ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರಮ, ಶ್ರಮಿಕರ ಮಹತ್ವ ತಿಳಿಸಿಕೊಟ್ಟಿದ್ದು ಕಾರ್ಲ್‌ಮಾರ್ಕ್ಸ್‌: T R ಚಂದ್ರಶೇಖರ್‌

ಏಂಗೆಲ್ಸ್‌–200 ಮಾಲಿಕೆ ಸಮಾರೋಪದಲ್ಲಿ ಅರ್ಥಶಾಸ್ತ್ರಜ್ಞ ಟಿ.ಆರ್‌. ಚಂದ್ರಶೇಖರ್
Published 2 ಜೂನ್ 2024, 15:23 IST
Last Updated 2 ಜೂನ್ 2024, 15:23 IST
ಅಕ್ಷರ ಗಾತ್ರ

ಬೆಂಗಳೂರು: ದುಡಿಮೆ ಮತ್ತು ದುಡಿಮೆಗಾರರ ಮಹತ್ವವನ್ನು ಜಗತ್ತಿಗೆ ತಿಳಿಸಿಕೊಟ್ಟಿದ್ದು ಕಾರ್ಲ್‌ಮಾರ್ಕ್ಸ್‌ ಎಂದು ಅರ್ಥಶಾಸ್ತ್ರಜ್ಞ ಟಿ.ಆರ್‌. ಚಂದ್ರಶೇಖರ್‌ ತಿಳಿಸಿದರು.

ಕ್ರಿಯಾ ಮಾಧ್ಯಮ ಮತ್ತು ನವಕರ್ನಾಟಕ ಪ್ರಕಾಶನ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಏಂಗೆಲ್ಸ್‌–200 ಮಾಲಿಕೆ ಸಮಾರೋಪ, ‘ಬಂಡವಾಳ’ ಸಂಪುಟ–2 ಕೃತಿ ಹಾಗೂ ‘ಬಂಡವಾಳ ಸಂಪುಟ– ಪ್ರವೇಶಿಕೆ ಮತ್ತು ಗೈಡ್‌’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದುಡಿಮೆಗಾರರ ಶೋಷಣೆ, ಅನ್ಯಾಯದ ಬಗ್ಗೆ ಸೈದ್ಧಾಂತಿಕವಾಗಿ ಮತ್ತು ವಿವರವಾಗಿ ಕಾರ್ಲ್‌ಮಾರ್ಕ್ಸ್‌ ತಿಳಿಸಿದ್ದಾರೆ. ಇವತ್ತಿನ ಅಸಹನೀಯ ಅಸಮಾನತೆಯನ್ನು ಅರ್ಥ ಮಾಡಿಕೊಳ್ಳಲು ಇದು ಸಹಕಾರಿಯಾಗಿದೆ ಎಂದು ವಿವರಿಸಿದರು.

‘ನಮ್ಮ ದೇಶದಲ್ಲಿ 50 ಕೋಟಿ ಕಾರ್ಮಿಕರಿದ್ದಾರೆ. ಅದರಲ್ಲಿ ಸುಮಾರು 45 ಕೋಟಿ ಕಾರ್ಮಿಕರು ಅಸಂಘಟಿತ ವಲಯದಲ್ಲಿದ್ದಾರೆ. ಆದರೂ ಇಂದಿಗೂ ದುಡಿಮೆ ಮತ್ತು ದುಡಿಮೆಗಾರರ ಬಗ್ಗೆ ನಮ್ಮಲ್ಲಿ ಗೌರವವಿಲ್ಲ. ಬಡವರಿಗೆ ನೀಡುವ ಯೋಜನೆಗಳನ್ನು ಬಿಟ್ಟಿ ಎಂದು ಹೀಯಾಳಿಸಲಾಗುತ್ತಿದೆ. ಜಮೀನು, ನೀರು, ವಿದ್ಯುತ್‌ಗಳನ್ನು ಅತಿ ಕಡಿಮೆ ಬೆಲೆಗೆ ಪಡೆದು ಅನುಭವಿಸುತ್ತಿರುವ ಕಾರ್ಪೋರೇಟ್‌ ಕಂಪನಿಗಳು ನಿಜವಾಗಿ ಬಿಟ್ಟಿ ಪಡೆಯುತ್ತಿರುವುದು ಎಂಬುದು ಜನರಿಗೆ ಅರ್ಥವಾಗುತ್ತಿಲ್ಲ’ ಎಂದು ವಿಷಾದಿಸಿದರು.‌

ಚಿಂತಕ ಜಿ.ರಾಮಕೃಷ್ಣ ಮಾತನಾಡಿ, ‘ಕಾರ್ಲ್‌ಮಾರ್ಕ್ಸ್‌ ಅವರ ಆರ್ಥಿಕ ಚಿಂತನೆಗಳನ್ನು ಅರ್ಥ ಮಾಡಿಕೊಳ್ಳದೇ ಪೂಜಿಸುವುದರಿಂದ ಪ್ರಯೋಜನವಿಲ್ಲ. ಬಂಡವಾಳ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗೆಗಿನ ಕಾರ್ಲ್‌ಮಾರ್ಕ್ಸ್‌ ಅವರ ಚಿಂತನೆಗಳ ಬರಹಗಳನ್ನು ಫ್ರೆಡರಿಕ್‌ ಏಂಗೆಲ್ಸ್‌ ಸಂಪಾದನೆ ಮಾಡಿದ್ದರು. ಅದು ಕನ್ನಡಕ್ಕೆ ಅನುವಾದಗೊಂಡಿದ್ದು, ಎಲ್ಲರೂ ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.

ಅಮೆರಿಕ ಸಹಿತ ಯಾವುದೇ ದೇಶದಲ್ಲಿ ಆರ್ಥಿಕ ಕುಸಿತ ಉಂಟಾದಾಗ ಕಾರ್ಲ್‌ಮಾರ್ಕ್ಸ್‌ ಪುಸ್ತಕಗಳಿಗೆ ಬೇಡಿಕೆ ಬರುತ್ತದೆ. ಆರ್ಥಿಕ ಸಂಕಷ್ಟಗಳಿಗೆ ಕಾರಣ ಮತ್ತು ಪರಿಹಾರ ಒದಗಿಸುವ ಚಿಂತನೆಗಳು ಈ ಕೃತಿಯಲ್ಲಿವೆ ಎಂದರು.

‘ಇಂದಿನ ಬಂಡವಾಳಶಾಹಿಯನ್ನು ಅರ್ಥೈಸಲು ಬಂಡವಾಳದ ಓದು’ ವಿಚಾರ ಸಂಕಿರಣದಲ್ಲಿ ಪ್ರೊ. ವೆಂಕಟೇಶ್‌ ಆತ್ರೇಯ ದಿಕ್ಸೂಚಿ ಭಾಷಣ ಮಾಡಿದರು. ಚಿಂತಕರಾದ ರಾಜೇಂದ್ರ ಚೆನ್ನಿ, ರತಿ ರಾವ್‌, ಕೆ.ಎನ್. ಉಮೇಶ್‌ ವಿಚಾರ ಮಂಡನೆ ಮಾಡಿದರು. 

ಲೇಖಕರಾದ ಪಿ.ವಿ. ಕುಮಾರ್‌, ವಿ.ಎನ್‌. ಲಕ್ಷ್ಮೀನಾರಾಯಣ, ಕ್ರಿಯಾ ಮಾಧ್ಯಮ ಮತ್ತು ನವಕರ್ನಾಟಕ ಪ್ರಕಾಶನದ ಸಿದ್ದನಗೌಡ ಪಾಟೀಲ, ವಸಂತರಾಶಜ್ ಎನ್‌.ಕೆ., ವಿಮಲಾ ಕೆ.ಎಸ್‌. ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT