ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.3ರಂದು ‘ಕನ್ನಡ ಪುಸ್ತಕ ಹಬ್ಬ’ ಸಮಾರೋಪ; ಕನ್ನಡ ಪುಸ್ತಕಗಳಿಗೆ ರಿಯಾಯಿತಿ

Published 1 ಡಿಸೆಂಬರ್ 2023, 12:50 IST
Last Updated 1 ಡಿಸೆಂಬರ್ 2023, 12:50 IST
ಅಕ್ಷರ ಗಾತ್ರ

ಬೆಂಗಳೂರು: 'ರಾಷ್ಟ್ರೋತ್ಥಾನ ಸಾಹಿತ್ಯ'ದ ಆಯೋಜನೆಯಲ್ಲಿ ನವೆಂಬರ್ 1ರಿಂದ ನಡೆಯುತ್ತಿರುವ ‘ಕನ್ನಡ ಪುಸ್ತಕ ಹಬ್ಬ’ ಡಿಸೆಂಬರ್ 3, ಭಾನುವಾರದಂದು ಮುಕ್ತಾಯವಾಗಲಿದೆ.

ಮೂರನೆಯ ವರ್ಷದ, ಒಟ್ಟು 33 ದಿನಗಳ ಈ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು ಈಗಾಗಲೇ ಸಾವಿರಾರು ಜನ ಪುಸ್ತಕಪ್ರಿಯರು ಆಗಮಿಸಿ, ತಮ್ಮ ಆಯ್ಕೆಯ-ಆಸಕ್ತಿಯ ಪುಸ್ತಕಗಳನ್ನು ಖರೀದಿಸಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಪುಸ್ತಕ ಹಬ್ಬಕ್ಕೆ ಭೇಟಿ ನೀಡಿ, ಬೆರಗು ಕಂಗಳಿಂದ ಪುಸ್ತಕಗಳನ್ನು ನೋಡಿ, ತಮ್ಮ ಆಯ್ಕೆಯ ಪುಸ್ತಕವನ್ನು ಖರೀದಿಸಿ ಎದೆಗವಚಿಕೊಂಡು ಸಂಭ್ರಮಿಸಿದ್ದು ವಿಶೇಷವಷ್ಟೇ ಅಲ್ಲ, ಪುಸ್ತಕ ಪ್ರಪಂಚದಲ್ಲಿ ಆಶಾದಾಯಕ ಸಂಗತಿ. ಕಳೆದ ನಾಲ್ಕು ವಾರಗಳಲ್ಲಿ ಪುಸ್ತಕ ಹಬ್ಬದಲ್ಲಿ ವಿವಿಧ ರೀತಿಯ ಚಟುವಟಿಕೆಗಳು ನಡೆದಿವೆ.

ಪ್ರತಿದಿನ ಪುಸ್ತಕ ಹಬ್ಬಕ್ಕೆ ಭೇಟಿ ನೀಡುವವರಿಗಾಗಿ ‘ಲಕ್ಕಿ ಡ್ರಾ’ದ ವ್ಯವಸ್ಥೆ ಮಾಡಿದ್ದು, ವಿಜೇತರಿಗೆ ‘ಪುಸ್ತಕ ಬಹುಮಾನ’ ನೀಡಲಾಗುತ್ತಿದೆ. ಪುಸ್ತಕ ಹಬ್ಬದ ಪ್ರಯುಕ್ತ ಮಕ್ಕಳಿಗೆ ಗಾಯನ ಸ್ಪರ್ಧೆಯನ್ನೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ನಡೆಸಲಾಗಿದೆ. ರಾಷ್ಟ್ರೋತ್ಥಾನ ಸಾಹಿತ್ಯದ ಪುಸ್ತಕಗಳಲ್ಲದೆ, ಬೇರೆ ಬೇರೆ ಪ್ರಕಾಶಕರ - ಲೇಖಕರ ಪುಸ್ತಕಗಳಿಗೂ ವಿಶೇಷ ರಿಯಾಯಿತಿ ನೀಡುತ್ತಿರುವುದಕ್ಕೆ ಓದುಗರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಡಿಸೆಂಬರ್ 3ರಂದು ಸಮಾರೋಪ...

33 ದಿನಗಳ ಈ ಪುಸ್ತಕ ಹಬ್ಬದಲ್ಲಿ ಈಗಾಗಲೇ 27 ದಿನಗಳು ಕಳೆದಿದ್ದು, ಡಿಸೆಂಬರ್ 3, ಭಾನುವಾರ ಸಾಯಂಕಾಲ ಪುಸ್ತಕ ಹಬ್ಬ ಮುಕ್ತಾಯಗೊಳ್ಳಲಿದೆ. ಮುಕ್ತಾಯಕ್ಕೂ ಮುನ್ನ, ಡಿಸೆಂಬರ್ 2ರಂದು ‘ನವೋತ್ಥಾನದ ಅಧ್ವರ್ಯು: ಸ್ವಾಮಿ ದಯಾನಂದ ಸರಸ್ವತಿ’ ವಿಷಯವಾಗಿ ಡಾ. ರೋಹಿಣಾಕ್ಷ ಶಿರ್ಲಾಲು ಮಾತನಾಡಲಿದ್ದಾರೆ. ಅದೇ ದಿನ ‘ಹೊಸಕಾಲದ ಮಾಧ್ಯಮಗಳು : ಸಾಧ್ಯತೆ-ಸವಾಲುಗಳು’ ವಿಷಯವಾಗಿ ಶ್ರೀ ಡಿ. ಎಂ. ಘನಶ್ಯಾಮ ಮತ್ತು ಶ್ರೀ ರಮೇಶ ದೊಡ್ಡಪುರ ಸಂವಾದ ನಡೆಸಲಿದ್ದಾರೆ. ಡಿಸೆಂಬರ್ 3ರಂದು ಬೆಳಗ್ಗೆ, ‘ಸನಾತನ ಧರ್ಮ ಮತ್ತು ವಚನ ಸಾಹಿತ್ಯ’ ವಿಷಯವಾಗಿ ಡಾ. ಜ್ಯೋತಿ ಶಂಕರ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಡಿಸೆಂಬರ್ 3ರಂದು ಸಾಯಂಕಾಲ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾದ ಶ್ರೀ. ಎಂ. ಪಿ. ಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ. ವಿ. ಪರಶಿವಮೂರ್ತಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಂದು ಕಾರ್ಯಕ್ರಮದಲ್ಲಿ, ದಾವಣಗೆರೆಯ ಸಾಹಿತ್ಯ ಪರಿಚಾರಕರಾದ ಶ್ರೀ ಉಮೇಶ್ ಅವರನ್ನು ಗೌರವಿಸಲಾಗುವುದು; ಕನ್ನಡ ಪುಸ್ತಕ ಹಬ್ಬದ ನಿಮಿತ್ತ ನಡೆಸಲಾದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು; ಆಯ್ದ ಶಾಲೆಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT