ಗುರುವಾರ , ಜೂನ್ 30, 2022
23 °C
ಕಣ್ಣು ಹಾಯಿಸಿದಲ್ಲೆಲ್ಲಾ ಗುಂಡಿ: ನಿತ್ಯ ಸವಾರರ ಪಡಿಪಾಟಲು; ಅಪಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಜನ

ಕನಕಪುರ ಹೆದ್ದಾರಿಯಲ್ಲಿ ಸಂಚರಿಸುವುದೇ ಕಷ್ಟ: ಅಲ್ಲಲ್ಲಿ ಕಿತ್ತು ಹೋಗಿರುವ ರಸ್ತೆ

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಲ್ಲಲ್ಲಿ ಕಿತ್ತು ಹೋಗಿರುವ ರಸ್ತೆ. ಮಾರುದ್ದದ ಗುಂಡಿಗಳು. ಮುಖಕ್ಕೆ ರಾಚುವ ದೂಳು. ಕಿರಿದಾದ ರಸ್ತೆಯಲ್ಲಿ ಸಾಗಲು ಹರಸಾಹಸ ಪಡುವ ವಾಹನ ಸವಾರರು. ಸ್ವಲ್ಪ ಎಚ್ಚರ ತಪ್ಪಿದರೂ ರಸ್ತೆ ಪಕ್ಕದ ಕೆರೆಗಳಿಗೆ ಉರುಳಿ ಬೀಳುವ ಅಪಾಯ...

ಬೆಂಗಳೂರಿನಿಂದ ಕನಕಪುರ ತಾಲ್ಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಚಿತ್ರಣವಿದು.

ಇದು ಹೆಸರಿಗಷ್ಟೇ ಹೆದ್ದಾರಿ. ದ್ವಿಪಥದ ಈ ದಾರಿಯಲ್ಲಿ ಸಾಗುವವರಿಗೆ ಕಿರಿಕಿರಿ ತಪ್ಪಿದ್ದಲ್ಲ. ನಗರದಿಂದ ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣದವರೆಗಿನ ಹಾದಿ ಸುಸಜ್ಜಿತವಾಗಿದೆ. ನೈಸ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ದಾಟಿ ಮುಂದೆ ಹೋದರೆ ಹದಗೆಟ್ಟ ರಸ್ತೆಯ ದರ್ಶನವಾಗುತ್ತದೆ. 

ಲಕ್ಷ್ಮೀಪುರ, ಉದಯಪುರ, ಸಾಲು ಹುಣಸೆ, ಕಗ್ಗಲೀಪುರ, ಗಾಂಧಿನಗರ, ಸೋಮನಹಳ್ಳಿ, ಹೊಸದೊಡ್ಡಿ, ಬೋಳಾರೆ, ಗಂಟಕನದೊಡ್ಡಿ, ಪರ್ವೇನ್‌ ಪಾಳ್ಯ, ಹಾರೋಹಳ್ಳಿ, ಜಕ್ಕಸಂದ್ರ, ದೇವರ ಕಗ್ಗನಹಳ್ಳಿ ಹೀಗೆ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 20ಕ್ಕೂ ಹೆಚ್ಚು ಹಳ್ಳಿಗಳು ಹೆದ್ದಾರಿಯ ಇಕ್ಕೆಲಗಳಲ್ಲೇ ಇವೆ. ಪ್ರತಿಷ್ಠಿತ ವಿದ್ಯಾಸಂಸ್ಥೆಗಳು, ಆಧ್ಯಾತ್ಮಿಕ ಕೇಂದ್ರಗಳು ಹಾಗೂ ಕೈಗಾರಿಕಾ ಪ್ರದೇಶಗಳೂ ಈ ಮಾರ್ಗದ ಆಸುಪಾಸಿನಲ್ಲೇ ಇವೆ.

ಶಾಲೆ–ಕಾಲೇಜು ಹಾಗೂ ಕಾರ್ಖಾನೆಗಳಿಗೆ ಹೋಗುವ ಸಾವಿರಾರು ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಈ ರಸ್ತೆಯನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ. ಈ ಪ್ರದೇಶಗಳ ರೈತರು ಕೃಷಿ ಉತ್ಪನ್ನಗಳನ್ನು ಬೆಂಗಳೂರು, ರಾಮನಗರ ಅಥವಾ ಕನಕಪುರಕ್ಕೆ ಕೊಂಡೊಯ್ಯಲೂ ಇದೇ ರಸ್ತೆಯನ್ನು ಆಶ್ರಯಿಸಬೇಕಾಗಿದೆ. 

ಹದಗೆಟ್ಟಿರುವ ಈ ರಸ್ತೆಯ ಪ್ರಯಾಣ ಹಲವರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿದೆ. ಗುಂಡಿ ತಪ್ಪಿಸುವ ಭರದಲ್ಲಿ ರಸ್ತೆಗೆ ಉರುಳಿ ಗಾಯ ಮಾಡಿಕೊಂಡ ದ್ವಿಚಕ್ರ ವಾಹನ ಸವಾರರ ಅಳಲು ಕೇಳುವವರೇ ಇಲ್ಲದಂತಾಗಿದೆ. ರಸ್ತೆ ದುರಸ್ತಿಗೊಳಿಸುವಂತೆ, ಸಂಸದರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸ್ಥಳೀಯರು ಹಲವು ಬಾರಿ ಮನವಿ ಮಾಡಿದ್ದಾರೆ.
ಹೀಗಿದ್ದರೂ ಸಮಸ್ಯೆಗೆ ಮುಕ್ತಿ
ದೊರೆತಿಲ್ಲ. 

‘ನೈಸ್‌ ರಸ್ತೆಯಿಂದ ಹಾರೋಹಳ್ಳಿ
ವರೆಗಿನ ಮಾರ್ಗದಲ್ಲಿ ಮಾರುದ್ದದ ಗುಂಡಿಗಳಿವೆ. ಹೀಗಾಗಿ ನಿತ್ಯ ಒಂದಿಲ್ಲೊಂದು ಅಪಘಾತಗಳು ನಡೆಯುತ್ತಲೇ ಇದ್ದು ತಮ್ಮದಲ್ಲದ ತಪ್ಪಿಗೆ ಹಲವರು ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ. ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಹಾಲು, ಆಹಾರ ಹಾಗೂ ಔಷಧ ಸಾಮಾಗ್ರಿಗಳನ್ನು ಕೊಂಡೊಯ್ಯುವ ವಾಹನಗಳೂ ಈ ಮಾರ್ಗದಲ್ಲೇ ಸಾಗಬೇಕಿದ್ದು, ಅವರು ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದೆ’ ಎಂದು ಗಾಂಧಿನಗರ ನಿವಾಸಿ ಫಯಾಜ್‌ ಪಾಷಾ ದೂರಿದರು.

‘ಈ ಭಾಗದಲ್ಲಿ ಸುಸಜ್ಜಿತವಾದ ಆಸ್ಪತ್ರೆ ಇಲ್ಲ. ಹೀಗಾಗಿ ಗಂಭೀರ ಆರೋಗ್ಯ ಸಮಸ್ಯೆ ಎದುರಾದರೆ ಅವರನ್ನು ಕನಕಪುರ ಇಲ್ಲವೇ ಬೆಂಗಳೂರಿನಲ್ಲಿರುವ ಆಸ್ಪತ್ರೆಗಳಿಗೆ ಕರೆದೊಯ್ಯುವುದು ಅನಿವಾರ್ಯ. ರಸ್ತೆ ಹದಗೆಟ್ಟಿರುವುದರಿಂದ ಬೆಳಿಗ್ಗೆ ಹಾಗೂ
ಸಂಜೆಯ ಹೊತ್ತಿನಲ್ಲಿ ವಾಹನಗಳ ಸಂಚಾರ ಮಂದಗತಿಯಲ್ಲಿರುತ್ತದೆ. ದಟ್ಟಣೆಯಲ್ಲಿ ಕೆಲವೊಮ್ಮೆ ಆಂಬುಲೆನ್ಸ್‌ಗಳೂ ಸಿಲುಕಿಕೊಳ್ಳುತ್ತವೆ. ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಕೊಂಡೊಯ್ಯಲಾಗದೆ ರೋಗಿಗಳು ಸಾವಿಗೀಡಾದ ಹಲವು ನಿದರ್ಶನಗಳೂ ಇವೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು