ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟಿ.ವಿ ಗಲಾಟೆಯಿಂದ ನಾಟಕಕ್ಕೆ ಪ್ರೇಕ್ಷಕರ ಬರ’: ರಂಗಕರ್ಮಿ ಬಿ.ವಿ. ರಾಜಾರಾಮ್ ಬೇಸರ

ಕೋವಿಡ್‌ನಿಂದ ಸ್ಥಗಿತಗೊಂಡಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಪುನರಾರಂಭ
Last Updated 18 ಸೆಪ್ಟೆಂಬರ್ 2021, 15:50 IST
ಅಕ್ಷರ ಗಾತ್ರ

ಬೆಂಗಳೂರು: ‘ಟಿ.ವಿ ಗಲಾಟೆಯಿಂದ ರಂಗಭೂಮಿ ಪ್ರೇಕ್ಷಕರನ್ನು ಕಳೆದುಕೊಳ್ಳುತ್ತಿದೆ.ಧಾರಾವಾಹಿಗಳಲ್ಲಿ ಪಾತ್ರ ಮಾಡುವ ಕಲಾವಿದರಿಗೆ ಜನಪ್ರಿಯತೆ ಹೆಚ್ಚಿದೆ. ರಂಗಭೂಮಿಯವರನ್ನು ಕೇಳುವವರೇ ಇಲ್ಲ’ ಎಂದುರಂಗ ನಟ ಹಾಗೂ ನಿರ್ದೇಶಕ ಬಿ.ವಿ. ರಾಜಾರಾಮ್ ಬೇಸರ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮನೆಯಂಗಳದಲ್ಲಿ ಮಾತುಕತೆ’ 216ನೇ ಸರಣಿಯಲ್ಲಿ ಅವರು ಜೀವನಾನುಭವನ್ನು ಹಂಚಿಕೊಂಡರು. ಈ ಸರಣಿಯು ಕೋವಿಡ್‌ ಕಾಣಿಸಿಕೊಂಡ ಬಳಿಕ ಸ್ಥಗಿತಗೊಂಡಿತ್ತು. ಒಂದು ವರ್ಷದ ಏಳು ತಿಂಗಳ ಬಳಿಕ ಪುನರಾರಂಭವಾಗಿದೆ.

‘ನಾಟಕ ಮಾಡುವುದು ಬಹಳ ಕಷ್ಟದ ಕೆಲಸ. ರಂಗಭೂಮಿ ಪ್ರದರ್ಶನಗಳಿಗೆ ನಟರಷ್ಟೇ ಮತ್ತು ಪ್ರೇಕ್ಷಕರೂ ಮುಖ್ಯ. ಹಿಂದೆ ಪ್ರತಿ ಪ್ರದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರೇ ಬಾರದ ಸ್ಥಿತಿ ನಿರ್ಮಾಣವಾಗಿದ್ದನ್ನು ನೋಡಿ ದುಃಖವಾಗುತ್ತದೆ. ಇದಕ್ಕೆ ಟಿ.ವಿ ಮಾಧ್ಯಮವೇ ಮುಖ್ಯ ಕಾರಣ. ‘ಮುಖ್ಯಮಂತ್ರಿ’ ಚಂದ್ರು ಅವರು 500ಕ್ಕೂ ಅಧಿಕ ನಾಟಕಗಳಲ್ಲಿ ಪ್ರದರ್ಶನ ಮಾಡಿದ್ದಾರೆ. ಆದರೆ, ಕಿರುತೆರೆ ಧಾರಾವಾಹಿಯೊಂದರ ಪಾತ್ರದ ಮೂಲಕ ಅವರನ್ನು ಜನರು ಗುರುತಿಸುತ್ತಾರೆ. ಇದು ಟಿ.ವಿ. ಮಾಧ್ಯಮದ ಜನಪ್ರಿಯತೆಯನ್ನು ತಿಳಿಸುತ್ತದೆ’ ಎಂದರು.

‘ಚಲನಚಿತ್ರದಲ್ಲಿ ಕೂಡ ಸಾಕಷ್ಟು ಬದಲಾವಣೆಗಳನ್ನು ಗುರುತಿಸಬಹುದು.ಕನ್ನಡದ ಅದ್ಭುತವಾದ ಕಾದಂಬರಿ, ಸಣ್ಣ ಕತೆಗಳು ಈ ಹಿಂದೆ ಸಿನಿಮಾ ಆಗುತ್ತಿದ್ದವು.ಇತ್ತೀಚಿನ ದಿನಗಳಲ್ಲಿ ನಮ್ಮ ನೆಲದ ಸಂಸ್ಕೃತಿಯ ಕತೆಗಳೇ ತೆರೆಯ ಮೇಲೆ ಬರುತ್ತಿಲ್ಲ. ನೆಲದ ಸಂಸ್ಕೃತಿ, ಕಲಾವಿದರು ತೆರೆಯ ಮೇಲೆ ಬರುವಂತಾಗಬೇಕು’ ಎಂದು ಹೇಳಿದರು.

ಟಿಕೆಟ್ ಮಾರಾಟಕ್ಕೆ ಅಲೆದಾಟ: ‘ಬಾಲ್ಯದಿಂದಲೂ ನಾಟಕದ ಮೇಲೆ ಆಸಕ್ತಿಯಿತ್ತು. ರಂಗಭೂಮಿ ದೊಡ್ಡ ಕ್ಷೇತ್ರ ಎನ್ನುವುದು ಬೆಂಗಳೂರಿಗೆ ಬಂದಮೇಲೆಯೇ ತಿಳಿಯಿತು. ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರೊ.ಬಿ. ಚಂದ್ರಶೇಖರ್ ಅವರ ‘ತುಘಲಕ್’ ನಾಟಕವನ್ನು ವೀಕ್ಷಿಸಿ ರೋಮಾಂಚನವಾಯಿತು. ಕಲಾಗಂಗೋತ್ರಿ ಕಾಲೇಜಿನಲ್ಲಿ ಓದುತ್ತಿರುವಾಗ ಕಲಾಗಂಗೋತ್ರಿ ತಂಡದೊಂದಿಗೆ ಹಲವು ನಾಟಕಗಳನ್ನು ಪ್ರದರ್ಶಿಸಿದೆವು. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು’ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

‘ನಾಟಕ ಮಾಡುತ್ತಿದ್ದ ಪ್ರಾರಂಭಿಕ ದಿನಗಳಲ್ಲಿ ಪ್ರದರ್ಶನದ ಟಿಕೆಟ್ ದರ ₹ 3 ನಿಗದಿಪಡಿಸಲಾಗುತಿತ್ತು. ಆ ಟಿಕೆಟ್‌ಗಳನ್ನು ಮಾರಾಟ ಮಾಡಲು ದಿನವಿಡೀ ಅಲೆದಾಟ ಮಾಡಬೇಕಾಗಿತ್ತು. ಚಲನಚಿತ್ರ ನಿರ್ದೇಶಕರೂ ನಾಟಕ ವೀಕ್ಷಣೆಗೆ ಬರುತ್ತಿದ್ದರು. ಆ ದಿನಗಳಲ್ಲಿ ‘ಪ್ರಜಾವಾಣಿ’ಯ ವಿಮರ್ಶೆ ನಾಟಕದ ಯಶಸ್ಸನ್ನು ನಿರ್ಧರಿಸುತ್ತಿತ್ತು. ಒಂದು ವೇಳೆ ವಿಮರ್ಶೆ ಬರದಿದ್ದರೆ ಆ ನಾಟಕ ಚೆನ್ನಾಗಿಲ್ಲ ಎಂದು ತೀರ್ಮಾನಿಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳೂ ನಾಟಕಗಳ ವಿಮರ್ಶೆಗೆ ಆದ್ಯತೆ ನೀಡುತ್ತಿಲ್ಲ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT