ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ನಿವೇಶನ ಹಿಂಪಡೆಯುವ ಪ್ರಯತ್ನ: ಕರ್ನಾಟಕ ದಲಿತ ಉದ್ದಿಮೆದಾರರ ಸಂಘ ಆರೋಪ

Published 13 ಫೆಬ್ರುವರಿ 2024, 15:51 IST
Last Updated 13 ಫೆಬ್ರುವರಿ 2024, 15:51 IST
ಅಕ್ಷರ ಗಾತ್ರ

ಬೆಂಗಳೂರು: ‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ 700ಕ್ಕೂ ಹೆಚ್ಚು ದಲಿತ ಉದ್ದಿಮೆದಾರರಿಗೆ ನೀಡಿರುವ ಕೈಗಾರಿಕಾ ನಿವೇಶನ ಅಥವಾ ಮಳಿಗೆಗಳನ್ನು ಹಿಂಪಡೆಯುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಕರ್ನಾಟಕ ದಲಿತ ಉದ್ದಿಮೆದಾರರ ಸಂಘ ಆರೋಪಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ. ಶ್ರೀನಿವಾಸನ್, ‘2018ರಲ್ಲಿ ದಲಿತರಿಗೆ ಕೈಗಾರಿಕಾ ನಿವೇಶನ ನೀಡುವ ಸಬ್ಸಿಡಿ ಪ್ರಮಾಣವನ್ನು ಶೇ 50 ಮತ್ತು ಶೇ 75ರಷ್ಟು ಹೆಚ್ಚಿಸಲಾಗಿತ್ತು. ನಂತರವೇ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿ ನಿವೇಶನಗಳನ್ನು ಪಡೆದಿದ್ದರು. ಮೂರು ವರ್ಷದೊಳಗೆ ಈ ನಿವೇಶನದಲ್ಲಿ ಯೋಜನೆ ಅನುಷ್ಠಾನಗೊಳಿಸಬೇಕೆಂದು ಕೆಐಎಡಿಬಿ ನಿಯಮವಿದೆ. ಆದರೆ, ಕೋವಿಡ್‌ ಕಾರಣದಿಂದ ಉದ್ದಿಮೆದಾರರು ಇಲ್ಲಿ ಯಾವುದೇ ಯೋಜನೆಗಳು ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಅಂತಹ ಉದ್ದಿಮೆದಾರರಿಗೆ ಕಾಲವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

‘2009ರಿಂದ ಜಾರಿಯಲ್ಲಿರುವ ನಿಯಮದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ದಿಮೆದಾರರಿಗೆ ಶೇ 22.65 ಹಾಗೂ 2014ರ ನಿಯಮದಂತೆ ಶೇ 25ರಷ್ಟು ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಹಂಚಿಕೆ ಮಾಡುವ ಸರ್ಕಾರದ ನೀತಿಯನ್ನು ಕೆಐಎಡಿಬಿ ಉಲ್ಲಂಘಿಸಿದೆ. ಇದುವರೆಗೆ ನಿಯಮಬಾಹಿರವಾಗಿ ಒಟ್ಟು 1034 ಎಕರೆ ಭೂಮಿಯನ್ನು ಬೇರೆಯವರಿಗೆ ಹಂಚಿಕೆ ಮಾಡಲಾಗಿದೆ. ಹಿಂದಿನ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿ ಲ್ಯಾಂಡ್‌ ಆಡಿಟಿಂಗ್‌ ಮಾಡಿಸಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ಲಭ್ಯವಿರುವ ನಿವೇಶನಗಳನ್ನು ಮೀಸಲಾತಿ ಪ್ರಮಾಣಕ್ಕೆ ಕಡಿಮೆಯಾಗದಂತೆ ಹಂಚಿಕೆ ಮಾಡಬೇಕೆಂದು ಸೂಚಿಸಿದ್ದರೂ ಪಾಲನೆಯಾಗಿಲ್ಲ’ ಎಂದು ದೂರಿದರು.

‘ಇತ್ತೀಚೆಗೆ ಹಂಚಿಕೆಗೆ ಲಭ್ಯವಿರುವ ಒಟ್ಟು ಜಮೀನನ್ನು ಇಂಡಸ್ಟ್ರಿಯಲ್ ಬಲ್ಕ್‌ ಅಲಾಟ್‌ಮೆಂಟ್‌, ಕಮರ್ಷಿಯಲ್‌ ಮತ್ತು ರೆಸಿಡೆನ್ಸಿಯಲ್ ಅಮ್ಯುನಿಟಿ ಎಂದು ಮರು ನಾಮಕರಣ ಮಾಡಲಾಗಿದೆ. ಅಂತಹ ಜಮೀನಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಸೌಲಭ್ಯ ನೀಡದೇ ವಂಚಿಸಲಾಗುತ್ತಿದೆ. ದೊಡ್ಡ ಕಂಪನಿಗಳಿಗೆ ನೂರಾರು ಎಕರೆ ಜಮೀನು ಬಲ್ಕ್‌ ಅಲಾಟ್‌ಮೆಂಟ್‌ ಮಾಡುವ ಪ್ರಕ್ರಿಯೆ ಕೆಐಎಡಿಬಿಯಲ್ಲಿ ಚಾಲ್ತಿಯಲ್ಲಿದೆ’ ಎಂದು ಹೇಳಿದರು.

ಸರ್ಕಾರ ಕೆಐಎಡಿಬಿ ಪಾವತಿಸಬೇಕಿರುವ ₹806 ಕೋಟಿ ಬಾಕಿ ಉಳಿಸಿಕೊಂಡಿದೆ. ಆದ್ದರಿಂದ, ಈ ಯೋಜನೆ ಮುಂದುವರಿಸಬೇಕಾದರೆ ಮುಂದಿನ ಬಜೆಟ್‌ನಲ್ಲಿ ₹600 ಕೋಟಿ ಅನುದಾನ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಸದಸ್ಯರಾದ ಆದರ್ಶ ಮತ್ತು ಅಶೋಕ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT