್ದ ಅನಿಲ್, ಕಪಾಳಕ್ಕೆ ಹೊಡೆದಿದ್ದರು. ತಳ್ಳಾಡಿ ಹಲ್ಲೆ ಮಾಡಿದ್ದರು. ಸ್ಥಳೀಯರು ಜಗಳ ಬಿಡಿಸಿ ಪ್ರಭುರಾಮ್ ಅವರನ್ನು ಸ್ಥಳದಿಂದ ಕಳುಹಿಸಿಕೊಟ್ಟಿದ್ದರು’ ಎಂದು ತಿಳಿಸಿದರು.

‘ಹಲ್ಲೆಗೀಡಾಗಿದ್ದ ಪ್ರಭುರಾಮ್ ಅವರಿಗೆ ಕಪಾಳ ನೋಯುತ್ತಿತ್ತು. ಯಾವುದೇ ಚಿಕಿತ್ಸೆ ಪಡೆದಿರಲಿಲ್ಲ. ಮನೆಗೆ ಹೋಗಿ ಮಲಗಿದ್ದರು. ರಾತ್ರಿ ತಾಯಿ ಮಾತನಾಡಿಸಲು ಹೋದಾಗ, ಎದ್ದಿರಲಿಲ್ಲ. ತಪಾಸಣೆ ನಡೆಸಿದಾಗ ಮೃತಪಟ್ಟಿದ್ದು ಗೊತ್ತಾಗಿತ್ತು. ಅಪಘಾತ ವಿಚಾರವಾಗಿ ಅನಿಲ್ ಹೊಡೆದಿದ್ದರಿಂದಲೇ ಪ್ರಭುರಾಮ್ ಮೃತಪಟ್ಟಿದ್ದಾಗಿ ಸಂಬಂಧಿಕರು ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT