ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಹಬ್ಬಕ್ಕೆ 'ಪದ ಸಂಭ್ರಮ'

Last Updated 2 ನವೆಂಬರ್ 2020, 15:52 IST
ಅಕ್ಷರ ಗಾತ್ರ
ADVERTISEMENT
""
""
""

ಬೆಂಗಳೂರು: 'ಕನ್ನಡ ರಾಜ್ಯೋತ್ಸವ' ಸಡಗರದ ಹೊತ್ತಿನೊಳಗೆ ಕನ್ನಡ ಪದ ಸಮೃದ್ಧಿ, ಶಬ್ದದ ಸೊಗಡು ಹಾಗೂ ಕನ್ನಡತನದ ವೈಶಿಷ್ಟ್ಯವನ್ನು ಕಟ್ಟಿಕೊಡಲು 'ಪ್ರಜಾವಾಣಿ' ಆರಂಭಿಸಿರುವ 'ಪದ ಸಂಭ್ರಮ'ಕ್ಕೆ ಸಾಕಷ್ಟು ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ .

'ನನ್ನ ಬಾಲ್ಯದಿಂದಲೂ ಕಾಡುವ ಪದಗಳೆಂದರೆ ನೆರುದ್ಲು, ಸ್ಯಾಲೆ, ಸೋಬ್ನಾ, ನೆರ್ವಿ, ನೀರು ಹುಯ್ಕೊಂಡ್ಲು. ಗ್ರಾಮೀಣ ಭಾಗದಲ್ಲಿ ಬಾಲ್ಯ ಕಂಡ ನನಗೆ, ಮಗಳು 'ನೆರುದ್ಲು' (ಋತುಮತಿ) ಕಣಕ್ಕ, ಹುಡುಗ ನೋಡಾಕೆ ಬರ್ತಾನೆ ಪಸಂದಾಗಿರೋ 'ಸ್ಯಾಲೆ' (ಸೀರೆ) ಕಟ್ಟೋ ಮಗಾ ಅಂತಿದ್ದ ಅಮ್ಮನ ಪದಗಳು ಈಗಲೂ ನೆನಪಾಗುತ್ತವೆ.

'ಸೋಬ್ನಾ' (ಮೊದಲ ರಾತ್ರಿ ಶಾಸ್ತ್ರ) ಇರುವ ದಿನವೇ 'ನೆರ್ವಿ'ಗೆ (ಬೀಗರೂಟ) ಎಲ್ಲರನ್ನೂ ಆಹ್ವಾನಿಸುತ್ತಿದ್ದೆವು. 'ನೀರು ಹುಯ್ಕೊಂಡ್ಲು' (ಹೆರಿಗೆ ಆಗುವುದು) ಎಂದು ಬಂಧುಗಳಿಗೆ ಹೇಳುತ್ತಾ ಸಂಭ್ರಮಿಸುತ್ತಿದ್ದ ದಿನಗಳು ಸದಾ ಕಾಡುತ್ತವೆ.

-ಕೆ.ಎಂ.ರುಕ್ಮಿಣಿ, ರಾಜರಾಜೇಶ್ವರಿ ನಗರ

ಎಚ್.ಎಸ್.ಶ್ರೀಮತಿ


'ಇಂದಿನ ದಿನಗಳಲ್ಲಿ ನಾವು ಬಳಸದ ಗುಳ್ಳೋರಿಗೆ, ಹೊಯ್ಗಡಬು, ವಾಟಕ, ಜಾಂಕಣಿ, ಎರಕೋಳೋದು ಪದಗಳು ನನ್ನನ್ನು ಕಾಡುತ್ತವೆ.

'ಗುಳ್ಳೋರಿಗೆ' ವರಪೂಜೆಗೆ ಮಾಡುವ ಭಕ್ಷ. ತಟ್ಟೆಇಡ್ಲಿಯೇ 'ಹೊಯ್ಗಡಬು'. 'ವಾಟಕ' ನೀರು ಕುಡಿಯುವ ಬಟ್ಟಲು. 'ಜಾಂಕಣಿ' ಎಂದರೆ ಹಿಡಿ ಇರುವ ತಟ್ಟೆ. ಎಣ್ಣೆ ನೀರು ಹಾಕಿಕೊಳ್ಳುವುದೇ 'ಎರಕೋಳೋದು'. ಉತ್ತರ ಕರ್ನಾಟಕದವರಾದ ನನ್ನ ತಂದೆ ಈ ಪದಗಳನ್ನು ಹೆಚ್ಚಾಗಿ ಪುನರುಚ್ಛರಿಸುತ್ತಿದ್ದರು. ಈ ಪದಗಳು ಅವರನ್ನು ನೆನಪಿಸುತ್ತವೆ.

ಎಚ್.ಎಸ್.ಶ್ರೀಮತಿ, ಜಯನಗರ

ಚಂದ್ರಪ್ರಭ ಕಠಾರಿ


ಕಾಲ್ಚೀಲ, ಕಡ್ಚಿ, ಬುಡಬುಡಿಕೆ, ಶೀಖರಣಿ ಮತ್ತು ಕುಟ್ಟಾಣಿ ಇತ್ತೀಚೆಗೆ ಮರೆಯಾಗುತ್ತಿರುವ ಶಬ್ಧಗಳು. ಶಾಲಾ ದಿನಗಳಲ್ಲಿ ಶೂ ಜೊತೆಗೆ 'ಕಾಲ್ಚೀಲ' (ಸಾಕ್ಸ್) ಧರಿಸುತ್ತಿದ್ದೆವು. ಅಂಚಿನ ಮೇಲಿನ ದೋಸೆ ಇತ್ಯಾದಿ ಮಗುಚಲು ಬಳಸುತ್ತಿದ್ದ ‘ಕಡ್ಚಿ’ಯಿಂದ ಬರೆ ಹಾಕುತ್ತೇನೆ ಎಂದು ಅಮ್ಮ ಗದರುತ್ತಿದ್ದಳು.

‘ಹಾಲಕ್ಕಿ ನುಡಿತೈತೆ' ಎಂದು ಭವಿಷ್ಯ ಹೇಳುತ್ತ, 'ಬುಡಬುಡಿಕೆ'ಯ ಸದ್ದು ನಿಜಕ್ಕೂ ಭಯ ತರುತ್ತಿತ್ತು. ಮಾವಿನಹಣ್ಣಿನ ಕಾಲದಲ್ಲಿ ಒಬ್ಬಟ್ಟುನೊಂದಿಗೆ 'ಶೀಖರಣಿ' ಮೆಲ್ಲುತ್ತಿದ್ದರೆ ಆಹಾ ಎಂಥಾ ಸವಿಯೂಟ. ಏಲಕ್ಕಿ, ಕರಿಮೆಣಸು ಹಾಗೂ ಮದ್ದನ್ನು ಅರಿಯಲು ಬಳಸುವ 'ಕುಟ್ಟಾಣಿ' ಈಗಲೂ ಬಳಕೆಯಲ್ಲಿದೆ.

ಚಂದ್ರಪ್ರಭ ಕಠಾರಿ, ಮಂಜುನಾಥನಗರ

ಮಂಜುಳಾ


ಚಿಮಣಿ ದೀಪ, ಮಣೆ, ಅಜ್ಜಿಯ ಗೊಬ್ಬೆಸುತ್ತು, ಆಲೆಮನೆಯ ಜೋನಿಬೆಲ್ಲ, ಒರಳುಕಲ್ಲು ಶಬ್ದಗಳು ಈಗ ದೂರವಾದಂತಿದೆ. ಚಿಕ್ಕಂದಿನಲ್ಲಿ ಓದಲು 'ಚಿಮಣಿ ದೀಪ'ವೇ ಬೆಳಕು. ಕೂರಲು ಬಳಸುತ್ತಿದ್ದ 'ಮಣೆ'ಗಾಗಿ ಜಗಳ ಆಗುತ್ತಿತ್ತು.

ಗೊಬ್ಬೆ ಕಟ್ಟಿ ಸೀರೆ ಉಡುತ್ತಿದ್ದ ಅಜ್ಜಿಯ 'ಗೊಬ್ಬೇಸುತ್ತಿ'ನಲ್ಲಿ ಮೊಮ್ಮಕ್ಕಳಿಗೆ ಕಾಯಿ ಬೆಲ್ಲ, ತಿಂಡಿ-ತಿನಿಸು ಸಿಗುತ್ತಿತ್ತು. ಶಾಲೆ ಮುಗಿಸಿ, ಆಲೆಮನೆಯಿಂದ 'ಜೋನಿಬೆಲ್ಲ' ತಿನ್ನುವುದೇ ಸಂಭ್ರಮ. ಊರಿಗೆ ಹೋದಾಗ ಅಲ್ಲಿರುವ 'ಒರಳುಕಲ್ಲು' ರುಬ್ಬಲು ಮನಸಾಗುವುದು.

ಮಂಜುಳಾ, ರಾಜರಾಜೇಶ್ವರಿ ನಗರ

ಅಜ್ಜಿಯ ಮನೆಯ 'ಜಾಲ'ನ್ನು (ಅಂಗಳ) ಗುಡಿಸುವುದು. 'ಬೆಜಕ್ರೆ' (ಒಣಗಿದ ಎಲೆ)ಗಳನ್ನು ಶೇಖರಿಸಿ, 'ಬೆಸ್ತ್ರಕೊಟ್ಟೆ'ಯಲ್ಲಿಡುವುದು (ಸ್ನಾನದ ಮನೆ). ಹಿತ್ತಲಲ್ಲಿ ಬೆಳೆದ 'ಕಾಯಿಪಲ್ಲೆ'ಯ (ತರಕಾರಿ) ಮೇಲೆಲ್ಲಾ ಹರಿದಾಡುತ್ತಿದ್ದ 'ಎರ್ಪು'ಗಳನ್ನು (ಇರುವೆ) ಉರುಬಿ (ಊದಿ) ಓಡಿಸಿ, 'ತಾಳ್ಳು' (ಪಲ್ಯ) ಮಾಡುತ್ತಿದ್ದೆವು. ಈ ಶಬ್ದಗಳು ನೆನಪಾದಾಗ ಬಾಲ್ಯವೇ ಕಣ್ಣಮುಂದೆ ಬರುವುದು.

ಚಂದ್ರಿಕಾ, ವಿದ್ಯಾರಣ್ಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT