ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಮನೆಗೆ ನುಗ್ಗಿ ಮಹಿಳೆ ಹತ್ಯೆ ಪ್ರಕರಣ: ಕೃತ್ಯ ಎಸಗಿದ್ದ ಪ್ರಿಯಕರ ಬಂಧನ

Published 9 ಮೇ 2024, 15:45 IST
Last Updated 9 ಮೇ 2024, 15:45 IST
ಅಕ್ಷರ ಗಾತ್ರ

ಬೆಂಗಳೂರು: ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದಿವ್ಯಾ (30) ಎಂಬುವವರ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಎರಡನೇ ಮದುವೆಯಾಗಿದ್ದ ಎನ್ನಲಾದ ಪ್ರಿಯಕರ ಶಾಂತಕುಮಾರ್‌ನನ್ನು (35) ಬಂಧಿಸಿದ್ದಾರೆ.

‘ಹೊಯ್ಸಳ ನಗರದಲ್ಲಿರುವ ಮನೆಯೊಂದರಲ್ಲಿ ಮೇ 7ರಂದು ದಿವ್ಯಾ ಕೊಲೆ ನಡೆದಿತ್ತು. ಕೃತ್ಯದ ನಂತರ ಪರಾರಿಯಾಗಿದ್ದ ಶಾಂತಕುಮಾರ್‌ನನ್ನು ಇದೀಗ ಸೆರೆ ಹಿಡಿಯಲಾಗಿದೆ. ಬೇರೊಬ್ಬ ಯುವಕನ ಜೊತೆ ಸಲುಗೆ ಇಟ್ಟುಕೊಂಡಿದ್ದ ಕಾರಣಕ್ಕೆ ದಿವ್ಯಾ ಅವರನ್ನು ಕೊಂದಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾರೆ ’ ಎಂದು ಪೊಲೀಸರು ಹೇಳಿದರು.

ಪತಿಯಿಂದ ದೂರ: ‘ಬಿಡದಿ ಹೊಸದೊಡ್ಡಿಯ ದಿವ್ಯಾ ಅವರಿಗೆ ಹಲವು ವರ್ಷಗಳ ಹಿಂದೆಯೇ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದರು. ಕೌಟುಂಬಿಕ ಕಲಹದಿಂದಾಗಿ ದಿವ್ಯಾ ಪತಿಯಿಂದ ದೂರವಾಗಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಪಾಂಡವಪುರದ ಶಾಂತಕುಮಾರ್, ಜ್ಯೋತಿಷ್ಯ ಹೇಳಿ ಜೀವನ ನಡೆಸುತ್ತಿದ್ದ. ದಿವ್ಯಾ ಅವರನ್ನು ಪರಿಚಯ ಮಾಡಿಕೊಂಡಿದ್ದ. ಪ್ರೀತಿಸುವುದಾಗಿ ಹೇಳಿ ಸಲುಗೆ ಬೆಳೆಸಿದ್ದ. ನಂತರ, ಅವರಿಬ್ಬರು 2018ರಲ್ಲಿ ಚಿಕ್ಕಮಗಳೂರಿನಲ್ಲಿ ಮದುವೆಯಾಗಿದ್ದರೆಂದು ಗೊತ್ತಾಗಿದೆ. ಇದರ ನಂತರ, ಇಬ್ಬರೂ ಪ್ರತ್ಯೇಕವಾಗಿಯೇ ವಾಸವಿದ್ದರು’ ಎಂದರು.

‘ದಿವ್ಯಾ ಅವರು ಇಬ್ಬರು ಮಕ್ಕಳ ಸಮೇತವಾಗಿ ಮೊದಲ ಪತಿಯ ಮನೆಯನ್ನು ಬಿಟ್ಟು ಬಂದಿದ್ದರು. ಒಂದು ಮಗುವನ್ನು ಶಾಂತಕುಮಾರ್ ತನ್ನ ಹಳ್ಳಿಯ ಮನೆಯಲ್ಲಿ ಇರಿಸಿಕೊಂಡಿದ್ದ. ಇನ್ನೊಂದು ಮಗುವನ್ನು ದಿವ್ಯಾ ಅವರು ಸಾಕುತ್ತಿದ್ದರು. ಸಣ್ಣ–ಪುಟ್ಟ ಕೆಲಸ ಮಾಡುತ್ತಿದ್ದ ದಿವ್ಯಾ, ಜೀವನ ಸಾಗಿಸಲು ಕಷ್ಟಪಡುತ್ತಿದ್ದರು. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದರು’ ಎಂದು ಪೊಲೀಸರು ಹೇಳಿದರು.

‘ಹೆಚ್ಚು ಹಣ ಸಂಪಾದಿಸುವ ಉದ್ದೇಶದಿಂದ ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದ ದಿವ್ಯಾ, ಪೇಯಿಂಗ್ ಗೆಸ್ಟ್ (ಪಿ.ಜಿ) ಕಟ್ಟಡದಲ್ಲಿ ವಾಸವಿದ್ದರು. ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ಕಾಮಾಕ್ಷಿಪಾಳ್ಯದಲ್ಲಿರುವ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದರು. ಪೀಠೋಪಕರಣ ಹಾಗೂ ಅಗತ್ಯವಸ್ತುಗಳನ್ನು ಸ್ಥಳಾಂತರಿಸಿದ್ದ ಆಟೊ ಚಾಲಕನಿಗೆ ಶಾಂತಕುಮಾರ್‌ನೇ ಹಣ ನೀಡಿದ್ದ’ ಎಂದು ತಿಳಿಸಿದರು.

ಮೊಬೈಲ್‌ ಕರೆ, ಶೀಲದ ಬಗ್ಗೆ ಶಂಕೆ: ‘ದಿವ್ಯಾ ಅವರ ಮೊಬೈಲ್ ಇತ್ತೀಚೆಗೆ ಕಳ್ಳತನವಾಗಿತ್ತು. ಆರೋಪಿ ಶಾಂತಕುಮಾರ್‌ನೇ ಹೊಸ ಮೊಬೈಲ್ ಹಾಗೂ ಸಿಮ್‌ಕಾರ್ಡ್‌ ಕೊಡಿಸಿದ್ದ. ಮೊಬೈಲ್ ಸೇವಾ ಕಂಪನಿಯನ್ನು ಸಂಪರ್ಕಿಸಿ ಶಾಂತಕುಮಾರ್, ದಿವ್ಯಾ ಅವರ ಹಳೇ ನಂಬರ್‌ ಪಡೆದುಕೊಂಡಿದ್ದ. ಅದೇ ನಂಬರ್‌ಗೆ ಯುವಕನೊಬ್ಬ ಕರೆ ಮಾಡಿದ್ದ. ತಾನು ದಿವ್ಯಾ ಪ್ರಿಯಕರನೆಂದು ಹೇಳಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ದಿವ್ಯಾ ಬೇರೊಬ್ಬ ಯುವಕನ ಜೊತೆ ಸಲುಗೆ ಇಟ್ಟುಕೊಂಡಿರುವ ವಿಷಯ ಗೊತ್ತಾಗುತ್ತಿದ್ದಂತೆ ಶಾಂತಕುಮಾರ್ ಸಿಟ್ಟಾಗಿದ್ದ. ದಿವ್ಯಾ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ’ ಎಂದು ಹೇಳಿದರು.

ವಿಳಾಸ ನೀಡಿದ್ದ ಆಟೊ ಚಾಲಕ: ‘ದಿವ್ಯಾ ಬಾಡಿಗೆ ಮನೆಯ ವಿಳಾಸ ಶಾಂತಕುಮಾರ್‌ಗೆ ಗೊತ್ತಿರಲಿಲ್ಲ. ಆದರೆ, ಮನೆ ಸ್ಥಳಾಂತರ ಸಂದರ್ಭದಲ್ಲಿ ಆಟೊ ಚಾಲಕನಿಗೆ ಶಾಂತಕುಮಾರ್ ಹಣ ಕಳುಹಿಸಿದ್ದ. ಅದೇ ಚಾಲಕನಿಗೆ ಕರೆ ಮಾಡಿ ವಿಳಾಸ ತಿಳಿದುಕೊಂಡಿದ್ದ. ಕೊಲೆ ಮಾಡಲೆಂದು ಪಾಂಡವಪುರದ ಅಂಗಡಿಯಲ್ಲಿಯೇ ಚಾಕು ಖರೀದಿಸಿದ್ದ’ ಎಂದು ಪೊಲೀಸರು ತಿಳಿಸಿದರು.

‘ಮೇ 7ರಂದು ಮನೆಗೆ ನುಗ್ಗಿದ್ದ ಶಾಂತಕುಮಾರ್, ದಿವ್ಯಾ ಜೊತೆ ಜಗಳ ತೆಗೆದಿದ್ದ. ಕೈ ಹಾಗೂ ಹೊಟ್ಟೆ ಭಾಗದಲ್ಲಿ ಚಾಕುವಿನಿಂದ ಇರಿದಿದ್ದ. ತೀವ್ರ ಗಾಯಗೊಂಡು ದಿವ್ಯಾ ಮೃತಪಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT