ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ನಾಮಫಲಕ: 2 ವಾರ ಗಡುವು ವಿಸ್ತರಣೆ

Published 29 ಫೆಬ್ರುವರಿ 2024, 16:05 IST
Last Updated 29 ಫೆಬ್ರುವರಿ 2024, 16:05 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಅಂಗಡಿ, ಹೋಟೆಲ್‌ ಸಹಿತ ಎಲ್ಲ ವ್ಯಾಪಾರಿ, ಇನ್ನಿತರ ಕೇಂದ್ರಗಳ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಇರಬೇಕು ಎಂದು ಕಡ್ಡಾಯಗೊಳಿಸಲಾಗಿದ್ದು, ನಿಯಮಬದ್ಧ ಫಲಕ ಅಳವಡಿಸಲು ನಿಗದಿಪಡಿಸಲಾಗಿದ್ದ ಅವಧಿಯನ್ನು ಎರಡು ವಾರ ವಿಸ್ತರಣೆ ಮಾಡಲಾಗಿದೆ.

ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿ ಪಡೆದು ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಮಳಿಗೆಗಳು ಸೇರಿದಂತೆ ಎಲ್ಲ ಕೇಂದ್ರಗಳು ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಶೇ 60 ರಷ್ಟು ಬಳಸಬೇಕು. ಫಲಕದ ಮೇಲ್ಬಾಗದಲ್ಲಿ ಅದು ಪ್ರದರ್ಶಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಉಲ್ಲೇಖಿತ ವಿಶೇಷ ರಾಜ್ಯ ಪತ್ರಿಕೆ ಅಧಿಸೂಚನಾ ಪತ್ರದಲ್ಲಿ ಸೂಚಿಸಲಾಗಿತ್ತು.

ಅದರಂತೆ ಫೆ.28ರ ಒಳಗೆ ಕನ್ನಡ ನಾಮಫಲಕ ಅಳವಡಿಸಲು ಈ ಮೊದಲು ಗಡುವು ವಿಧಿಸಲಾಗಿತ್ತು. ಈ ಸಮಯದಲ್ಲಿ ನಿಯಮಬದ್ಧ ನಾಮಫಲಕ ಅಳವಡಿಸದೇ ಇದ್ದರೆ ಉದ್ದಿಮೆ ಪರವಾನಗಿಗಳನ್ನು ರದ್ದುಗೊಳಿಸಲು, ಬೀಗ ಹಾಕಲು ಸುತ್ತೋಲೆ ಹೊರಡಿಸಲಾಗಿತ್ತು.

ವಾಣಿಜ್ಯ ಮಳಿಗೆಗಳು ಹೆಚ್ಚಿನ ಸಮಯಾವಕಾಶ ಕೋರಿದ್ದರಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಿರ್ದೇಶನದಂತೆ ಮಾರ್ಚ್‌ 13ರವರೆಗೆ ಗಡುವು ವಿಸ್ತರಿಸಲಾಗಿದೆ ಎಂದು ಪಾಲಿಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.

ಪ್ರಮುಖ ರಸ್ತೆ ಮತ್ತು ವಾರ್ಡ್‌ ರಸ್ತೆಗಳಲ್ಲಿ ಉದ್ಯಮ ಪರವಾನಗಿ ಪಡೆದ 55 ಸಾವಿರ ಮಳಿಗೆಗಳಿವೆ. ಅದರಲ್ಲಿ 3000 ಮಳಿಗೆಗಳಷ್ಟೇ ಶೇ 60ರಷ್ಟು ಕನ್ನಡ ಇರುವ ನಾಮಫಲಕಗಳನ್ನು ಅಳವಡಿಸಿಲ್ಲ. ಉಳಿದವುಗಳಲ್ಲಿ ಅಳವಡಿಸಿದ್ದಾರೆ ಎಂದು ಆಯುಕ್ತ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.

ಡಿಸಿಎಂ ‘ಎಕ್ಸ್‌’: ‘ಕನ್ನಡ ನಾಮಫಲಕ‘ ಅಳವಡಿಕೆ ಅವಧಿಯನ್ನು ಎರಡು ವಾರ ವಿಸ್ತರಿಸಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಗುರುವಾರ ಬಿಬಿಎಂಪಿ ಬಜೆಟ್‌ ಮಂಡನೆಯಾಗುತ್ತಿದ್ದ ಸಮಯದಲ್ಲಿಯೇ ‘ಎಕ್ಸ್‌’ನಲ್ಲಿ ಪ್ರಕಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT