ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೂಲ್ ಪ್ರವೇಶ ತಡೆಯಲು ಕರವೇ ಒತ್ತಾಯ

Last Updated 14 ಏಪ್ರಿಲ್ 2023, 10:07 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಕ್ಕೆ ಅಮೂಲ್ ಹಾಲು ಮತ್ತು ಇತರ ಉತ್ಪನ್ನಗಳ ಪ್ರವೇಶ ತಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಿಗೆ ಗುರುವಾರ ಮನವಿ ಸಲ್ಲಿಸಿದರು.

‘ಮೊದಲ ಹಂತದಲ್ಲಿ ಇ–ಕಾಮರ್ಸ್ ಮೂಲಕ ಹಾಲು ಮತ್ತು ಮೊಸರು ಮಾರಾಟ ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ರೈತರಿಂದ ನೇರವಾಗಿ ಹಾಲು ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶವನ್ನೂ ಅಮೂಲ್ ಹೊಂದಿದೆ. ಇದನ್ನು ಅಮೂಲ್ ವ್ಯವಸ್ಥಾಪಕ ನಿರ್ದೇಶಕರೇ ಹೇಳಿದ್ದಾರೆ. ಈ ರೀತಿ ಮಾರುಕಟ್ಟೆ ವಿಸ್ತರಣೆಗೆ ಅಮೂಲ್ ಮುಂದಾದರೆ ತಡೆದುಕೊಳ್ಳುವ ಶಕ್ತಿ ಕೆಎಂಎಫ್‌ಗೆ ಇದೆಯೇ’ ಎಂದು ಕರವೇ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಪ್ರಶ್ನಿಸಿದ್ದಾರೆ.

‘ಗುಜರಾತಿನಲ್ಲಿ ಅಮೂಲ್‌ ಹೇಗೋ ರಾಜ್ಯದಲ್ಲಿ ನಂದಿನಿ ಹಾಗೆ. ಆದರೆ ಇಡೀ ಹಾಲಿನ ಉದ್ಯಮವನ್ನು ಕೇಂದ್ರ ಸರ್ಕಾರದ ಅಡಿಯಲ್ಲಿ ತರಲು ಕೇಂದ್ರ ಸಹಕಾರ ಇಲಾಖೆ ರಚಿಸಲಾಗಿದೆ. ಮಾತ್ರವಲ್ಲ ಅಂಬಾನಿ ರೀತಿಯ ಕಾರ್ಪೊರೇಟ್‌ ಉದ್ಯಮಿಗಳು ಈಗಾಗಲೇ ಅಮೂಲ್‌ ಜೊತೆ ನಿಕಟ ಸಂಪರ್ಕ ಸಾಧಿಸಿದ್ದಾರೆ. ನಂದಿನಿಯನ್ನು ಅಮೂಲ್‌ ಜತೆ ವಿಲೀನಗೊಳಿಸಿದರೆ ಕೇಂದ್ರದ ಮೂಲಕ ಕೆಎಂಎಫ್‌ ಕೂಡ ಅಂಬಾನಿ ಅಂತವರ ಕೈಗೆ ಹೋಗುತ್ತದೆ. ಈ ಬೆಳವಣಿಗೆ ಕುರಿತು ಕೆಎಂಎಫ್‌ ಅಧಿಕಾರಿಗಳಿಗೆ ಮಾಹಿತಿ ಇಲ್ಲವೇ’ ಎಂದು ಕೇಳಿದ್ದಾರೆ.

‘ಕೆಎಂಎಫ್‌ ಕನ್ನಡಿಗರ ಸಂಸ್ಥೆಯಾಗಿದ್ದು, ಕರ್ನಾಟಕದ ರೈತರು ಹಾಲು ನೀಡಿ ಪೊರೆದ ಸಂಸ್ಥೆ. ಅದು ಈಗಿರುವ ಸ್ವರೂಪದಲ್ಲೇ ಮುಂದುವರಿಯಬೇಕು. ಅಮೂಲ್‌ ಜತೆ ವಿಲೀನಗೊಳಿಸಲು ಮುಂದಾದರೆ ಕರ್ನಾಟಕದ ಜನತೆ ಸುಮ್ಮನಿರುವುದಿಲ್ಲ. ಜನರ ಜತೆಗೂಡಿ ಹೋರಾಟಕ್ಕೂ ಕರವೇ ಸಜ್ಜಾಗಿರುತ್ತದೆ’ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT