ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯ ಭಾಷಿಗರು ಕನ್ನಡ ಕಲಿಯಲಿ: ವಾಸುದೇವಮೂರ್ತಿ

ಕನ್ನಡೇತರರಿಗೆ ಭಾಷಾ ನೀತಿ ರೂಪಿಸಲು ಪ್ರಾಧ್ಯಾಪಕ ಟಿ.ಎನ್.ವಾಸುದೇವಮೂರ್ತಿ ಆಗ್ರಹ
Published 27 ಸೆಪ್ಟೆಂಬರ್ 2023, 22:10 IST
Last Updated 27 ಸೆಪ್ಟೆಂಬರ್ 2023, 22:10 IST
ಅಕ್ಷರ ಗಾತ್ರ

ಬೆಂಗಳೂರು: ‘ಫ್ರಾನ್ಸ್‌ ದೇಶದಲ್ಲಿ ವಿದ್ಯಾರ್ಥಿಗಳು ವೀಸಾ ಪಡೆಯಲು ಫ್ರೆಂಚ್ ಭಾಷಾ ಪರೀಕ್ಷೆಯನ್ನು ಪಾಸು ಮಾಡಬೇಕು. ಅಂತಹ ನೀತಿ ನಮ್ಮಲ್ಲಿಯೂ ತಂದರೆ ಭಾಷೆ ಬೆಳೆಯುವ ಜತೆಗೆ ಕನ್ನಡ ಕಲಿಸುವ ಮೇಷ್ಟ್ರುಗಳಿಗೆ ಕೆಲಸ ಸಿಗುತ್ತದೆ’ ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಟಿ.ಎನ್. ವಾಸುದೇವಮೂರ್ತಿ ತಿಳಿಸಿದರು. 

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಹಮ್ಮಿಕೊಂಡ ‘ಕನ್ನಡದ ನಾಳೆಗಾಗಿ ಮಾತುಕತೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. 

‘ಬೆಂಗಳೂರು ಸಿಲಿಕಾನ್ ಸಿಟಿ ಆಗಿದ್ದು ನಮ್ಮಿಂದಲೇ ಎಂದು ಅನ್ಯಭಾಷೆಯ ವಲಸಿಗರು ಹೇಳುತ್ತಾರೆ. ಆದರೆ, ಅವರು ಬೆಂಗಳೂರಿನ ಮಾಲಿನ್ಯಕ್ಕೆ ಕೊಟ್ಟ ಕೊಡುಗೆ ಮರೆಯಲಾಗದು. ಕನ್ನಡಿಗರು ಕನ್ನಡದ ಕೀಳರಿಮೆಯಿಂದ ಹೊರಬರಬೇಕು. ಕುವೆಂಪು ಅವರಿಗೂ ಆರಂಭದ ದಿನಗಳಲ್ಲಿ ಕನ್ನಡದ ಬಗೆಗೆ ಕೀಳರಿಮೆಯಿತ್ತು. ಅದರಿಂದ ಹೊರಬಂದಿದ್ದರಿಂದಲೇ ಕನ್ನಡದ ಉದ್ಧಾರಕ್ಕಾಗಿ ದೊಡ್ಡ ಕವಿಯಾಗಿ ಬೆಳೆದರು. ವಿಜ್ಞಾನ ಸೇರಿದಂತೆ ಎಲ್ಲಾ ವಿಷಯಗಳ ಪುಸ್ತಕಗಳು ಕನ್ನಡದಲ್ಲಿ ಲಭ್ಯವಾಗುವಂತೆ ಮಾಡಿದರು’ ಎಂದು ಹೇಳಿದರು. 

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪ್ರಕಾಶಮೂರ್ತಿ, ‘ಬೆಂಗಳೂರಿನಲ್ಲಿ ಕನ್ನಡ ಉಳಿದರೆ ಇಡೀ ಕರ್ನಾಟಕದಲ್ಲಿ ಕನ್ನಡ ಉಳಿಯುತ್ತದೆ. ಕನ್ನಡ ಚಳವಳಿಗಾರರನ್ನು ಕಳ್ಳರಂತೆ ಕಾಣುವ ಹಾಗೂ ನಡೆಸಿಕೊಳ್ಳುವುದನ್ನು ನಿಲ್ಲಿಸಬೇಕು. ವೈದ್ಯರು, ಅಧಿಕಾರಿಗಳು ಮೊದಲಾದವರು ತಮ್ಮ ಮಕ್ಕಳನ್ನು ತಮ್ಮದೇ ವೃತ್ತಿಗೆ ಸೇರಿಸಲು ಬಯಸುತ್ತಾರೆ. ಆದರೆ, ದೇಶದ ನಾಲ್ಕು ಆಧಾರ ಸ್ತಂಭಗಳಾದ ಶಿಕ್ಷಕರು, ಕೃಷಿಕರು, ಸೈನಿಕರು ಮತ್ತು ಕಾರ್ಮಿಕರು ತಮ್ಮ ಮಕ್ಕಳನ್ನು ತಮ್ಮ ವೃತ್ತಿಗೆ ತರಲು ಬಯಸುವುದು ಕಡಿಮೆ. ಸಮಾಜದಲ್ಲಿ ಈ ವೃತ್ತಿಗಳಿಗೆ ಗೌರವ ಕುಂದಿರುವುದೇ ಇದಕ್ಕೆ ಕಾರಣ’ ಎಂದು ಬೇಸರ ವ್ಯಕ್ತಪಡಿಸಿದರು. 

ಕನ್ನಡ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ದಾ.ಪಿ. ಆಂಜನಪ್ಪ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT