ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ: ಸಚಿವ ಶಿವರಾಜ್ ತಂಗಡಗಿ‌ ಎಚ್ಚರಿಕೆ

Published 22 ಫೆಬ್ರುವರಿ 2024, 14:40 IST
Last Updated 22 ಫೆಬ್ರುವರಿ 2024, 14:40 IST
ಅಕ್ಷರ ಗಾತ್ರ

ಬೆಂಗಳೂರು: ‘ಕೈಗಾರಿಕೆ,‌ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ‌ ಶೇ 60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸುವ ಬಗ್ಗೆ ಮಸೂದೆ ಜಾರಿಗೆ ತಂದರೆ ಅದನ್ನು ಪ್ರಶ್ನಿಸಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸಂಘಟನೆಯವರು ಯಾರು? ಕನ್ನಡದ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ‌‌ ಶಿವರಾಜ್ ತಂಗಡಗಿ‌ ಎಚ್ಚರಿಕೆ ನೀಡಿದರು.

ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ‌ ಬಳಸುವ ಮಸೂದೆ ವಿಧಾನಮಂಡಲದಲ್ಲಿ ಅಂಗೀಕರವಾದ ಬೆನ್ನಲ್ಲಿಯೇ ಮಹಾರಾಷ್ಟ್ರ ಸಚಿವ ಶಂಭುರಾಜ್ ದೇಸಾಯಿ ಅವರ ನೇತೃತ್ವದಲ್ಲಿ ಎಂಇಎಸ್ ಕಾರ್ಯಕರ್ತರು ಸಭೆ ನಡೆಸಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ನಮ್ಮ ರಾಜ್ಯದಲ್ಲಿ ನಾವು ಕಾಯ್ದೆ ರೂಪಿಸುತ್ತೇವೆ. ಮಹಾರಾಷ್ಟ್ರದಲ್ಲಿ ಏನಾದರೂ ನಾಮಫಲಕ‌ದಲ್ಲಿ ಕನ್ನಡ ಹಾಕಿ ಎಂದು ಹೇಳಿದ್ದೇವೆಯೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಸೂದೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ‌ತರುತ್ತೇವೆ. ಬೆಳಗಾವಿ ಜಿಲ್ಲೆ ರಾಜ್ಯದ ಅವಿಭಾಜ್ಯ ಅಂಗವಾಗಿದ್ದು, ಈ‌ ನೆಲದ‌ ಶಾಸನವನ್ನು ಪ್ರಶ್ನೆ ಮಾಡಲು ಮಹಾರಾಷ್ಟ್ರದವರು ಯಾರು? ಈ ಬಗ್ಗೆ ಕೇಳಲು ಕೂಡ ಮಹಾರಾಷ್ಟ್ರಕ್ಕೆ ಅಧಿಕಾರ ಇಲ್ಲ. ಯಾರು ಎಲ್ಲಿಗೆ ಹೋದರೂ ನಾಮಫಲಕದಲ್ಲಿ ಕನ್ನಡ ಅಳವಡಿಸುವ ಕೆಲಸ ಮಾಡುವುದು ನಿಶ್ಚಿತ’ ಎಂದು ಹೇಳಿದರು.

‘ಕನ್ನಡಿಗರು ಶಾಂತಿ‌ ಪ್ರಿಯರು. ಕನ್ನಡದ ವಿಚಾರಕ್ಕೆ ಬಂದಾಗ ಸರ್ಕಾರ ಕಠಿಣ ಕ್ರಮಕೈಗೊಳ್ಳಲಿದೆ. ಇಲ್ಲಿ ಗಡಿ ಜಿಲ್ಲೆ, ಮಧ್ಯ ಕರ್ನಾಟಕ ಎಂಬ ವಿಂಗಡಣೆಯಿಲ್ಲ. ಇಡೀ ರಾಜ್ಯದಾದ್ಯಂತ‌ ನಾಮಫಲಕಗಳಲ್ಲಿ ಕಡ್ಡಾಯವಾಗಿ ‌ಶೇ 60ರಷ್ಟು ಕನ್ನಡ ಬಳಕೆ‌ ಆಗಬೇಕು’ ಎಂದು ತಿಳಿಸಿದರು.

‘ವಿಧಾನಸಭೆ ಹಾಗೂ ವಿಧಾನಪರಿಷತ್ ಎರಡೂ ಕಡೆ ಪಕ್ಷತೀತವಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆಗೆ ಒಪ್ಪಿಗೆ ದೊರೆತಿದೆ. ಕರ್ನಾಟಕದಲ್ಲಿ ಕನ್ನಡ‌ ಭಾಷೆಯೇ ಸಾರ್ವಭೌಮ. ಕನ್ನಡದ ವಿಚಾರದಲ್ಲಿ ಬೇರೆ ಯಾರದ್ದೋ ಮಾತನ್ನು ಕೇಳುವುದಿಲ್ಲ. ಭಾಷೆ, ನೆಲ,‌‌ ಜಲದ ವಿಚಾರದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT