ಮಂಗಳವಾರ, ನವೆಂಬರ್ 24, 2020
27 °C

ಕನ್ನಡಕ್ಕೆ ಖಾಲಿ ತಟ್ಟೆ, ಮರಾಠಿಗೆ ಮೃಷ್ಟಾನ್ನ: ಕನ್ನಡ ಜಾಗೃತಿ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ, ₹50 ಕೋಟಿ ಅನುದಾನ ನೀಡಲು ಹೊರಟಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿರ್ಧಾರ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದ ಸೌಹಾರ್ದಕ್ಕೆ ಧಕ್ಕೆ ಉಂಟುಮಾಡುವ ವಿವೇಕಹೀನ ನಡೆ’ ಎಂದು ಕನ್ನಡ ನುಡಿ-ಕನ್ನಡ ಗಡಿ ಜಾಗೃತಿ ಸಮಿತಿ ವಿರೋಧಿಸಿದೆ.

ಸಮಿತಿಯ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ‘ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದೆ. ರಾಜ್ಯ ಭಾಷೆಯ ಪ್ರಾಧಿಕಾರ ಸ್ಥಾಪಿಸುವುದು ಆಯಾ ರಾಜ್ಯ ಸರ್ಕಾರಗಳ ನೈತಿಕ ಜವಾಬ್ದಾರಿ. ಆದರೆ, ಬೇರೊಂದು ರಾಜ್ಯ ಭಾಷೆಯ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಪ್ರಾಧಿಕಾರ ರಚಿಸುವುದು ತನ್ನ ಮಕ್ಕಳಿಗೆ ಅನ್ನ ಹಾಕಲಾರದೆ, ನೆರೆಮನೆಯ ಮಕ್ಕಳಿಗೆ ಮೃಷ್ಟಾನ್ನ ಭೋಜನ ಹಾಕಿದಂತೆ' ಎಂದು ದೂರಿದ್ದಾರೆ.

‘ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೊಡಬೇಕಾಗಿದ್ದ ವಾರ್ಷಿಕ ಅನುದಾನ ಕಡಿತಗೊಳಿಸಿತು. ಉಳಿಕೆ ಹಣ ಕೊಡದೆ, ವಿಳಂಬ ನೀತಿಯನ್ನೂ ಅನುಸರಿಸಿತು. ಇದರ ವಿರುದ್ಧ ದನಿ ಎತ್ತಿದ ಮೇಲೆ ಕುದಿಯುವ ಎಸರಿಗೆ ನೀರು ಬಿಟ್ಟಂತೆ ಸ್ವಲ್ಪ ಹಣ ಬಿಡುಗಡೆಗೊಳಿಸಿತು’.

‘ರಾಜ್ಯ ಭಾಷೆಗೆ ಈ ರೀತಿಯ ತಾತ್ಸಾರ ಧೋರಣೆ ತೋರಿರುವ ಹೊಣೆಗೇಡಿ ಸರ್ಕಾರ, ಈಗ ಚುನಾವಣೆಗಾಗಿ ಮರಾಠಿಗರ ಮತ ಸೆಳೆಯಲು  ಮರಾಠ ಭಾಷಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲು ಹೊರಟಿರುವುದು ಪ್ರಜಾಪ್ರಭುತ್ವದ ನೈತಿಕತೆ ಕೊಲ್ಲುವ ದುರ್ವರ್ತನೆ’ ಎಂದು ಆಕ್ರೋಶ  ವ್ಯಕ್ತಪಡಿಸಿದ್ದಾರೆ.

ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ‘ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಈವರೆಗೆ ₹50 ಕೋಟಿ ಅನುದಾನವನ್ನೂ ನೀಡಿಲ್ಲ. ಆದರೆ, ಮರಾಠ ಭಾಷೆಗೆ ಇಷ್ಟು ದೊಡ್ಡ ಮೊತ್ತದ ಹಣ ಸುರಿಯುತ್ತಿರುವುದಕ್ಕೆ ಉತ್ತರ ನೀಡಬೇಕಾದ ನೈತಿಕ ಹೊಣೆ ಸರ್ಕಾರದ್ದು. ಚುನಾವಣಾ ಲಾಭಕ್ಕಾಗಿ ಮಾಡುತ್ತಿರುವ ಈ ಧೋರಣೆಯನ್ನು ರಾಜ್ಯದ ಜನ ಸಹಿಸುವುದಿಲ್ಲ. ಸರ್ಕಾರ ಕೂಡಲೇ ಈ ತೀರ್ಮಾನವನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.